ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಕ್ಕ’ನ ತೋಟದಲ್ಲಿ ರುಚಿಕರ ‘ಸ್ಟ್ರಾಬೆರಿ’

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವುಮನ್‌ ಟೆಕ್ನಾಲಜಿ ಪಾರ್ಕ್ ಯಶೋಗಾಥೆ
Last Updated 18 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ವಿಜಯಪುರ: ನೆರೆಯ ಮಹಾರಾಷ್ಟ್ರದ ಮಹಾಬಲೇಶ್ವರದ ಬೆಟ್ಟಗುಡ್ಡದಿಂದ ಕೂಡಿದ ಸಮಶೀತೋಷ್ಣ ಪ್ರದೇಶದಲ್ಲಿ ಬೆಳೆಯುವ ಸ್ಟ್ರಾಬೆರಿಯನ್ನು ಬಿಸಿಲನಾಡು ವಿಜಯಪುರದಲ್ಲೂ ಬೆಳೆಯಬಹುದು ಎಂಬುದನ್ನು ಇಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವುಮೆನ್‌ ಟೆಕ್ನಾಲಜಿ ಪಾರ್ಕ್‌ ಸಿಬ್ಬಂದಿ ಸಾಬೀತು ಮಾಡಿದ್ದಾರೆ.

ಹೌದು, ದ್ರಾಕ್ಷಿ, ಲಿಂಬೆ ಬೆಳೆಗೆ ಸೂಕ್ತವಾಗಿರುವ ವಿಜಯಪುರದ ಹವಾಮಾನದಲ್ಲಿ ಸ್ಟ್ರಾಬೆರಿ ಬೆಳೆಯುವುದು ಕಷ್ಟಸಾಧ್ಯ. ಆದರೆ, ವಿಶ್ವವಿದ್ಯಾಲಯದವುಮೆನ್‌ ಟೆಕ್ನಾಲಜಿ ಪಾರ್ಕ್(ಮಹಿಳಾ ಕೌಶಲ ಪಾರ್ಕ್)‌ನ ಎರಡು ಪಾಲಿಹೌಸ್‌ಗಳಲ್ಲಿ ಯಶಸ್ವಿಯಾಗಿ ಸ್ಟ್ರಾಬೆರಿ ಬೆಳೆಯಲಾಗಿದ್ದು, ಸದ್ಯ ಕೊಯ್ಲಿಗೆ ಬಂದಿದೆ. ಈ ಮೂಲಕ ಮಹಿಳಾ ವಿಶ್ವವಿದ್ಯಾಲಯವು ಜಿಲ್ಲೆಯ ತೋಟಗಾರಿಕಾ ಕ್ಷೇತ್ರಕ್ಕೆ ಹೊಸ ಬೆಳೆಯನ್ನು ಪರಿಚಯಿಸಿದೆ.

ವಿಶ್ವವಿದ್ಯಾಲಯದ ಎಂ.ಎಸ್‌ಸಿ ಸಸ್ಯಶಾಸ್ತ್ರ, ಜೈವಿಕ ತಂತ್ರಜ್ಞಾನ, ಜೈವಿಕ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಿಗೆ ತರಬೇತಿ, ಸಂಶೋಧನೆ ನೀಡುವ ಉದ್ದೇಶದಿಂದ ಹಾಗೂ ಜಿಲ್ಲೆಯ ರೈತ ಮಹಿಳೆಯರಿಗೆ ತರಬೇತಿ ನೀಡುವ ಸದುದ್ದೇಶದಿಂದಸ್ಟ್ರಾಬೆರಿ ಬೆಳೆಯಲು ಆರಂಭಿಸಿದ್ದೇವೆ ಎನ್ನುತ್ತಾರೆವುಮೆನ್‌ ಟೆಕ್ನಾಲಜಿ ಪಾರ್ಕ್‌ನ ನಿರ್ದೇಶಕ ಬಾಬು ಲಮಾಣಿ.

ರೂಸಾ(RUSA) ಅನುದಾನದಲ್ಲಿ 24X18 ಮೀಟರ್‌ ಅಳತೆಯ ಎರಡು ಪಾಲಿ ಹೌಸ್‌ಗಳಲ್ಲಿ ‘ಸ್ವೀಟ್ಸ್‌ ಚಾರ್ಲೆ’ ತಳಿಯ ಸುಮಾರು 1800 ಸ್ಟ್ರಾಬೆರಿ ಸಸಿಗಳನ್ನು ಬೆಳೆಸಿದ್ದೇವೆ. ಇದೀಗ ಹಣ್ಣು ಬಿಡಲಾರಂಭವಾಗಿದೆ. ಈ ಹಣ್ಣುಗಳನ್ನು ವಿಶೇಷವಾಗಿ ಜ್ಯೂಸ್‌ ಮಾಡಲು ಬಳಕೆಯಾಗುತ್ತದೆ. ತಿನ್ನಲು ಬಹಳ ಚನ್ನಾಗಿವೆ ಎನ್ನುತ್ತಾರೆ ಅವರು.

ಸ್ಟ್ರಾಬೆರಿ ಕೃಷಿಗೆ ಕೆಂಪು ಮಣ್ಣು ಅಗತ್ಯ. ಹೀಗಾಗಿ ಹೊರಗಡೆಯಿಂದ ಕೆಂಪುಮಣ್ಣನ್ನು ಇಲ್ಲಿಗೆ ತಂದು ಕೃಷಿಗೆ ಬಳಕೆ ಮಾಡಿದ್ದೇವೆ. ಅಲ್ಲದೇ, ಇಲ್ಲಿಯ ಬಿಸಿಲಿಗೆ ಸ್ಟ್ರಾಬೆರಿ ಹೊಂದಿಕೆಯಾಗುವುದಿಲ್ಲ. ಹೀಗಾಗಿ ಹವಾನಿಯಂತ್ರಣದ ಮೂಲಕ ಪಾಲಿಹೌಸ್‌ನಲ್ಲಿ20ರಿಂದ 30 ಡಿಗ್ರಿ ತಾಪಮಾನವನ್ನು ವ್ಯವಸ್ಥೆ ಮಾಡಿದ್ದೇವೆ. ಬೆಳೆ ಉತ್ತಮವಾಗಿ ಬಂದಿದೆ ಎಂದು ಹೇಳಿದರು.

ಸ್ಟ್ರಾಬೆರಿ ಬಹುತೇಕ ಜುಲೈ–ನವೆಂಬರ್ ಅವಧಿಯ ಬೆಳೆಯಾಗಿದೆ. ಆದರೆ, ವಿಶ್ವವಿದ್ಯಾಲಯದಲ್ಲಿ ಅಕಾಲಿಕ (ಅನ್‌ ಸೀಜನ್) ಅವಧಿಯಲ್ಲಿ ಬೆಳೆಯನ್ನು ಬೆಳೆದಿರುವುದು ನಮ್ಮ ಸಾಧನೆಯಾಗಿದೆ. ನಮ್ಮ ವಿಶ್ವವಿದ್ಯಾಲಯದ ಜೊತೆಗೆ ಸರ್ವೋದಯ ವಿಕಾಸ ಸಂಸ್ಥೆಯ ಸಂಯೋಜಕ ಮೋಹನ್‌ ದಳವಾಯಿ ಕೈಜೋಡಿಸಿದ್ದಾರೆ ಎಂದು ತಿಳಿಸಿದರು.

ನಮ್ಮ ವಿಜಯಪುರದ ಪರಿಸರದಲ್ಲೂ ಸ್ಟ್ರಾಬೆರಿ ಬೆಳೆಯಬಹುದು ಎಂಬುದು ನಮ್ಮ ಈ ಪ್ರಯತ್ನದಿಂದ ಸಾಬೀತಾಗಿದೆ. ಕೇವಲ ಮೂರು ತಿಂಗಳಲ್ಲಿ ಬೆಳೆ ಬಂದಿದೆ. ಸದ್ಯ ಪ್ರತಿದಿನ ಎರಡು ಕೆ.ಜಿ. ಹಣ್ಣು ಸಿಗುತ್ತಿದೆ. ಮಾರುಕಟ್ಟೆಗಿಂತ ಶೇ 25ರಷ್ಟು ಕಡಿಮೆ ದರಕ್ಕೆ ಹಣ್ಣನ್ನು ಮಾರಾಟ ಮಾಡುತ್ತಿದ್ದೇವೆ. ವಿಶ್ವವಿದ್ಯಾಲಯದ ಸಿಬ್ಬಂದಿಯೇ ಬಹುತೇಕ ಖರೀದಿ ಮಾಡುತ್ತಿದ್ದಾರೆ ಎಂದು ತಮ್ಮ ಸಾಧನೆಯನ್ನು ವಿವರಿಸಿದರು.

ಸ್ಟ್ರಾಬೆರಿ ಕೃಷಿಯ ಬಗ್ಗೆ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರು, ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿರುವುದು ನಮ್ಮ ಪ್ರಯತ್ನಕ್ಕೆ ಯಶಸ್ಸು ಲಭಿಸಿದಂತಾಗಿದೆ ಎಂದರು.

ಸಾವಯವ ಪದ್ಧತಿಯಲ್ಲಿ ಸ್ಟ್ರಾಬೆರಿ ಬೆಳೆಯುತ್ತಿದ್ದೇವೆ. ಎಲ್ಲಿಯೂ ಔಷಧ, ಗೊಬ್ಬರ ಬಳಿಕೆ ಮಾಡುತ್ತಿಲ್ಲ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದೇವೆ. ಸ್ಟ್ರಾಬೆರಿ ಕೃಷಿಗಾಗಿ ರೂಸಾದಿಂದ ₹ 40 ಲಕ್ಷ ಅನುದಾನ ಲಭಿಸಿದೆ ಎಂದು ಹೇಳಿದರು.

ಮಾರ್ಚ್‌ 6ರಂದು ವಿಶ್ವ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಜಿಲ್ಲೆಯ ಆಸಕ್ತ ಕೃಷಿ ಮಹಿಳೆಯರಿಗೆ ಸ್ಟ್ರಾಬೆರಿ ಕೃಷಿ ಬಗ್ಗೆ ತರಬೇತಿ ನೀಡುವ ಉದ್ದೇಶವಿದೆ. ಆಸಕ್ತರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಬಹುದು. ಜೊತೆಗೆ ಕೃಷಿ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು ಎಂದು ಕೋರಿದರು.

ಕೃಷಿಕರು ಒಂದು ಎಕರೆಯಲ್ಲಿ ಸುಮಾರು ₹30 ಲಕ್ಷ ಆದಾಯ ಗಳಿಸಬಹುದಾಗಿದೆ. ಕೃಷಿಗೆ ಸುಮಾರು ₹ 6 ಲಕ್ಷ ಖರ್ಚಾಗುತ್ತದೆ. ಆಸಕ್ತ ರೈತರು ಈ ಕೃಷಿಗೆ ಒತ್ತು ನೀಡಬಹುದಾಗಿದೆ ಎನ್ನುತ್ತಾರೆ ಅವರು.

ಮಾಹಿತಿಗಾಗಿ ವಿಶ್ವವಿದ್ಯಾಲಯದ ವುಮೆನ್‌ ಟೆಕ್ನಾಲಜಿ ಪಾರ್ಕ್‌ನ ನಿರ್ದೇಶಕ ಬಾಬು ಲಮಾಣಿ (9535990125) ಅವರನ್ನು ಸಂಪರ್ಕಿಸಬಹುದು.

****

ವಿದ್ಯಾರ್ಥಿನಿಯರ ಪೋಷಕರು ಆಸಕ್ತಿ ವಹಿಸಿದ್ದು, ವಿಶ್ವವಿದ್ಯಾಲಯದ ಪಾಲಿಹೌಸ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ತಮ್ಮ ಹೊಲಗಳಲ್ಲೂ ಸ್ಟ್ರಾಬೆರಿ ಬೆಳೆ ಬೆಳೆಯಲು ಆಸಕ್ತಿ ತೋರಿಸಿದ್ದಾರೆ

–ಬಾಬು ಲಮಾಣಿ, ನಿರ್ದೇಶಕ, ಮೆನ್‌ ಟೆಕ್ನಾಲಜಿ ಪಾರ್ಕ್‌, ಅಕ್ಕಮಹಾದೇವಿ ಮಹಿಳಾ ವಿ.ವಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT