ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡಿ | ಸಾವಯವ ಕೃಷಿಯಲ್ಲಿ ಅಂತರ್ ಬೇಸಾಯ: ಲಕ್ಷ ಲಕ್ಷ ಆದಾಯ ಪಡೆದ ರೈತ

Published 5 ಜುಲೈ 2024, 5:40 IST
Last Updated 5 ಜುಲೈ 2024, 5:40 IST
ಅಕ್ಷರ ಗಾತ್ರ

ಇಂಡಿ: ತಾಲ್ಲೂಕಿನ ಖೇಡಗಿ ಗ್ರಾಮದ ಶರಣಪ್ಪ ಮತ್ತು ಅವರ ಪತ್ನಿ ರೇವತಿ ಮಜ್ಜಗಿ ಅವರ ಜಾಣತನದ ಸಾವಯವ ಕೃಷಿಯಲ್ಲಿ ಅಂತರ್ ಬೇಸಾಯ ಮಾಡಿ ಕೊಂಡು ಲಕ್ಷ ಲಕ್ಷ ಸಂಪಾದನೆ ಮಾಡಿ ಕೊಂಡಿರುವ ಯಶೋಗಾಥೆ ಇನ್ನಿತರ ಕೃಷಿಕರಿಗೆ ಮಾದರಿಯಾಗಿದ್ದಾರೆ.

4.5 ಎಕರೆ ಜಮೀನಿನಲ್ಲಿ ಪ್ರತೀ ವರ್ಷ ಅರ್ಧ ಎಕರೆಯಲ್ಲಿ ಅರಿಶಿಣ ಬೆಳೆ ಹಾಕಿ ಅದರಲ್ಲಿ ಅಂತರ್ ಬೇಸಾಯವಾಗಿ ತೊಗರಿ ಬೆಳೆ ಬೆಳೆಯುತ್ತಾರೆ. ಇದರಲ್ಲಿ ಬೆಳೆದ ಅರಿಶಿಣ ಬೆಳೆ ಹಸಿಯಾಗಿದ್ದಾಗಲೇ ಬಟಾಟಿ ಚಿಪ್ಸ್ ತರಹ ಕತ್ತರಿಸಿ, ಒಣಗಿಸಿ ಪುಡಿ ಮಾಡಿ ಮಾರಾಟ ಮಾಡುತ್ತಾರೆ. ಕಳೆದ ಸಾಲಿನಲ್ಲಿ 4 ಕ್ವಿಂಟಲ್ ಪೌಡರ್ ಮಾಡಿದ್ದು, 250 ಗ್ರಾಂ, 500 ಗ್ರಾಂ ಮತ್ತು 1 ಕೆ.ಜಿ ಪ್ಯಾಕೆಟ್ ಗಳನ್ನಾಗಿ ಮಾಡಿ
ಮಾರಾಟ ಮಾಡುತ್ತಾರೆ. ಇದರಿಂದ ಲಕ್ಷ ಲಕ್ಷ ಆದಾಯ ಪಡೆದುಕೊಳ್ಳುತ್ತಿದ್ದಾರೆ.

ಈ ಅರಿಶಿಣದ ಪುಡಿ ಔಷಧಿ ಸಿದ್ದಗೊಳಿಸಲು ಮತ್ತು ಸಾಮಾನ್ಯ ಕುಟುಂಬದವರು ಅಡುಗೆಗೆ ಬಳಸಲು ಕೊಂಡುಕೊಳ್ಳುತ್ತಾರೆ. ಇದನ್ನು ಕುದಿಸಿ, ಬಟ್ಟಿ ಮಾಡಿದರೆ ಅದರಲ್ಲಿಯ ಸತ್ವ ನಾಶವಾಗುತ್ತದೆ ಎಂದು ಮೈಸೂರು ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಮತ್ತು ಮಹಾರಾಷ್ಟ್ರದ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಗಳ ಸಲಹೆ ಪಡೆದುಕೊಂಡು ಈ ರೀತಿ ಔಷಧಯುಕ್ತ ಅರಿಶಿಣದ ಪುಡಿ ಮಾಡುತ್ತಿದ್ದೇವೆ ಎಂದು ಮಜ್ಜಗಿ ಕುಟುಂಬ ಹೇಳುತ್ತದೆ.

ಈ ಬೆಳೆಯ ಜೊತೆಗೆ ಬೆಳೆದ ತೊಗರಿ ಕೂಡಾ ಬಂಪರ್ ಬೆಳೆ ಬಂದಿದ್ದು, ಇದನ್ನು ಮಾರಾಟ ಮಾಡದೇ ಇದರಿಂದ ಬೇಳೆ ಸಿದ್ದಗೊಳಿಸಿ, ಆ ಬೇಳೆಯನ್ನು ಕೆ.ಜಿಯಂತೆ ಬೆಂಗಳೂರಿನ ಹೋಟೆಲ್ ಉದ್ದಿಮೆಗೆ ಮಾರಾಟ ಮಾಡುತ್ತಿದ್ದಾರೆ.

ಅಣ್ಣನ 4 ಎಕರೆ ಜಮೀನು ಉಳುಮೆಗೆ ಪಡೆದುಕೊಂಡು ಅದರಲ್ಲಿ 8 ಅಡಿ ಅಂತರ್ ದಲ್ಲಿ ಕಬ್ಬು ಬೆಳೆ ನಾಟಿ ಮಾಡುತ್ತಾರೆ. ಅದರಲ್ಲಿಯೂ ಕೂಡಾ ಅಂತರ್ ಬೆಳೆಗಳನ್ನು ಬೆಳೆಯುತ್ತಾರೆ.

ಈ ಕಬ್ಬು ಕಟಾವಿಗೆ ಬಂದ ಮೇಲೆ ಸಾವಯವ ಬೆಲ್ಲ ಸಿದ್ದಗೊಳಿಸುತ್ತಾರೆ. ಈ ಬೆಲ್ಲದಿಂದ ಹೆಚ್ಚಿನ ಲಾಭ ಪಡೆದುಕೊಳ್ಳುತ್ತಿದ್ದಾರೆ. ಇವೆಲ್ಲ ಬೆಳೆಗಳಿಗೆ ಅಗತ್ಯವಿರುವ ಗೊಬ್ಬರಕ್ಕಾಗಿ 4 ಜವಾರಿ ಆಕಳುಗಳು ಸಾಕಿದ್ದು, ಅವುಗಳಿಂದ ಸಿಗುವ ಸಗಣಿ, ಗೋಮೂತ್ರದಿಂದ ಜೀವಾಮೃತ, ಗೋಕೃಮಾಂಭೃತ ಮತ್ತು ಇನ್ನಿತರ ಗೊಬ್ಬರವನ್ನು ಮಾಡಿ ಬೆಳೆಗಳಿಗೆ ನೀಡಲಾಗುತ್ತಿದೆ.

ಅಮೃತಗಳಿಗೆಯಲ್ಲಿ ಎದ್ದು ಗೋವುಗಳ ಮೂತ್ರ ಸಂಗ್ರಹಿಸಿ, ಅದರಿಂದ ಗೋಆರ್ಕ್ ಔಷಧ ಸಿದ್ದಗೊಳಿಸುತ್ತಾರೆ. ಈ ಔಷಧ ಕೆಮ್ಮು, ಧಮ್ಮು, ನೆಗಡಿ, ಪಿತ್ತ ವಿನಾಶಕ್ಕೆ ಉಪಯೋಗಿಸಲಾಗುತ್ತಿದೆ. ಅದರ ಸಗಣಿಯಿಂದ ಹಲ್ಲು ಉಜ್ಜುವ ಪುಡಿ, ಮುಖ ಸ್ವಚ್ಚಗೊಳಿಸುವ ಪೌಡರ್, ವಿಭೂತಿ ಸಿದ್ದಗೊಳಿಸಿ ಮಾರಾಟ ಮಾಡುತ್ತಾರೆ. 

ಈ ಎಲ್ಲಾ ಬೆಳೆಗಳಿಗೆ ನೀರಿಗಾಗಿ ಅವರ ಜಮೀನಿನ ಸಮೀಪದಲ್ಲಿರುವ ಭೀಮಾ ನದಿಯಿಂದ ಪೈಪ್ ಲೈನ್ ಮಾಡಿ ಅದರ ಮೂಲಕ ನೀರು ತೆಗೆದುಕೊಳ್ಳುತ್ತಾರೆ. ಸಿಂದಗಿ ತಾಲ್ಲೂಕಿನ ದೇವಣಗಾಂವ ಗ್ರಾಮದ ಹತ್ತಿರ ಭೀಮಾ ನದಿಗೆ ನಿರ್ಮಿಸಿದ ಸೊನ್ನ ಬ್ಯಾರೇಜಿನಿಂದ ಖೇಡಗಿ ಗ್ರಾಮದವರೆಗೆ ಬ್ಯಾಕ್ ನೀರು ನಿಲ್ಲುತ್ತದೆ. ಇದರಿಂದ ನೀರಿನ ಕೊರತೆ ಆಗುವುದಿಲ್ಲ. ಪ್ರಸಕ್ತ ವರ್ಷ ಮಾತ್ರ ಬ್ಯಾರೇಜಿನಲ್ಲಿ ನೀರಿನ ಸಂಗ್ರಹವಿಲ್ಲದ್ದರಿಂದ ಸ್ವಲ್ಪ ಮಟ್ಟಿಗೆ ತೊಂದರೆ ಬಿಟ್ಟರೇ ಇನ್ನುಳಿದ ಯಾವ ವರ್ಷವೂ ನೀರಿನ ಕೊರತೆಯಾಗಿಲ್ಲ.
ಕಬ್ಬು ನುರಿಶಿ ರಸ ತೆಗೆಯಲು ₹2.60 ಲಕ್ಷದ ಒಂದು ಮಶಿನ್ ಖರೀದಿಸಿದ್ದು, ಅದಕ್ಕೆ ಶೇ 50ರಷ್ಟು ಸರ್ಕಾರದಿಂದ ಸಬ್ಸಿಡಿ ಪಡೆದುಕೊಂಡಿದ್ದಾರೆ.

ಅಂತರ್ ಬೇಸಾಯ ಹೆಚ್ಚಿನ ಲಾಭ ಕೊಡುತ್ತದೆ. ರೈತರು ಇದಕ್ಕೆ ಮಹತ್ವ ನೀಡಬೇಕು. ಜವಾರಿ ಆಕಳು ಸಾಕಿದರೆ ಮಾತ್ರ ಬೇಸಾಯದಿಂದ ಹೆಚ್ಚಿನ ಲಾಭ ಪಡೆಯಬಹುದು
–ಶರಣಪ್ಪ ಮಜ್ಜಗಿ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT