ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳಿಕೋಟೆ | ಡೋಣಿ ಸೇತುವೆ ಕುಸಿಯುವ ಭೀತಿ; ವಾಹನ ಸಂಚಾರ ನಿಷೇಧ

Last Updated 27 ಸೆಪ್ಟೆಂಬರ್ 2021, 16:29 IST
ಅಕ್ಷರ ಗಾತ್ರ

ತಾಳಿಕೋಟೆ(ವಿಜಯಪುರ): ಇಲ್ಲಿನ ವಿಜಯಪುರ ರಸ್ತೆಯಲ್ಲಿ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಬಿರುಕು ಬಿಟ್ಟು ಕುಸಿಯುವ ಭೀತಿ ಎದುರಾಗಿದ್ದು, ಈ ಮಾರ್ಗದಲ್ಲಿ ಸೋಮವಾರ ಸಂಜೆಯಿಂದ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಎರಡು– ಮೂರು ದಿನಗಳಿಂದ ಸೇತುವೆ ಕುಸಿಯುವ ಲಕ್ಷಣ ಕಂಡುಬಂದಿರುವುದನ್ನು ಗಮನಿಸಿದ್ದ ಪ್ರಯಾಣಿಕರು ಸೋಮವಾರ ಅಧಿಕಾರಿಗಳ ಗಮನಕ್ಕೆ ತಂದರು.ಮಾಹಿತಿ ಆಧರಿಸಿ ಸೋಮವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ರಸ್ತೆಯನ್ನು ಬಂದ್ ಮಾಡಲು ತಿರ್ಮಾನಿಸಿದರು. ರಾತ್ರಿಯೇ ಬ್ಯಾರಿಕೇಡ್ ಹಾಕಿ ರಸ್ತೆಯನ್ನು ಬಂದ್ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಪರ್ಯಾಯ ರಸ್ತೆ ಮೂಲಕ ವಾಹನಗಳ ಸಂಚಾರಕ್ಕೆ ಸೂಚಿಸಿದರು. ಈ ಮಾರ್ಗವಾಗಿ ವಿವಿಧ ನಗರ,ಪಟ್ಟಣ, ಹಳ್ಳಿಗಳಿಗೆ ತೆರಳುವ ಪ್ರಯಾಣಿಕರು ಪರದಾಡುವಂತಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ, ಸೇತುವೆ ಪಕ್ಕದಲ್ಲಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಲು ತಕ್ಷಣಕ್ಕೆ ಕಾರ್ಯ ಆರಂಭಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ಪ್ರಮುಖ ಸಂಪರ್ಕ ಸೇತುವೆ ಇದಾಗಿದ್ದು, ಪಟ್ಟಣದಿಂದ ಜಿಲ್ಲಾ ಕೇಂದ್ರ, ಪ್ರಮುಖ ತಾಲ್ಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇಲ್ಲದಂತಾಗಿದೆ.

ಹಡಗಿನಾಳ, ಮೂಕಿಹಾಳ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೆಳ ಮಟ್ಟದ ಸೇತುವೆ ಕೂಡ ಡೋಣಿ ನದಿ ಪ್ರವಾಹದಿಂದ ಜಲಾವೃತವಾಗಿದೆ. ಅಲ್ಲದೇ, ಈ ರಸ್ತೆ ಹದಗೆಟ್ಟಿದೆ. ಇದರಿಂದ ವಿಜಯಪುರಕ್ಕೆ ಹೋಗುವ ವಾಹನಗಳು ದೇವರ ಹಿಪ್ಪರಗಿ ಮೂಲಕ ಸಂಚರಿಸಬೇಕಾಗಿದೆ. ಪಕ್ಕದ ಮುದ್ದೇಬಿಹಾಳಕ್ಕೆ ಹೋಗಲು ಕೊಡೆಕಲ್ಲ– ನಾರಾಯಣಪುರ ರಸ್ತೆಯನ್ನು ಅವಲಂಭಿಸಬೇಕಾಗಿದೆ.

ಎರಡು ದಶಕಗಳ ಹಿಂದೆ ಡೋಣಿ ನದಿಗೆ ಅಡ್ಡಲಾಗಿ ಎರಡು ಸೇತುವೆಗಳನ್ನು ನಿರ್ಮಾಣ ಮಾಡಲಾಗಿತ್ತು. ಅದರಲ್ಲಿ ಒಂದು ಸೇತುವೆಯಲ್ಲಿ 2014ರಲ್ಲಿ ಬಿರುಕು ಕಾಣಿಸಿತ್ತು. ಅದನ್ನು ದುರಸ್ಥಿಗೊಳಿಸಿತ್ತು. ಈಗ ಎರಡನೇ ಸೇತುವೆ ಬುಡದಲ್ಲಿ ಕಾಂಕ್ರೀಟ್ ಕಿತ್ತು ಹೋಗಿದ್ದು ಕಬ್ಬಿಣದ ರಾಡುಗಳು ಹೊರ ಬಂದಿದ್ದರಿಂದ ಸೇತುವೆ ಕುಸಿತ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT