ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ವಿದ್ಯಾರ್ಥಿಗೆ ಆರ್ಥಿಕ ನೆರವು

ವೈದ್ಯನಾಗುವ ಬಡವನ ಕನಸಿಗೆ ಆಸರೆಯಾದ ಶಾಸಕ ಎಂ.ಬಿ.ಪಾಟೀಲ
Last Updated 10 ಡಿಸೆಂಬರ್ 2022, 16:12 IST
ಅಕ್ಷರ ಗಾತ್ರ

ವಿಜಯಪುರ: ಆರ್ಥಿಕ ಸಂಕಷ್ಟದಿಂದ ವೈದ್ಯಕೀಯ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗದೇ ಇದ್ದ ವಿದ್ಯಾರ್ಥಿಗೆ ಬಿ.ಎಲ್.ಡಿ.ಇ. ಸಂಸ್ಥೆಯ ಹಾಗೂ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲಹಣಕಾಸು ನೆರವು ನೀಡಿದರು.

ತಿಕೋಟಾ ತಾಲ್ಲೂಕಿನ ಬಾಬಾನಗರದ ವಿದ್ಯಾರ್ಥಿ ಯಲ್ಲಾಲಿಂಗ ಭೀಮರಾಯ ಜೈನಾಪುರ ವೈದ್ಯನಾಗುವ ಕನಸು ಹೊಂದಿ ಶ್ರಮಪಟ್ಟು ಓದಿ ನೀಟ್ ಪರೀಕ್ಷೆ ಪಾಸಾಗಿದ್ದರು. ಅಲ್ಲದೇ, ಸರ್ಕಾರಿ ಕೋಟಾದಲ್ಲಿ ಮಂಡ್ಯ ಜಿಲ್ಲೆಯ ಬೆಳ್ಳೂರ ತಾಲ್ಲೂಕಿನ ನಾಗಮಂಗಲದ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಸೀಟು ಪಡೆದಿದ್ದರು. ಆದರೆ, ಪ್ರವೇಶಕ್ಕೆ ಅಗತ್ಯವಾದ ಹಣ ಹೊಂದಿಸಲಾಗದೇ ವೈದ್ಯನಾಗುವ ಕನಸು ನನಸಾಗದೇ ಪರದಾಡುತ್ತಿದ್ದರು.

ಕೂಡಲೇ ಸ್ಪಂದಿಸಿದ ಎಂ.ಬಿ.ಪಾಟೀಲರು, ತಮ್ಮ ನಿವಾಸಕ್ಕೆ ಆಗಮಿಸಿದ ವಿದ್ಯಾರ್ಥಿ ಮತ್ತು ಆತನ ತಂದೆಗೆ ಎಂಬಿಬಿಎಸ್ ಪ್ರವೇಶಕ್ಕೆ ಅಗತ್ಯವಾಗಿರುವ ಮೊದಲ ಕಂತಿನ ಹಣ ₹3,43,096 ಮೊತ್ತದ ಚೆಕ್ ವಿತರಿಸಿದರು. ಅಲ್ಲದೇ, ಚನ್ನಾಗಿ ಓದಿ ಉತ್ತಮ ಅಂಕಗಳಿಸಿ ಆದರ್ಶ ವೈದ್ಯರಾಗಿ ಬಡವರ ಸೇವೆ ಮಾಡವಂತೆ ಕಿವಿಮಾತು ಹೇಳಿದರು.

ಬಿ.ಎಲ್.ಡಿ.ಇ.ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್.ಬಿ.ಕೊಟ್ನಾಳ, ವಿದ್ಯಾರ್ಥಿ ತಂದೆ ಭೀಮರಾಯ ಜೈನಾಪುರ, ಬಾಬಾನಗರದ ಮುಖಂಡರಾದ ಸಿದ್ಧು ಗೌಡನ್ನವರ, ಸಿದಗೊಂಡ ರುದ್ರಗೌಡರ, ರಾಜು ಪೂಜೇರಿ, ಅಶೋಕ ಹಟ್ಟಿ, ಬಾಹುಬಲಿ ಪಂಡಿತ, ವಿಠಲ ಪೂಜಾರಿ, ಕರೆಪ್ಪ ಕಡಪಟ್ಟಿ ಉಪಸ್ಥಿತರಿದ್ದರು.

ಚೆಕ್ ಪಡೆದ ಬಳಿಕ ಮಾತನಾಡಿದ ಎಂಬಿಬಿಎಸ್ ವಿದ್ಯಾರ್ಥಿ ಯಲ್ಲಾಲಿಂಗ ಭೀ ಜೈನಾಪೂರ, ನಮ್ಮದು ಬಡ ಕುಟುಂಬ. ಒಂದು ಎಕರೆ ಜಮೀನಿದೆ. ನಾನು ಎಸ್.ಎಸ್.ಎಲ್.ಸಿ.ವರೆಗೆ ಸರ್ಕಾರಿ ಶಾಲೆಯಲ್ಲಿ ಓದಿ ಖಾಸಗಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪಾಸಾಗಿದ್ದೇನೆ. ಎಂಬಿಬಿಎಸ್ ಓದಿ ವೈದ್ಯನಾಗುವ ಕನಸು ಹೊಂದಿದ್ದೆ. ಆದರೆ, ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಇರದ ಕಾರಣ ಕಾಲೇಜಿಗೆ ಪ್ರವೇಶ ಪಡೆಯಲು ಸಾಧ್ಯವಿರಲಿಲ್ಲ. ಬೇರೆ ಏನಾದರೂ ಓದು ಎಂದು ಮನೆಯವರು ಸಲಹೆ ನೀಡಿದ್ದರು ಎಂದರು.

ಗ್ರಾಮದ ಮುಖಂಡರು ಶಾಸಕರಾದ ಎಂ.ಬಿ.ಪಾಟೀಲರ ಬಳಿ ನಮ್ಮನ್ನು ಕರೆದುಕೊಂಡು ಬಂದು ನೆರವು ನೀಡುವಂತೆ ಮನವಿ ಮಾಡಿದರು. ಶಾಸಕರು ನನಗೆ ಬೆನ್ನೆಲುಬಾಗಿ ನಿಲ್ಲುವುದಾಗಿ ತಿಳಿಸಿ ಎಂಬಿಬಿಎಸ್ ಕೋರ್ಸ್‌ನ ವೆಚ್ಚವನ್ನು ಭರಿಸುವುದಾಗಿ ಹೇಳಿ ಈಗ ಚೆಕ್ ನೀಡಿದ್ದಾರೆ. ಇದರಿಂದ ನನ್ನ ಕನಸು ನನಸಾಗುತ್ತಿದೆ. ಶಾಸಕರಿಗೆ ಚಿರಋಣಿಯಾಗಿರುತ್ತೇನೆ. ಅವರ ಆಶಯದಂತೆ ಉತ್ತಮ ವೈದ್ಯನಾಗುತ್ತೇನೆ ಎಂದರು.

ವಿದ್ಯಾರ್ಥಿ ತಂದೆ ಭೀಮರಾಯ ಜೈನಾಪುರ ಮಾತನಾಡಿ, ಮಗ ನೀಟ್ ಪಾಸಾಗಿದ್ದರೂ ಅವನನ್ನು ವೈದ್ಯನನ್ನಾಗಿ ಮಾಡುವ ಆರ್ಥಿಕ ಶಕ್ತಿ ನಮ್ಮಲ್ಲಿರಲಿಲ್ಲ. ಬೇರೆ ಕೆಲಸ ಮಾಡು ಎಂದು ಹೇಳಿದ್ದೇವು ಇದರಿಂದ ಬೇಸರಗೊಂಡ ಮಗ ಮನೆಯಲ್ಲಿ ಅಳುತ್ತ ಕುಳಿತಿದ್ದ. ಶಾಸಕರು ನೆರವು ನೀಡುವ ಮೂಲಕ ನಮ್ಮ ಪಾಲಿನ ದೇವರಾಗಿದ್ದಾರೆ. ಮಗ ಡಾಕ್ಟರ್ ಆಗುತ್ತಿರುವುದು ನಮಗೆಲ್ಲರಿಗೂ ಖುಷಿ ನೀಡಿದೆ ಎಂದು ತಿಳಿಸಿದರು.

***

ಯಲ್ಲಾಲಿಂಗ ಜೈನಾಪುರ ಪ್ರತಿಭಾವಂತ ವಿದ್ಯಾರ್ಥಿ. ಆದರೆ, ಆರ್ಥಿಕ ಸಂಕಷ್ಟ ಇತ್ತು. ಶಾಸಕರು ನೆರವು ನೀಡುವ ಮೂಲಕ ಬಡ ಕುಟುಂಬಕ್ಕೆ ಆಸರೆ ನೀಡಿರುವುದು ಶ್ಲಾಘನೀಯ.
–ಎಸ್‌.ಎನ್‌.ತಡಲಗಿ, ಮುಖ್ಯ ಶಿಕ್ಷಕ, ಕಿರಿಯ ಪ್ರಾಥಮಿಕ ಶಾಲೆ, ಹಿರೇಕುರುಬರ ವಸ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT