ತಾಂಬಾ/ನಾಲತವಾಡ: ಗಣೇಶನ ನಿರ್ಗಮನ ಆಗುತ್ತಿದ್ಧಂತೆ ಜೋಕುಮಾರನ ಆಗಮನ ಆಗುತ್ತದೆ. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಜೋಕುಮಾರನ ಹಬ್ಬವನ್ನು ಇಂದಿಗೂ ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ.
ಕುಂಬಾರರು ತಯಾರಿಸುವ ಜೋಕುಮಾರನ ಮೂರ್ತಿಯನ್ನು ತಳವಾರ ಸಮಾಜದ ಮಹಿಳೆಯರು ಬಿದರಿನ ಬುಟ್ಟಿಯಲ್ಲಿ ಇಟ್ಟು ಬೇವಿನ ತಪ್ಪಲಿನಿಂದ ಸಿಂಗರಿಸುತ್ತಾರೆ. ಗ್ರಾಮದ ಮಹಿಳೆಯರನ್ನು ಕರೆದು ‘ಜೋಕುಮಾರ ಬಂದಾನ ಬಾರವ್ವ, ಬಾಗೀನ ತಂದು ಜೋಕುಮಾರನಿಗೆ ಅರ್ಪಿಸಿ’ ಎಂದು ಹೇಳುತ್ತ ಭಕ್ತರು ನೀಡುವ ಪ್ರಸಾದ ಭಕ್ತಿಯಿಂದ ಪಡೆದು, ‘ನಮ್ಮ ಮನೆತನವು ಉನ್ನತ ಮಟ್ಟಕ್ಕೇರಲಿ, ಭೂತಾಯಿಯಲ್ಲಿ ಉತ್ತಮ ಬೆಳೆ ಬರಲಿ’ ಎಂದು ಹಾರೈಸುವ ವಿಶಿಷ್ಟ ಆಚರಣೆಯು ಉತ್ತರ ಕಾರ್ನಾಟಕದಲ್ಲಿ ವಿಶೇಷವಾಗಿದೆ.
ಭಾದ್ರಪದ ಚೌತಿ ಮುಗಿದ ಮೇಲೆ ಹುಟ್ಟಿ ಬರುವ ಈ ಜೋಕುಮಾರನ ಮೂರ್ತಿಯನ್ನು ಬಿದರಿನ ಬುಟ್ಟಿಯಲ್ಲಿ ಹೊತ್ತ ಗ್ರಾಮದ ಮಹಿಳೆಯರು ಅಗಸರ ಮನೆ ಮತ್ತು ದೇವಸ್ಥಾನಗಳಿಗೆ ಹೋಗಿ ‘ಜೋಕುಮಾರ ಬಂದಾನ ಜೋಕುಮಾರ, ಏಳು ದಿನಕ ಆವನ ಮರಣ. ಸಂಪೂರ್ಣ ಮಳೆ ತಂದು ರೈತರನ್ನು ಖುಷಿ ಗೊಳಿಸಿದ ಜೋಕುಮಾರ’ ಎಂದು ಪದಗಳನ್ನು ಹಾಡುತ್ತ ಗುಣಗಾನ ಮಾಡುತ್ತಾರೆ.
ಗಣೇಶನ ಮುಖಕ್ಕೆ ಬಟ್ಟೆ:
ಈ ಆಚರಣೆಯ ವಿಶೇಷವೆಂದರೆ ಗಣೇಶನ ಮುಂದೆ ಜೋಕುಮಾರ ಬರಬಾರದಂತೆ. ಜೋಕುಮಾರನ ಮುಖ ಗಣೇಶ ನೋಡಬಾರದು ಎಂಬ ನಂಬಿಕೆಯಿಂದ ಗಣೇಶನ ಮುಖಕ್ಕೆ ಬಟ್ಟೆ ಹಾಕುತ್ತಾರೆ. ಅದು ಇಂದಿಗೂ ಚಾಲ್ತಿಯಲ್ಲಿದೆ.
ಜೋಕುಮಾರನ ಮೂರ್ತಿಯನ್ನು ಹೊತ್ತುತರುವ ಮಹಿಳೆಯರು ಗ್ರಾಮಸ್ಥರ ಮರದಲ್ಲಿ ಜೋಳ, ಉಪ್ಪು, ಅಕ್ಕಿ, ಸಜ್ಜೆ ಇತ್ಯಾದಿ ದವಸ-ಧಾನ್ಯ ನೀಡುವುದು ಈ ಆಚರಣೆಯ ವಿಶೇಷ ಎನ್ನುತ್ತಾರೆ.
ಹೆಂಡತಿಯನ್ನು ಕೊಂದ ಜೋಕುಮಾರ:
ಜೋಕುಮಾರನ ಮನೆಗೆ ಬರುತ್ತಿದ್ದಂತೆ ಅಜ್ಜಿ ಜಾನಪದ ಹಾಡು ಹಾಡುತ್ತ ‘ಚಜ್ಜಿ ಹೆಂಡಂಡಿಯಾಗ ಕುಳಿತಿಯಲ್ಲೋ ಲಜ್ಜಗೇಡಿ, ಎದ್ದೆದ್ದು ಬಡಿಯ ಜೋಕುಮಾರ' ಎಂದು ಹಾಡುತ್ತಾಳೆ. ಈ ವೇಳೆ ಜೋಕುಮಾರ ಮನೆಯಲ್ಲಿ ಆತನ ಹೆಂಡತಿಯು ಜೋಕುಮಾರನ ಸ್ನೇಹಿತನೊಂದಿಗೆ ಕುಳಿತು ಊಟ ಮಾಡುತ್ತಿರುತ್ತಾಳೆ. ಇದನ್ನು ಕಂಡ ಜೋಕುಮಾರನಿಗೆ ಭಾರಿ ಕೋಪ ಬರುತ್ತದೆ. ತಲೆನೋವೆಂದು ನನ್ನನ್ನು ಅಡವಿಗೆ ಹಣ್ಣು ತರಲು ಕಳಿಸಿ, ಮನೆಯಲ್ಲಿ ಇನ್ನೊಬ್ಬನೊಂದಿಗೆ ಊಟ ಮಾಡುತ್ತಿರುವುದನ್ನು ಕಂಡು ಬೈಯುತ್ತಾನೆ. ಮನೆಯೊಳಗಿದ್ದ ಕೊಡಲಿ ತೆಗೆದುಕೊಂಡು ಹೆಂಡತಿಯನ್ನು ಕಡಿದು ಹಾಕುತ್ತಾನೆ’ ಎಂದು ಜೋಕುಮಾರನ ಬಗ್ಗೆ ಜಾನಪದ ಕಥೆಯೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.