ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌ ಬಗ್ಗೆ ಪ್ರಶ್ನಿಸುವ ಹಕ್ಕು ಕುಮಾರಸ್ವಾಮಿಗೆ ಇಲ್ಲ: ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ
Last Updated 21 ಅಕ್ಟೋಬರ್ 2021, 15:28 IST
ಅಕ್ಷರ ಗಾತ್ರ

ವಿಜಯಪುರ: ಆರ್ ಎಸ್ ಎಸ್ ಬಗ್ಗೆ ಪ್ರಶ್ನೆ ಕೇಳುವ ಹಕ್ಕು ಕುಮಾರಸ್ವಾಮಿಗೆ ಇಲ್ಲ. ಈ ರೀತಿ ಪ್ರಶ್ನೆ ಕೇಳುವ ಅಗತ್ಯತೆಯೂ ಇಲ್ಲ. ಅವರಿಗೆ ಉತ್ತರ ಕೊಡುವ ಅಗತ್ಯತೆಯೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ಆರ್ ಎಸ್ ಎಸ್ ಬಗ್ಗೆ ಹಗುರವಾಗಿ ಮಾತಾಡಿದರೆ ಅವರ ಗೌರವ ಕಡಿಮೆ ಆಗುತ್ತದೆಯೇ ಹೊರತು, ಸಂಘದ ಗೌರವ ಕಡಿಮೆ ಆಗೋದಿಲ್ಲ ಎಂದು ಹೇಳಿದರು.

ಈ ದೇಶದ ರಾಷ್ಟ್ರಪತಿ, ಪ್ರಧಾನಿ, ನಾವು ಆರ್ ಎಸ್ ಎಸ್ ಮೂಲಕವೇ ಬಂದಿದ್ದೇವೆ. ‌ಬಿಜೆಪಿ ಅಧಿಕಾರದಲ್ಲಿರುವ 26 ರಾಜ್ಯಗಳಲ್ಲಿನ ಬಹುತೇಕ ಮುಖಂಡರು ಆರ್.ಎಸ್.ಎಸ್‌ನಿಂದ ಬಂದವರಾಗಿದ್ದಾರೆ ಎಂದರು.

ಜೆಡಿಎಸ್ ಪಕ್ಷವು ಬಿಜೆಪಿಯ ಬಿ ಟೀಂ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಸ್ವತಃ ದೇವೇಗೌಡರೇ ಸಿಂದಗಿಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಾನು ಒಪ್ಪುವುದಿಲ್ಲ. ಇದರಲ್ಲಿ ಸತ್ಯಾಂಶ ಇಲ್ಲ. ಕಾಂಗ್ರೆಸ್‌ನವರು ಈ ರೀತಿ ಮಾತಾಡಬಹುದು. ‌ಯಾವ ಪಕ್ಷದ ಬಗ್ಗೆಯೂ ಯಾರೂ ಹಗುರವಾಗಿ ಮಾತಾಡಬಾರದು. ನಮ್ಮ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಮಾಡಬೇಕು. ಅಂತಿಮವಾಗಿ ಮತದಾರರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ನನ್ನ ರಾಜಕೀಯ ಜೀವನದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳಿಗೆ ಅನ್ಯಾಯ ಮಾಡುವ ಕೆಲಸ ಮಾಡಿಲ್ಲ. ನಾವು ಅಥವಾ ಪ್ರಧಾನಿ ಮೋದಿಯವರು ಹಿಂದುಗಳಿಗೆ ಕೊಟ್ಟು ಅಲ್ಪ ಸಂಖ್ಯಾತರ ಕೊಡದೇ ಇರುವ ಯಾವುದಾದರೂ ಒಂದು ಕಾರ್ಯಕ್ರಮ ತೋರಿಸಿ. ಪ್ರಧಾನಿ ಮೋದಿಯವರಾಗಲಿ, ನಾವಾಗಲಿ ಎಲ್ಲ ಕಾಲದಲ್ಲೂ ಎಲ್ಲ ಯೋಜನೆಗಳನ್ನು ಹಿಂದು ಮುಸ್ಲಿಂ ಕ್ರೈಸ್ತರೆಂದು ಭೇದಭಾವ ಮಾಡದೇ ಕೊಟ್ಟಿದ್ದೇವೆ ಎಂದು ಯಡಿಯೂರಪ್ಪ ಸಮರ್ಥಿಸಿಕೊಂಡರು.

ರಾಜ್ಯ ಪ್ರವಾಸ: ಅ. 30 ರಂದು ಚುನಾವಣೆ ಮುಗಿದ ಬಳಿಕ ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ‌. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ 140 ಕ್ಕೂ ಹೆಚ್ಚು ಸೀಟು ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT