ಸೋಮವಾರ, ನವೆಂಬರ್ 29, 2021
20 °C
ವಿಜ್ಞಾನಿಗಳ ತಂಡಕ್ಕೆ ನಿಖರ ಮಾಹಿತಿ ನೀಡಿ: ಶಾಸಕ ರಮೇಶ ಭೂಸನೂರ

ದ್ರಾಕ್ಷಿ ಬೆಳೆ ನಾಶ: ಪರಿಶೀಲನೆ ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂದಗಿ: ದ್ರಾಕ್ಷಿ ಬೆಳೆ ಹಾನಿ ಕುರಿತು ಮಾಹಿತಿ ಪಡೆಯಲು ತೋಟಗಾರಿಕೆ ವಿಜ್ಞಾನಿಗಳು ತಾಲ್ಲೂಕಿನ ಕನ್ನೊಳ್ಳಿ, ಓತಿಹಾಳ, ಸಿಂದಗಿ, ಆಲಮೇಲ, ಗೋಲಗೇರಿ ಭಾಗಕ್ಕೆ ನ27ರಂದು ಭೇಟಿ ನೀಡಲಿದ್ದು, ಹಾನಿ ಬಗ್ಗೆ ಅವರಿಗೆ ಸಮಗ್ರ ಮಾಹಿತಿ ನೀಡಿ ಮನವರಿಕೆ ಮಾಡಿಕೊಡಬೇಕು ಎಂದು ಶಾಸಕ ರಮೇಶ ಭೂಸನೂರ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನವೆಂಬರ್ ತಿಂಗಳಲ್ಲಿ ತುಂತುರು ಮಳೆ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಈ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆ ನಾಶಗೊಂಡು ರೈತರು ಕಂಗಾಲಾಗಿದ್ದಾರೆ. ರೈತರಿಗೆ ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡುವ ದಿಸೆಯಲ್ಲಿ ಬೆಳೆ ಹಾನಿ ಪರಿಶೀಲನೆ ನಡೆಸಬೇಕು ಎಂದು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಸಂಶೋಧನಾ ನಿರ್ದೇಶನಾಲಯದ ವಿಜ್ಞಾನಿಗಳಿಗೆ ಕೇಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತರ ಜಮೀನಗೆ ಭೇಟಿ ನೀಡಿದ್ದು, ದ್ರಾಕ್ಷಿ ಬೆಳೆ ನಾಶದ ಬಗ್ಗೆ ಮಾಹಿತಿ ಪಡೆದಿದ್ದೇನೆ. ಮುಂಬರುವ ಬೆಳಗಾವಿ ಚಳಿಗಾಲ ಅದಿವೇಶನದಲ್ಲಿ ದ್ರಾಕ್ಷಿ ಬೆಳೆ ನಾಶದ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದ್ದಾರೆ.

ಬೆಳೆ ರೋಗ ಮತ್ತು ಹತೋಟಿ ಕ್ರಮಗಳ ಕುರಿತು ತಾಕುಗಳಿಗೆ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನಾ ವರದಿ ನೀಡಲಿದೆ.
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಸಂಶೋಧನಾ ನಿರ್ದೇಶನಾಲಯದ ತಳಿಶಾಸ್ತ್ರ ಮತ್ತು ಸಸ್ಯಾಭಿವೃದ್ದಿ ಸಹಪ್ರಾಧ್ಯಾಪಕ ಡಾ.ಡಿ.ಎ.ಪೀರಜಾದೆ ಇವರ ಅಧ್ಯಕ್ಷತೆಯಲ್ಲಿ ತೋಟಗಾರಿಕೆ ವಿ.ವಿ ವಿಜ್ಞಾನಿಗಳಾದ ಡಾ.ಮಲ್ಲಿಕಾರ್ಜುನ ಅವಟಿ, ಡಾ.ಆನಂದ ನಂಜಪ್ಪನವರ, ಡಾ.ಮಂಜುನಾಥ ಹುಬ್ಬಳ್ಳಿ, ಎಂ.ಎ.ವಾಸೀಮ್ ಹಾಗೂ ಉಪ ತೋಟಗಾರಿಕೆ ನಿರ್ದೇಶಕರನ್ನೊಳಗೊಂಡ ತಂಡ ಜಿಲ್ಲೆಯಾದ್ಯಂತ ಸಂಚಾರ ಕೈಗೊಳ್ಳಲಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ಬಸವನಬಾಗೇವಾಡಿ ವರದಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಮುತ್ತಗಿ, ಹೂವಿನಹಿಪ್ಪರಗಿ, ಮನಗೂಳಿ, ಟಕ್ಕಳಕಿ ಹಾಗೂ ವಿವಿಧ ಗ್ರಾಮಗಳ ಜಮೀನುಗಳಿಗೆ ಬುಧವಾರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು, ಕೃಷಿ ವಿಜ್ಞಾನಿಗಳು ಭೇಟಿ ನೀಡಿ ಬೆಳೆಹಾನಿ ಮಾಹಿತಿ ಸಂಗ್ರಹಿಸಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರೈತರೊಂದಿಗೆ ಜಮೀನುಗಳಿಗೆ ಭೇಟಿ ನೀಡಿ ಅಕಾಲಿಕ ಮಳೆಯಿಂದ ಹಾನಿಗೊಳಗಾದ ವಾಣಿಜ್ಯ ಬೆಳೆಗಳಾದ ತೊಗರಿ, ಗೋಧಿ, ಅಜವಾನ, ಹತ್ತಿ ಸೇರಿದಂತೆ ವಿವಿಧ ಬೆಳೆಗಳ ಹಾನಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದರು.
ತೊಗರಿ, ಗೋವಿನಜೋಳ ಹಾಳಾಗಿದೆ. ಗೋಧಿ, ಕಡಲೆ, ಬಿಳಿಜೋಳದ ಬೆಳೆಗೆ ಈ ಅಕಾಲಿಕ ಮಳೆ ಅನುಕೂಲವಾಗಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್. ಯರಝರಿ ತಿಳಿಸಿದರು.

ಬೆಳೆ ಹಾನಿಯ ನಿಖರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ರೈತರಿಗೆ ಭರವಸೆ ನೀಡಿದರು.
ಬೆಳೆ ಹಾನಿ ಸಮೀಕ್ಷೆಯಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ. ರಾಶೇಖರ ಮಿಲಿಯಮ್ಸ್, ಡಾ. ಅಶೋಕ ಸಜ್ಜನ, ಕೃಷಿ ವಿಜ್ಞಾನಿ ಡಾ. ಎಂ.ಎಸ್.ವಸ್ತ್ರದ, ತಾಲ್ಲೂಕು ಕೃಷಿ ಅಧಿಕಾರಿ ಸಿ.ಎಂ. ಹಿರೇಮಠ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ದ್ಯಾಮನಗೌಡ ಪಾಟೀಲ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು