ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಸೌಕರ್ಯಗಳ ಪರಿಶೀಲನೆ

ಕೋಲಾರ, ನಿಡಗುಂದಿ ತಾಲ್ಲೂಕುಗಳಲ್ಲಿ ಸಿಇಓ ರಾಹುಲ್ ಶಿಂಧೆ ಸಂಚಾರ
Last Updated 25 ಮೇ 2022, 12:12 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶಿಂಧೆ ಅವರು ಬುಧವಾರ ಕೊಲ್ಹಾರ ಮತ್ತು ನಿಡಗುಂದಿ ತಾಲ್ಲೂಕುಗಳಲ್ಲಿ ಪ್ರವಾಸ ಕೈಗೊಂಡು, ಮೂಲಸೌಕರ್ಯಗಳ ಪರಿಶೀಲನೆ ನಡೆಸಿದರು.

ಮನಗೂಳಿ ಪಟ್ಟಣ ಮತ್ತು ಇತರೆ 35 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ನಿರ್ವಹಣೆ ಕಾಮಗಾರಿ ಮತ್ತು ಜಲಜೀವನ ಮಿಷನ್ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.

ತೆಲಗಿ ಗ್ರಾಮದ ಮನಗೂಳಿ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯ ನೀರು ಶುದ್ಧೀಕರಣ ಘಟಕಕ್ಕೆ ಖುದ್ದು ಭೇಟಿ ನೀಡಿ, ಕುಡಿಯುವ ನೀರು ಸರಬರಾಜು ಮತ್ತು ವಿದ್ಯುತ್ ಕಡಿತದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಏಪ್ರೀಲ್ 1ರಿಂದ ಇಲ್ಲಿಯವರೆಗೆ ವಿದ್ಯುತ್ ಕಡಿತವಾಗಿದ್ದರಿಂದ ಈ ಯೋಜನೆಯಡಿ ಗ್ರಾಮಗಳಿಗೆ ಸರಿಯಾಗಿ ಕುಡಿಯುವ ನೀರು ಸರಬರಾಜು ಮಾಡಲು ಆಗುತ್ತಿಲ್ಲ. ಮಳೆ ಗಾಳಿಯಿಂದಾಗಿಯೂ ಸಹ ವಿದ್ಯುತ್ ಕಡಿತವಾಗುತ್ತಿದೆ. ಬಳೂತಿ ಗ್ರಾಮದ ಹತ್ತಿರವಿರುವ ಜಾಕ್‌ವೆಲ್ ಮತ್ತು ತೆಲಗಿ ಗ್ರಾಮದ ಹತ್ತಿರದ ನೀರು ಶುದ್ಧೀಕರಣ ಘಟಕಕ್ಕೆ ವಿದ್ಯುತ್ ಸರಬರಾಜು ಸಂಪರ್ಕ ಕಡಿತಗೊಳ್ಳಲು ಈ ವಿದ್ಯುತ್ ಸಂಪರ್ಕದ ಲೈನ್‌ಗಳಿಗೆ ಗಿಡಮರಗಳಿಂದ ತೊಂದರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕೂಡಲೇ ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡಲು ಕ್ರಮ ವಹಿಸಬೇಕು ಎಂದು ಹೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸಿಇಓ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ನಿಡಗುಂದಿ ತಾಲ್ಲೂಕಿನ ಬೇನಾಳ ಆರ್‌.ಸಿ ಮತ್ತು ಆಲಮಟ್ಟಿ ಆರ್‌.ಸಿ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಾಣಗೊಂಡಿರುವ ಕಾಮಗಾರಿಗಳನ್ನು ಸಿಇಓ ಪರಿಶೀಲಿಸಿದರು.

ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಾಣವಾದ ನಳಗಳನ್ನು ತಾವೇ ಚಾಲನೆ ಮಾಡಿ ಪರೀಕ್ಷಿಸಿದರು. ಕಾಮಗಾರಿಗಳ ಬಗ್ಗೆ ಅಲ್ಲಿದ್ದ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಕುಡಿಯುವ ನೀರು ಸರಬರಾಜಿನ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು.

ನಂತರ ಸಿಇಓ ಅವರು ಕಾರ್ಯಾತ್ಮಕ ನಲ್ಲಿ ಸಂಪರ್ಕ ಕಾಮಗಾರಿಗಳಿಗೆ ರಸ್ತೆ ಬದಿಗಳಲ್ಲಿ ನಿರ್ಮಾಣ ಮಾಡಿರುವ ಪೈಪ್‌ಲೈನ್ ವ್ಯವಸ್ಥೆಯನ್ನು ಸಹ ಪರಿಶೀಲಿಸಿದರು. ಪ್ರಗತಿಯಲ್ಲಿರುವ ಕಾರ್ಯಾತ್ಮಕ ನಳ ಸಂಪರ್ಕ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೊಲ್ಹಾರ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಫರೀದಾಬಾನು ಎಚ್.ಪಠಾಣ, ಬಸವನ ಬಾಗೇವಾಡಿ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚೆಲುವಯ್ಯ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎಸ್.ಬಿ.ಪಾಟೀಲ, ಸಹಾಯಕ ಎಂಜಿನಿಯರ್‌ ವಿ.ಬಿ. ಗೊಂಗಡಿ, ಹೆಸ್ಕಾಂ ತೆಲಗಿ ವಲಯದ ಅಧಿಕಾರಿಗಳಾದ ರಮೇಶ ಲಮಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT