ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಠಾಣಕ್ಕೆ ಗೋಪಾಲ ಕಾರಜೋಳ ಹೆಸರು ಘೋಷಣೆ

ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅದ್ಧೂರಿ; ಬಿಜೆಪಿ ಗೆಲುವು ಖಚಿತ
Last Updated 20 ಮಾರ್ಚ್ 2023, 16:37 IST
ಅಕ್ಷರ ಗಾತ್ರ

ವಿಜಯಪುರ: ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಅದ್ದೂರಿ ಮೆರವಣಿಗೆ ನಡೆಯಿತು‌.

ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ನಾಗಠಾಣ ಕ್ಷೇತ್ರದಲ್ಲಿ ಸಚಿವ ಗೋವಿಂದ ಕಾರಜೋಳ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರ ಪುತ್ರ ಗೋಪಾಲ ಕಾರಜೋಳ ಈ ಬಾರಿ ನೂರಕ್ಕೆ ನೂರು ಗೆಲ್ಲಲಿದ್ದಾರೆ ಎಂದು ಹೇಳುವ ಮೂಲಕ ನಾಗಠಾಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಗೊಂದಲ ಮತ್ತು ಕುತೂಹಲಕ್ಕೆ ತೆರೆ ಎಳೆದರು.

ಡಬಲ್ ಎಂಜಿನ್ ಸರ್ಕಾರವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಬೇಕು. ಈ ನಿಟ್ಟಿನಲ್ಲಿ ರಾಜ್ಯದ 224 ಕ್ಷೇತ್ರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಂಚರಿಸಿದ್ದು, ಮಾರ್ಚ್‌ 25ರಂದು ದಾವಣಗೆರೆಯಲ್ಲಿ ಯಾತ್ರೆಯ ಸಮಾರೋಪ ನಡೆಯಲಿದೆ. ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ ಎಂದರು.

ಮೊದಲು ಭಾರತವನ್ನು ಹಾವಾಡಿಗರ, ಬಡವರ ದೇಶ ಎನ್ನುತ್ತಿದ್ದರು ಆದರೆ, ಭಾರತ ಇಂದು ವಿಶ್ವಗುರುವಾಗುವತ್ತೆ ಹೊರಟಿದೆ. ಇದಕ್ಕೆ ಮೋದಿ ಕಾರಣ ಎಂದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಬಿಜೆಪಿ ಮುಖಂಡರಾದ ಉಮೇಶ ಕಾರಜೋಳ, ಗೋಪಾಲ ಕಾರಜೋಳ ಇರುವ ವಾಹನವನ್ನು ವಿವಿಧ ವಾದ್ಯ, ಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು‌. ಬಿಜೆಪಿ ಸಾವಿರಾರು ಜನ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು‌.

ನಾಗಠಾಣದಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಮೈ ಮರೆತಿದ್ದರಿಂದ ಕೆಲವೇ ಮತಗಳ ಅಂತರದಿಂದ ಬಿಜೆಪಿಗೆ ಸೋಲಾಗಿದೆ. ಅದಕ್ಕೆ ಈ ಬಾರಿ ಬಿಜೆಪಿಗೆ ಗೆಲ್ಲಿಸಿ, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಬೆಂಬಲಿಸಿ, ಪ್ರಧಾನಿ ಮೋದಿ ಅವರ ಕೈ ಬಲಪಡಿಸಿ ಎಂದು ಮನವಿ ಮಾಡಿದರು.

ಬಿಜೆಪಿ ಬೆಳಗಾವಿ ವಿಭಾಗೀಯ ಪ್ರಭಾರಿ ಚಂದ್ರಶೇಖರ ಕವಟಗಿ ಮಾತನಾಡಿ, ಬಿಜೆಪಿಯಿಂದ ನಾಗಠಾಣ ಅಭಿವೃದ್ಧಿಯಾಗಲಿದೆ. ನಮ್ಮ ಅಭ್ಯರ್ಥಿಯಾದ ಗೋಪಾಲ ಕಾರಜೋಳ ಅವರನ್ನು ನೀವು ಬೆಂಬಲಿಸುತ್ತಿರಿ ಅನ್ನೊ ನಂಬಿಕೆಯಿದೆ ಎಂದು ಹೇಳುವ ಮೂಲಕ ಗೋಪಾಲ ಅವರ ಸ್ಪರ್ಧೆಯನ್ನು ಖಚಿತ ಪಡಿಸಿದರು.

ಮೆರವಣಿಗೆಯಲ್ಲಿ ಭಾಗವಹಿಸಿರುವವರ ಸಂಖ್ಯೆ ನೋಡಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾಗಠಾಣದಲ್ಲಿ ಬಿಜೆಪಿ ಬಾವುಟ ಹಾರಲಿರುವುದು ಖಚಿತವಾಗಿದೆ ಎಂದರು.

ಕಾಣಿಸಿಕೊಳ್ಳದ ಅಕಾಂಕ್ಷಿಗಳು:

ನಾಗಠಾಣ ಮೀಸಲು ಮತಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಗೋಪಾಲ ಕಾರಜೋಳ ಅವರನ್ನು ಹೊರತು ಪಡಿಸಿ ಇನ್ನುಳಿದ ಯಾವ ಅಭ್ಯರ್ಥಿಗಳು ವಿಜಯ ಸಂಕಲ್ಪಯಾತ್ರೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಸಂಸದ ರಮೇಶ ಜಿಗಜಣಿಗಿ, ಮಹೇಂದ್ರ ಕುಮಾರ ನಾಯಕ್ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT