ಶುಕ್ರವಾರ, ಆಗಸ್ಟ್ 19, 2022
27 °C
ಕೆಎಸ್‌ಟಿಡಿಸಿ ಎಂ.ಡಿ ಕುಮಾರ ಪುಷ್ಕರ್ ಭಾಗಿ

ಆಲಮಟ್ಟಿ: ಪ್ರವಾಸಿ ಮಂದಿರ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಲಮಟ್ಟಿ: ಜಲಾಶಯದ ಬಲಭಾಗದ ಸೀತಮ್ಮನಗಿರಿಯ ಮೇಲ್ಬಾಗದಲ್ಲಿ 7 ಕಾಟೇಜ್ ಹಾಗೂ 14 ಕೋಣೆಗಳುಳ್ಳ ಪ್ರವಾಸಿ ಮಂದಿರವನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು.

ಕೆಎಸ್‌ಟಿಡಿಸಿಯ ವ್ಯವಸ್ಥಾಪಕ ನಿರ್ದೇಶಕ ಕುಮಾರ ಪುಷ್ಕರ್ ಪೂಜೆ ನೆರವೇರಿಸಿ ಸರಳವಾಗಿ ಉದ್ಘಾಟಿಸಿದರು.

ಜಲಾಶಯದ ಬಲಭಾಗದ ಕುರುಚಲು ಅರಣ್ಯ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ ಸುಮಾರು 596 ಮೀಟರ್ ಎತ್ತರದಲ್ಲಿ ಕರ್ನಾಟಕ ವಿದ್ಯುತ್ ನಿಗಮ ಕಟ್ಟಿಸಿದ ಈ ಸುಂದರ ಜಪಾನಿಸ್ ಮಾದರಿಯ ಕಟ್ಟಡಗಳನ್ನು ಪ್ರವಾಸೋದ್ಯಮ ನಿಗಮ ಲೀಸ್‌ಗೆ ಪಡೆದು ಪ್ರವಾಸಿಗರಿಗೆ ಮುಕ್ತಗೊಳಿಸಿತು.

ಶೇ 50ರಷ್ಟು ರಿಯಾಯಿತಿ: ‘ಶುಕ್ರವಾರದರಿಂದ ಕೋಣೆಗಳ ಬುಕ್ಕಿಂಗ್ ಅವಕಾಶ ಕೆಎಸ್‌ಟಿಡಿಸಿಯ ವೆಬ್‌ಸೈಟ್ ಮೂಲಕ ಆರಂಭಗೊಂಡಿತು.  ಪ್ರಾರಂಭೋತ್ಸವದ ಕೊಡುಗೆಯಾಗಿ ಶೇ 50 ರಷ್ಟು ರಿಯಾಯಿತಿ ನೀಡಲಾಗುತ್ತಿದೆ’ ಎಂದು ಎಂಡಿ ಕುಮಾರ್ ಪುಷ್ಕರ್ ಹೇಳಿದರು.

ಜಲಕ್ರೀಡೆಗಳು: ‘ಪ್ರವಾಸೋದ್ಯಮ ಇಲಾಖೆ ವತಿಯಿಂದ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲು ಕೆಬಿಜೆಎನ್‌ಎಲ್ ಅನುಮತಿ ಪಡೆದು ಹಲವು ಜಲಕ್ರೀಡೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಜಲಾಶಯದ ಹಿನ್ನೀರಿನಲ್ಲಿ ಸ್ಪೀಡ್, ಜೆಟ್ ಬೋಟಿಂಗ್, ಮೋಟಾರ್ ಬೋಟಿಂಗ್ ಆರಂಭಿಸಲಾಗುವುದು’ ಎಂದು ಅವರು ತಿಳಿಸಿದರು.

‘ಜಲಾಶಯದ ಹಿನ್ನೀರಿನ ಐಲ್ಯಾಂಡ್‌ಗಳನ್ನು ಅಭಿವೃದ್ಧಿಪಡಿಸಿ ಕೃಷ್ಣಾ ನದಿಯಿಂದ ಬೋಟ್ ಮೂಲಕ ಪ್ರವಾಸಿಗರನ್ನು ಕರೆದೊಯ್ಯುವ ಯೋಜನೆ ಹೊಂದಿದ್ದೇವೆ. ಸರ್ಕಾರದ ಅನುದಾನ ದೊರೆಯದಿದ್ದರೆ, ಖಾಸಗಿ ಸಹಭಾಗಿತ್ವದಲ್ಲಿ ಇದನ್ನು ಜಾರಿಗೆ ತರಲಾಗುವುದು’ ಎಂದರು.

ಜಾಲತಾಣದಲ್ಲಿ ಆಲಮಟ್ಟಿ: ‘ಮೊಘಲ್, ಲವಕುಶ, ರಾಕ್, ಕೃಷ್ಣಾ, ಸಂಗೀತ ಕಾರಂಜಿ, ಲೇಸರ್ ಶೋ ಸೇರಿದಂತೆ ಹಲವಾರು ಉದ್ಯಾನಗಳಿಂದ ಪ್ರಸಿದ್ಧಗೊಂಡಿರುವ ಆಲಮಟ್ಟಿಯ ಬಗ್ಗೆ ಕೆಎಸ್‌ಟಿಡಿಸಿ ವತಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಲಾಗುವುದು. ವೆಬ್‌ಸೈಟ್‌ನಲ್ಲಿ ಆಲಮಟ್ಟಿಯ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಮಾಹಿತಿ ಸಹ ದೊರಯಲಿದೆ. ಪ್ರವಾಸಿಗರು ವಾಸ್ತವ್ಯ ಮಾಡಿದರೆ ಸ್ಥಳೀಯರ ವ್ಯಾಪಾರ–ವಹಿವಾಟು ಹೆಚ್ಚಲಿದೆ ಎಂದರು.

‘ನವದೆಹಲಿಯಲ್ಲಿರುವ ಕರ್ನಾಟಕ ಭವನ-3 ಅನ್ನು ಮೇಲ್ವಿಚಾರಣೆಗಾಗಿ ಕೆಎಸ್‌ಟಿಡಿಸಿ ನಿಗಮಕ್ಕೆ ನೀಡಲು ಸರ್ಕಾರ ನಿರ್ಧರಿಸಿದೆ’ ಎಂದು ಪುಷ್ಕರ್ ತಿಳಿಸಿದರು.

ಕೆಎಸ್‌ಟಿಡಿಸಿಯ ಜನರಲ್ ಮ್ಯಾನೇಜರ್ ಕೆ.ಎನ್. ಗಂಗಾಧರ, ಎಜಿಎಂ ಎಸ್.ಬಿ. ದೇಶಮುಖ, ಪ್ರಾದೇಶಿಕ ವ್ಯವಸ್ಥಾಪಕ ಉದಯಕುಮಾರ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು