ಭಾನುವಾರ, ಸೆಪ್ಟೆಂಬರ್ 26, 2021
23 °C
ಏಳು ದಿನ ಆಚರಣೆಗೆ ಮಾತ್ರ ಜಿಲ್ಲಾಡಳಿತ ಅನುಮತಿ; ಒಂಬತ್ತು ದಿನಗಳ ಅವಕಾಶಕ್ಕೆ ಹೆಚ್ಚಿದ ಒತ್ತಡ

ಗಣೇಶ ವಿಸರ್ಜನೆ ದಿನ: ಮೂಡದ ಒಮ್ಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯಲ್ಲಿ ಗಣೇಶೋತ್ಸವವನ್ನು ಗರಿಷ್ಠ ಏಳು ದಿನಗಳ ವರೆಗೆ ಮಾತ್ರ ಆಚರಿಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ಆದರೆ, ವಿಜಯಪುರದ ಶ್ರೀ ಗಜಾನನ ಉತ್ಸವ ಮಹಾಮಂಡಳಿಯು ಒಂಬತ್ತು ದಿನ ಗಣೇಶೋತ್ಸವ ಆಚರಿಸಲಾಗುವುದು ಎಂದು ಈಗಾಗಲೇ ಹೇಳಿಕೆ ನೀಡಿದೆ. ಇದರಿಂದ ಜಿಲ್ಲಾಡಳಿತ ಮತ್ತು ಗಣೇಶೋತ್ಸವ ಮಂಡಳಿಗಳ ನಡುವೆ ಒಮ್ಮತ ಮೂಡದೇ ಇರುವುದರಿಂದ ಸಂಘರ್ಷ ಏರ್ಪಡುವ ಸಾಧ್ಯತೆ ದಟ್ಟವಾಗಿದೆ.

ಒಂಬತ್ತು ದಿನ ನಿಶ್ಚಿತ: ಜಿಲ್ಲಾಡಳಿತ ಐದು ದಿನಗಳ ಬದಲಿಗೆ ಏಳು ದಿನ ಅವಕಾಶ ಕಲ್ಪಿಸಿದೆ. ಆದರೆ, ನಗರದಲ್ಲಿ ನಾವು ಮೊದಲಿನಿಂದಲೂ ಒಂಬತ್ತು ದಿನಗಳ ಕಾಲ ಗಣೇಶೋತ್ಸವ ಆಚರಿಸುತ್ತ ಬಂದಿದ್ದೇವೆ. ಈ ಬಾರಿಯೂ ಅವಕಾಶ ಕಲ್ಪಿಸಬೇಕು ಎಂದು ಗಜಾನನ ಉತ್ಸವ ಮಹಾಮಂಡಳದ ಅಧ್ಯಕ್ಷ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಒಂಬತ್ತು ದಿನ ಆಚರಣೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡುತ್ತೇವೆ. ಅನುಮತಿ ನೀಡುವ ವಿಶ್ವಾಸ ಇದೆ. ಒಂದು ವೇಳೆ ಅನುಮತಿ ನೀಡದಿದ್ದರೂ ಒಂಬತ್ತು ದಿನ ಆಚರಿಸುವುದು ನಿಶ್ಚಿತ ಎಂದು ಹೇಳಿದ್ದಾರೆ.

ಏಳು ದಿನ ಮಾತ್ರ: ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಜರುಗಿದ ಪೂರ್ವಭಾವಿ ಸಭೆಯಲ್ಲಿ ಗಣೇಶ ಹಬ್ಬದ ಆಚರಣೆಯನ್ನು 5 ದಿನಗಳ ಬದಲಾಗಿ 7 ದಿನಗಳ ವರೆಗೆ ಆಚರಿಸಲು ಅನುಮತಿ ನೀಡುವಂತೆ ಕೆಲವು ಸಂಘ,ಸಂಸ್ಥೆಗಳು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

ಎಷ್ಟು ದಿನಗಳ ಅವಧಿಗೆ ಗಣೇಶ ಹಬ್ಬವನ್ನು ಆಚರಿಸಬೇಕು ಎಂಬ ಬಗ್ಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಕೋವಿಡ್ ಪಾಸಿಟಿವ್‌ ಪ್ರಕರಣಗಳ ದರ ಮತ್ತು ಸ್ಥಳೀಯ ಕೋವಿಡ್ ಪರಿಸ್ಥಿತಿಯನ್ನು ಪರಿಗಣಿಸಿ ನಿರ್ಧರಿಸಲು ಸರ್ಕಾರ ಸೂಚಿಸಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮತ್ತು ಜಿಲ್ಲೆಯ ಧನಾತ್ಮಕ ಪ್ರಕರಣಗಳ ದರವು ಕಡಿಮೆ ಇರುವುದರಿಂದ ಗಣೇಶೋತ್ಸವ ಆಚರಣೆಯನ್ನು 5 ದಿನಗಳ ಬದಲಾಗಿ ಗರಿಷ್ಠ 7 ದಿನಗಳ ವರೆಗೆ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಆಚರಿಸಲು ಅನುಮತಿ ನೀಡಲಾಗಿದೆ ಎಂದರು.

ಗಣೇಶ ಮೂರ್ತಿಗಳನ್ನು ವಿಸರ್ಜಿಸುವಾಗ ಯಾವುದೇ ಕಾರಣಕ್ಕೂ ಮೆರವಣಿಗೆ ಮಾಡುವಂತಿಲ್ಲ ಎಂದು ಅವರು ಸೂಚಿಸಿದ್ದಾರೆ.

ಮನೆಗಳಲ್ಲಿ ವಿಗ್ರಹಗಳನ್ನು ಪೂಜಿಸಿದವರು ಮನೆಯಲ್ಲಿಯೇ ವಿಸರ್ಜಿಸಬೇಕು ಮತ್ತು ಸರ್ಕಾರಿ, ಖಾಸಗಿ ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಅತೀ ಕನಿಷ್ಠ ಜನಸಂಖ್ಯೆಯೊಂದಿಗೆ ಸಮೀಪವಾಗುವಂತಹ ಮಾರ್ಗಗಳನ್ನು ಬಳಸಿಕೊಂಡು ಮಹಾನಗರ ಪಾಲಿಕೆ, ಜಿಲ್ಲಾಡಳಿತ ಹತ್ತಿರದ ಸ್ಥಳೀಯ ಸಂಸ್ಥೆಗಳ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ನಿರ್ಮಿಸಲಾದ ಹೊಂಡ ಅಥವಾ ಮೊಬೈಲ್ ಬ್ಯಾಂಕ್‌ಗಳಲ್ಲಿ ಅಥವಾ ಕೃತಕ ವಿಸರ್ಜನಾ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಬೇಕು ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಆದೇಶ, ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ 2005ರ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು