ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂದಗಿ | ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ: ಕ್ರಮಕ್ಕೆ ಆಗ್ರಹ

Published : 30 ಆಗಸ್ಟ್ 2024, 15:49 IST
Last Updated : 30 ಆಗಸ್ಟ್ 2024, 15:49 IST
ಫಾಲೋ ಮಾಡಿ
Comments

ಸಿಂದಗಿ: ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಪರಿಶಿಷ್ಟ ಜಾತಿ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ಎಸಗಿದವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಎಸ್.ಸಿ, ಎಸ್.ಟಿ ಮೋರ್ಚಾ ತಾಲ್ಲೂಕು ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಶುಕ್ರವಾರ ತಾಲ್ಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಿಂದಗಿ ಪುರಸಭೆ ಭೃಷ್ಟಾಚಾರದ ಬ್ರಹ್ಮಾಂಡವಾಗಿದೆ ಎಂದು ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದರು.

ನಂತರ ನಡೆದ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿ, ‘ಬಿಜೆಪಿ ಸರ್ಕಾರದಲ್ಲಿ ಅಂದಿನ ಶಾಸಕ ರಮೇಶ ಭೂಸನೂರ ಮಂಜೂರು ತಂದ 750 ನಿವೇಶನಗಳಲ್ಲಿ 181 ಎಸ್.ಸಿ, ಎಸ್.ಟಿ ಸಮುದಾಯಕ್ಕೆ ಮೀಸಲಾಗಿದ್ದು ಇಂದಿನ ಕಾಂಗ್ರೆಸ್ ಸರ್ಕಾರದ ಪುರಸಭೆ ಆಡಳಿತದಲ್ಲಿ ಮೀಸಲಾಗಿದ್ದ ನಿವೇಶನಗಳಲ್ಲಿ ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ತನಿಖೆ ನಡೆದು ಅವ್ಯವಹಾರ ಆಗಿರುವುದು ಬಯಲಿಗೆ ಬಂದಿದೆ. ಜಿಲ್ಲಾಧಿಕಾರಿ ನಿವೇಶನ ಹಂಚಿಕೆಗೆ ಸಂಬಂಧಿಸಿದ ಅನುದಾನ ತಡೆ ಹಿಡಿಯುವಂತೆ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿದ್ದಾರೆ’ ಎಂದರು.

‘ಪುರಸಭೆ ಆಡಳಿತಾಧಿಕಾರಿ ಆಡಳಿತದ ಅವಧಿಯಲ್ಲಿ ನಿವೇಶನ ಹಂಚಿಕೆಯಲ್ಲಿ ಕೋಟ್ಯಂತರ ಹಣ ಲೂಟಿ ಮಾಡಲಾಗಿದೆ.  ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು’ ಎಂದು  ಆಗ್ರಹಿಸಿದರು.

ಲಿಂಬೆ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ,  ‘ಎಸ್.ಸಿ, ಎಸ್.ಟಿ ಸಮುದಾಯಕ್ಕೆ ಸಿಗಬೇಕಾದ ನಿವೇಶನ ಅನ್ಯರ ಪಾಲಾಗುವುದು ತಡೆಯದಿದ್ದಲ್ಲಿ ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಧರಣಿ ಪ್ರಾರಂಭಿಸಲಾಗುವುದು’ ಎಂದರು.

ಸಾಯಬಣ್ಣ ದೇವರಮನಿ ಮಾತನಾಡಿ,  ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಎಸ್.ಟಿ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಶಾಂತ ಕದ್ದರಕಿ, ರೈತ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ಪೀರೂ ಕೆರೂರ, ಯುವ ಮೋರ್ಚಾ ಅಧ್ಯಕ್ಷ ಅಶೋಕ ನಾರಾಯಣಪುರ, ಎಸ್.ಸಿ.ಮೋರ್ಚಾ ಜಿಲ್ಲಾ ಘಟಕದ ಪ್ರಮುಖ ಸಿದ್ದು ಪೂಜಾರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಆರ್.ಯಂಟಮಾನ, ಪುರಸಭೆ ಸದಸ್ಯ ಮಹಾಂತಗೌಡ ಬಿರಾದಾರ, ಶಿವಕುಮಾರ ಬಿರಾದಾರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT