ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಗಿ ಶಾಲೆಯಲ್ಲಿ ಎಸ್‌ಡಿಎಂಸಿ ಇಲ್ಲ; 1–5ನೇ ತರಗತಿ ಇಂಗ್ಲಿಷ್‌ಗೆ ಒಬ್ಬರೇ ಶಿಕ್ಷಕ

ಮಾದರಿ ಶಾಲೆಗೆ ಸೌಲಭ್ಯಗಳದ್ದೇ ಕೊರತೆ
Last Updated 24 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಕಾಳಗಿ: ಪಟ್ಟಣದಲ್ಲಿ 1954ರಲ್ಲಿ ಸ್ಥಾಪಿತ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಈಗ ಹೆಸರಿಗಷ್ಟೇ ‘ಮಾದರಿ’ಯಾಗಿದೆ. 1 ರಿಂದ 8ನೇ ತರಗತಿವರೆಗಿನ ಕನ್ನಡ ಮಾಧ್ಯಮದ ಈ ಶಾಲೆಯಲ್ಲಿ ಪ್ರಸ್ತುತ ಒಟ್ಟು 192 ಬಾಲಕರು, 219 ಬಾಲಕಿಯರು ಅಭ್ಯಾಸ ಮಾಡುತ್ತಾರೆ. 17 ಶಿಕ್ಷಕರಲ್ಲಿ ಇಬ್ಬರು ವೈದ್ಯಕೀಯ ರಜೆಯಲ್ಲಿದ್ದಾರೆ. ಮುಖ್ಯಶಿಕ್ಷಕರ ಹುದ್ದೆ ಒಂದು ವರ್ಷದಿಂದ ಖಾಲಿ ಉಳಿದಿದೆ.

1ರಿಂದ 5ನೇ ತರಗತಿವರೆಗೆ ಇಂಗ್ಲಿಷ್ ಬೋಧನೆಗೆ ಪ್ರತ್ಯೇಕ ಶಿಕ್ಷಕರಿಲ್ಲ. ಈ ಶಾಲೆಯ ಶಿಕ್ಷಕರೇ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾಳಗಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದಾರೆ. ಶಾಲೆಯಲ್ಲಿ 400ಕ್ಕೂ ಹೆಚ್ಚು ಮಕ್ಕಳಿದ್ದರೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ರಚನೆ 3 ವರ್ಷಗಳಿಂದ ನನೆಗುದಿದೆ ಬಿದ್ದಿದೆ.

ಕಾಯಂ ಕರ್ಮಚಾರಿ ಇರದ ಕಾರಣ ಸ್ಥಳೀಯ ವೃದ್ಧೆಯೊಬ್ಬರು ಕೈಲಾದಷ್ಟು ಕಸ ಗುಡಿಸುತ್ತಿದ್ದಾರೆ. ಸಿಆರ್‌ಸಿ ಕಟ್ಟಡ ಹಿಂಭಾಗದ ಶೌಚಾಲಯ ನೀರು, ನಿರ್ವಹಣೆ ಇಲ್ಲದೆ ನಾರುತ್ತಿದೆ.

ಸ್ಪರ್ಧಾತ್ಮಕ ಯುಗದಲ್ಲಿದ್ದರೂ ಇಲ್ಲಿಯ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಮರೀಚಿಕೆಯಾಗಿದೆ. ಸ್ಮಾರ್ಟ್ ಕ್ಲಾಸ್ ಪಾಠ ಇದ್ದೂ ಇಲ್ಲದಂತಿದೆ. ಹೈಟೆಕ್ ಶೌಚಾಲಯ ಮಂಜೂರಾಗಿದ್ದರೂ ಅದು ಹೆಸರಿಗೆ ಮಾತ್ರ ಎಂಬಂತಿದೆ. ಮಕ್ಕಳಿಗೆ, ಶಿಕ್ಷಕರಿಗೆ ಕುಡಿಯಲು ನಲ್ಲಿ (ನಳ) ವ್ಯವಸ್ಥೆ ಇಲ್ಲ. ಹೀಗಾಗಿ ಮುಖ್ಯಶಿಕ್ಷಕರ ಕೊಠಡಿಗೆ ಹೋಗಿ, ಅಲ್ಲಿ ಶುದ್ಧ ನೀರು ಕುಡಿಯಬೇಕು.

ಶಾಲೆ ಸುತ್ತಲು ಕಾಂಪೌಂಡ್ ಇದ್ದರೂ ಹೊರಗಿನಿಂದ ಬಂದ ಜನರಿಗೆ ಪ್ರವೇಶದ್ವಾರದಲ್ಲಿ ಹಂದಿಗಳ ದರ್ಶನ ಮೊದಲು ಆಗುತ್ತದೆ. ಹಂದಿಗಳ ಓಡಾಟ ಹೆಚ್ಚಿದೆ. ನೆಲಕ್ಕುರುಳಿರುವ ಸಾರ್ವಜನಿಕ ನೀರಿನ ಟ್ಯಾಂಕ್‌ನ ಕಳೇಬರದ ಸಿಮೆಂಟ್ ಕಲ್ಲುಗಳ ರಾಶಿಗೆ ಮತ್ತು ಹಿಂಭಾಗದಲ್ಲಿ ಗಿಡಗಂಟಿಗಳು ಬೆಳೆದಿವೆ.

‘ಸೌಲಭ್ಯ ಕೊರತೆ, ನಿರಾಸಕ್ತಿಯಿಂದ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಶಾಲೆಯು ನಲುಗಿದೆ. ಇದು ಮಕ್ಕಳ ಶಿಕ್ಷಣದ ಮೇಲೆಯೂ ಪರಿಣಾಮ ಬೀರುತ್ತಿದೆ’ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT