ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ ಒಪ್ಪಂದ ರಾಜಕಾರಣ ಬಿಡಿ: ಸವದಿ

ಸೋಮನಗೌಡ, ಕೋಳಕೂರ, ನೇದಲಗಿ, ಭೈರಗೊಂಡ, ಸುರೇಶಗೌಡ ಬಿಜೆಪಿ ಸೇರ್ಪಡೆ
Last Updated 8 ಅಕ್ಟೋಬರ್ 2021, 15:12 IST
ಅಕ್ಷರ ಗಾತ್ರ

ವಿಜಯಪುರ: ಜೆಡಿಎಸ್ ಮುಖಂಡ ಸೋಮನಗೌಡ ಪಾಟೀಲ ಮನಗೂಳಿ, ಕಾಂಗ್ರೆಸ್‌ನ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಉಮೇಶ ಕೋಳಕೂರ, ಶಿವಯೋಗಪ್ಪ ನೇದಲಗಿ, ಮುಖಂಡರಾದ ಶಿವಶಂಕರಗೌಡ ಭೈರಗೊಂಡ ಮತ್ತು ಸುರೇಶಗೌಡ ಪಾಟೀಲ ಅವರು ಬಿಜೆಪಿ‌ ಸೇರ್ಪಡೆಯಾದರು.

ನಗರದ ರಾಣಿ ಚನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ ಕಟೀಲ್‌ ಅವರು ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿದರು.

ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ವಿಜಯಪುರದಲ್ಲಿ ಒಳ ಒಪ್ಪಂದ ರಾಜಕಾರಣ ಬಹಳ ಇದೆ‌. ಎಲ್ಲಿಯವರೆಗೆ ಇದು ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಶಕ್ತಿ ಹೆಚ್ಚಲ್ಲ ಎಂದರು.

ವಿಜಯಪುರದ ಗಾಳಿ ನಮ್ಮ ಬೆಳಗಾವಿಗೂ ಬಂದು ತಲುಪುತ್ತಿದೆ. ಬಸ್‌ನಲ್ಲಿ ಬಂದಿಳಿದರೆ ಸಾಕು ಯಾವ ಜಾತಿ ಎನ್ನುತ್ತಿದ್ದಾರೆ. ಯಾರ ಮನೆಗೆ ಹೊರಟಿದ್ದೀರಿ ಎನ್ನುತ್ತಾರೆ. ಈ ಪದ್ದತಿ ಬಿಡಿ. ಇಲ್ಲಿನ ಜನ ಬಂಗಾರದಂತವರು. ಆದರೆ, ನಾಯಕರು ಕಾರ್ಯಕರ್ತರನ್ನು ಕೆಡಿಸುತ್ತಿದ್ದೇವೆ ಎಂದರು.

ಐದು ಜನ ಘಟಾನುಘಟಿಗಳ ಬಿಜೆಪಿ ಸೇರ್ಪಡೆಯಿಂದ ಈ ಐದು ಕ್ಷೇತ್ರದಲ್ಲಿ ಬಿಜೆಪಿ ಪತಾಕೆ ಹಾರುವುದು ನಿಶ್ಚಿತ. ಪ್ರಾಮಾಣಿಕವಾಗಿ ಈ ಐದು ಜನರನ್ನು ಬಳಸಿಕೊಂಡರೆ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು.

ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ ಕಟೀಲ್‌, ವಿಜಯಪುರದಲ್ಲಿ ಪರಿವರ್ತನೆ ಗಾಳಿ ಬೀಸುತ್ತಿದೆ. ಬಿಜೆಪಿ ಸೇರ್ಪಡೆಗೆ ನೂಕುನುಗ್ಗಲು ಏರ್ಪಟ್ಟಿದೆ. ಅನ್ಯ ಪಕ್ಷದಿಂದ ಬಂದವರಿಗೆ ಬಿಜೆಪಿ ಸಕ್ಕರೆ ನೀಡಿದೆ. ಎಂ.ಬಿ. ಪಾಟೀಲರ ಮನೆ ಖಾಲಿ ಆಗುತ್ತಿದೆ. ಮುಂದಿನ ಚುನಾವಣೆ ವೇಳೆಗೆ ಎಂ.ಬಿ.ಪಾಟೀಲರೇ ಬಿಜೆಪಿಗೆ ಬರುತ್ತಾರೆ. ಹೀಗಾಗಿ ಯತ್ನಾಳರಿಗೆ ಖುಷಿ ಆಗಿದೆ’ ಎಂದು ಟಾಂಗ್ ನೀಡಿದರು.

ಕಾರಜೋಳ, ಜಿಗಜಿಣಗಿ ಜನತಾ ಪಕ್ಷದಿಂದ, ಭೈರತಿ ಬಸವರಾಜ್‌ ಕಾಂಗ್ರೆಸ್‌ನಿಂದ ಬಂದರು. ಅವರಿಗೆ ಬಿಜೆಪಿಯ ಅನುಭವ ಕೇಳಿ ಎಂದರು. ಸಿಂದಗಿ, ಹಾನಗಲ್‌ ಚುನಾವಣೆ ಗೆಲುವಿನ ವಿಜಯೋತ್ಸವ ಬಳಿಕ ಸಿದ್ದರಾಮಣ್ಣ ಸಹ ಬಿಜೆಪಿಗೆ ಬರುತ್ತಾರೆ ಎಂದು ಹೇಳಿದರು.

ಸಚಿವ ಗೋವಿಂದ ಕಾರಜೋಳ ಮಾತನಾಡಿ, ಪಕ್ಷ ಸೇರ್ಪಡೆಯಾದವರು ಎಲ್ಲರೂ ಸೇರಿ ಒಂದೇ ತಾಯಿ ಮಕ್ಕಳಂತೆ ಬಿಜೆಪಿ ಗೆಲ್ಲಿಸೋಣ ಎಂದು ಹೇಳಿದರು.

ಸಚಿವ ಭೈರತಿ ಬಸವರಾಜ ಮಾತನಾಡಿ, ವಿಜಯಪುರ ಮಹಾನಗರ ಪಾಲಿಕೆಗೆ ರೂ.125 ಕೋಟಿ ಅನುದಾನ ನೀಡಿದ್ದೇನೆ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ಯಾಕೆ ಕೊಡಲ್ಲ. ಕೊಡಲೇ ಕೊಡಬೇಕು. ನನಗೆ ಬೇಡ ಬೇರೆಯವರಿಗಾದರೂ ಕೊಡಿ. ನಾನು ಅಯೊಗ್ಯ ಆಗಿದ್ದರೆ ಬಿಡಿ. ನನ್ನ ಮೇಲೆ ಹಗರಣ ಇಲ್ಲ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೆಲಸ ಮಾಡಿದವನು ನಾನು ಎಂದರು.

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ವಿಜಯದಶಮಿ ಹೊಸ್ತಿಲಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು ಬಿಜೆಪಿ ಸೇರ್ಪಡೆಯಾಗುತ್ತಿರುವುದು ಇದೊಂದು ಬಿಜೆಪಿಯ ವಿಜಯೋತ್ಸವ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಶಾಸಕ ಸೋಮನಗೌಡ ಪಾಟೀಲ‌ ಸಾಸನೂರ, ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ‌ ಸಚಿವ ಅಪ್ಪ ಸಾಹೇಬ ಪಟ್ಟಣಶೆಟ್ಟಿ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ದಯಾಸಾಗರ ಪಾಟೀಲ, ಮಹೇಶ ಟೆಂಗಿನಕಾಯಿ, ಶಿವರುದ್ರ ಬಾಗಲಕೋಟ ಇದ್ದರು.

****

ದೇಶದಲ್ಲಿ ಮೂರು ಪಾರ್ಟಿ ಇದೆ. ಒಂದು ರಾಷ್ಟ್ರ ಉನ್ನತಿ ಪಾರ್ಟಿ, ಇನ್ನೊಂದು ವಂಶೋನ್ನತಿ ಪಾರ್ಟಿ, ಮತ್ತೊಂದು ಕುಟುಂಬ ಉನ್ನತಿ ಪಾರ್ಟಿ. ಯಾವ ಪಾರ್ಟಿ ಬೇಕು ನೀವೇ ತೀರ್ಮಾನಿಸಿ

–ನಳಿನ್ ಕುಮಾರ ಕಟೀಲ್‌,

ಅಧ್ಯಕ್ಷ, ಬಿಜೆಪಿ ರಾಜ್ಯ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT