ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಸಿಲಿಗೆ ಬಳಲಿದ ‘ಗುಮ್ಮಟಪುರ’ ಪ್ರವಾಸೋದ್ಯಮ

Published 17 ಮೇ 2024, 6:10 IST
Last Updated 17 ಮೇ 2024, 6:10 IST
ಅಕ್ಷರ ಗಾತ್ರ

ವಿಜಯಪುರ: ಪ್ರಸಕ್ತ ಬೇಸಿಗೆ ಬಿಸಿಲಿನ ತಾಪ 45 ಡಿಗ್ರಿ ಸೆಲ್ಸಿಯಸ್‌ ದಾಟಿದ ಪರಿಣಾಮ ‘ಗುಮ್ಮಟಪುರ’ದ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಪ್ರತಿ ವರ್ಷ ಬೇಸಿಗೆ ರಜೆಯಲ್ಲಿ ವಿಜಯಪುರ ನಗರದಲ್ಲಿರುವ ಐತಿಹಾಸಿಕ ಗೋಳಗುಮ್ಮಟ, ಇಬ್ರಾಹಿಂರೋಜಾ, ಬಾರಾ ಕಮಾನ್‌ ಸೇರಿದಂತೆ ಹತ್ತಾರು ಸ್ಮಾರಕಗಳ ವೀಕ್ಷಣೆಗೆ ಬರುತ್ತಿದ್ದ ರಾಜ್ಯ, ಹೊರರಾಜ್ಯ ಹಾಗೂ ವಿದೇಶಿ ಪ್ರವಾಸಿಗರು ಈ ವರ್ಷ ಬೇಸಿಗೆ ಬಿಸಿಲಿನ ಉಷ್ಣಾಂಶಕ್ಕೆ ಅಂಜಿದ ಪರಿಣಾಮ ನೋಡುಗರ ಸಂಖ್ಯೆ ಗಣನೀಯ ‍ಪ್ರಮಾಣದಲ್ಲಿ ಇಳಿಮುಖವಾಗಿತ್ತು.

ಪ್ರವಾಸಿಗಳ ಸಂಖ್ಯೆ ಇಳಿಮುಖವಾದ ಪರಿಣಾಮ ವ್ಯಾಪಾರ, ವಹಿವಾಟನ್ನು ಆಧರಿಸಿದ ನಗರದ ಹೋಟೆಲ್‌, ರೆಸ್ಟೋರೆಂಟ್‌, ಟ್ಯಾಕ್ಸಿ, ಬಸ್‌, ಟಾಂಗಾ, ಆಟೋ, ಪ್ರವಾಸಿ ಮಾರ್ಗದರ್ಶಿಗಳ ಆದಾಯಕ್ಕೂ ಕುತ್ತು ತಂದಿದೆ.

ನವೆಂಬರ್‌, ಡಿಸೆಂಬರ್‌, ಜನವರಿ ಮತ್ತು ಫೆಬ್ರುವರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸದ ನಿಮಿತ್ತ ವಿಜಯಪುರದ ಐತಿಹಾಸಿಕ ಸ್ಥಳಗಳನ್ನು ವೀಕ್ಷಣೆ ಮಾಡಿರುವುದು ಹೊರತು ಪಡಿಸಿದರೆ ಅನ್ಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿಲ್ಲ. 

ನಾಲ್ಕು ತಿಂಗಳಲ್ಲಿ 2.56 ಲಕ್ಷ ಜನ ವೀಕ್ಷಣೆ:

‘ಈ ವರ್ಷದ ಜನವರಿಯಿಂದ ಏಪ್ರಿಲ್‌ ಅಂತ್ಯದ ವರೆಗೆ ಗೋಳಗುಮ್ಮಟಕ್ಕೆ 2,56,149 ಭಾರತೀಯ ಪ್ರವಾಸಿಗರು ಹಾಗೂ 666 ವಿದೇಶಿ ಪ್ರವಾಸಿಗರು ಭೇಟಿ ನೀಡಿ ವೀಕ್ಷಿಸಿದ್ದಾರೆ. ಇದೇ ಅವಧಿಯಲ್ಲಿ ಇಬ್ರಾಹಿಂರೋಜಾಕ್ಕೆ 53,699 ಭಾರತೀಯ ಪ್ರವಾಸಿಗರು ಮತ್ತು ಕೇವಲ ಒಬ್ಬರು ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ವಿಜಯಪುರ ಸ್ಥಾನೀಕ ಅಧಿಕಾರಿ ವಿಜಯಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ವರ್ಷ ಬೇಸಿಗೆ ರಜೆ ಸಮಯದಲ್ಲಿ ಹೋಟೆಲ್‌, ವಸತಿಗೃಹ, ರೆಸ್ಟೋರೆಂಟ್‌ಗಳಲ್ಲಿ ತಿಂಗಳ ಮೊದಲೇ ಕೊಠಡಿಗಳು ಕಾಯ್ದಿರಿಸುತ್ತಿದ್ದರು. ಅಲ್ಲದೇ, ಮೂರ್ನಾಲ್ಕು ತಿಂಗಳು ಒಂದು ಕೊಠಡಿಯೂ ಖಾಲಿ ಇರುತ್ತಿರಲಿಲ್ಲ. ಅಷ್ಟೊಂದು ಬೇಡಿಕೆ ಇರುತ್ತಿತ್ತು. ಆದರೆ, ಈ ವರ್ಷ ಬುಕಿಂಗ್‌ ಸಂಖ್ಯೆ ತೀರಾ ಕಡಿಮೆ ಇದೆ. ಬಹಳಷ್ಟು ಕೊಠಡಿಗಳು ಖಾಲಿ ಇದ್ದವು. ಇದರಿಂದ ಹೋಟೆಲ್‌ ಉದ್ಯಮಕ್ಕೆ ದೊಡ್ಡ ಏಟು ಬಿದ್ದಿದೆ’ ಎಂದು ವಿಜಯಪುರ ಜಿಲ್ಲಾ ಹೋಟೆಲ್‌ ಮಾಲೀಕರ ಸಂಘದ ಉಪಾಧ್ಯಕ್ಷ ಚಂದ್ರಕಾಂತ ಎಂ.ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೇಸಿಗೆ ಬಿಸಿಲಿನ ಜೊತೆಗೆ ಲೋಕಸಭಾ ಚುನಾವಣೆಯ ನಿರ್ಬಂಧಗಳು, ತಪಾಸಣೆಗಳು ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡಿದ ಪರಿಣಾಮ ವಿಜಯಪುರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಲು ಕಾರಣವಾಗಿದೆ. ಪ್ರವಾಸಿಗರನ್ನು ನಂಬಿ ಜೀವನ ನಡೆಸುವ ಪ್ರವಾಸಿ ಮಾರ್ಗದರ್ಶಿಗಳು ಈ ಬೇಸಿಗೆಯಲ್ಲಿ ಆದಾಯ ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ’ ಎಂದು ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಕಲ್ಯಾಣಮಠ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ಈ ವರ್ಷ ಬೇಸಿಗೆ ವಿಪರೀತ ಬಿಸಿಲಿನ ಜೊತೆಗೆ ಲೋಕಸಭಾ ಚುನಾವಣೆ ಕೂಡ ಒಟ್ಟಿಗೆ ಬಂದ ಪರಿಣಾಮ ಮಾರ್ಚ್‌ ಏಪ್ರಿಲ್‌ ಮತ್ತು ಮೇನಲ್ಲಿ ವಿಜಯಪುರಕ್ಕೆ ಬರುವ ಪ್ರವಾಸಿಗಳ ಸಂಖ್ಯೆ ಕ್ಷೀಣವಾಗಿದ್ದು ಹೋಟೆಲ್‌ ಉದ್ಯಮ ನಷ್ಠ ಅನುಭವಿಸಿದೆ
ಚಂದ್ರಕಾಂತ ಬಿ.ಶೆಟ್ಟಿ ಉಪಾಧ್ಯಕ್ಷ  ಹೋಟೆಲ್‌ ಮಾಲೀಕರ ಸಂಘ ವಿಜಯಪುರ
ವಿಜಯಪುರ ಮಾತ್ರವಲ್ಲದೇ ಎಲ್ಲೆಡೆಯೂ ಬಿಸಿಲು ಅಧಿಕವಾಗಿದ್ದ ಕಾರಣ ಯಾರೂ ಪ್ರವಾಸಕ್ಕೆ ಆದ್ಯತೆ ನೀಡಿಲ್ಲ. ಶೇ 40ರಷ್ಟು ಪ್ರವಾಸಿಗರ ಸಂಖ್ಯೆ ಈ ಬಾರಿ ಕಡಿಮೆಯಾಗಿದೆ. ಪ್ರವಾಸಿಗಳನ್ನು ನಂಬಿದ್ದ ನಮಗೂ ಸಂಕಷ್ಟವಾಗಿದೆ
–ರಾಜಶೇಖರ ಎಂ.ಕಲ್ಯಾಣಮಠ ಜಿಲ್ಲಾ ಘಟಕದ ಅಧ್ಯಕ್ಷ ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘ

ಆಲಮಟ್ಟಿಯಲ್ಲೂ ಪ್ರವಾಸಿಗರ ಸಂಖ್ಯೆ ವಿರಳ 

ಆಲಮಟ್ಟಿ: ಬಿಸಿಲಿನ ಪ್ರಖರತೆ ಚುನಾವಣೆ ಹಿನ್ನೆಲೆಯಲ್ಲಿ ಆಲಮಟ್ಟಿಯ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ‌.

ಮೊದಲೆಲ್ಲಾ ಏಪ್ರಿಲ್ ಮೇನಲ್ಲಿ ಕನಿಷ್ಠ ಸರಾಸರಿ ದಿನವೊಂದಕ್ಕೆ 1500 ರಿಂದ 1800 ಪ್ರವಾಸಿಗರು ಆಲಮಟ್ಟಿಗೆ ಭೇಟಿ ನೀಡುತ್ತಿದ್ದರು‌. ಆದರೆ ಈ ವರ್ಷದ ಏಪ್ರಿಲ್‌ನಲ್ಲಿ ರಾಕ್ ಉದ್ಯಾನಕ್ಕೆ ನಿತ್ಯ ಸರಾಸರಿ 1240 ಪ್ರವಾಸಿಗರು ಭೇಟಿ ನೀಡಿದ್ದಾರೆ.

ಮೇ ತಿಂಗಳಲ್ಲೂ ಅದೇ ಸರಾಸರಿಯಲ್ಲಿ ಪ್ರವಾಸಿಗರು ಆಲಮಟ್ಟಿಗೆ ಭೇಟಿ ನೀಡುತ್ತಿದ್ದಾರೆಂದು ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ ತಿಳಿಸಿದರು. ಸಂಗೀತ ಕಾರಂಜಿ ಕುಸಿದ ಪ್ರವಾಸಿಗರು: ಸಂಗೀತ ಕಾರಂಜಿ ಲೇಸರ್ ಫೌಂಟೇನ್ ಒಳಗೊಂಡ 77 ಎಕರೆ ಉದ್ಯಾನಗಳ ಸಮುಚ್ಛಯದಲ್ಲಿಯೂ ಪ್ರವಾಸಿಗರ ಸಂಖ್ಯೆ ಕುಸಿದಿದೆ. ವಾರಾಂತ್ಯದಲ್ಲಿ 1000 ರಿಂದ 1200 ಪ್ರವಾಸಿಗರು ಭೇಟಿ ನೀಡುತ್ತಿದ್ದು ಉಳಿದ ದಿನಗಳಲ್ಲಿ ನಿತ್ಯ 300 ರಿಂದ 400 ಪ್ರವಾಸಿಗರು ದಾಟುವುದಿಲ್ಲ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದರು.

ಪೂರ್ಣಗೊಂಡಿರುವ ವಾಟರ್ ಪಾರ್ಕ್‌ ಆರಂಭಗೊಂಡಿದ್ದರೆ ಪ್ರವಾಸಿಗರ ಸಂಖ್ಯೆ ಇಮ್ಮಡಿಯಾಗುತ್ತಿತ್ತು ಎಂದು ಹಲವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT