ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಕಥೆಗಳು | ಸಮಸ್ಯೆಗಳ ಮಡುವಲ್ಲಿ ‘ಆನೆಮಡು’

ಅಭಿವೃದ್ಧಿ ಕಾಣದೆ ನಿರ್ಲಕ್ಷ್ಯವಾಗಿರುವ ವಿಜಯಪುರ ಜಿಲ್ಲೆಯ ಕೊನೆಯ ಗ್ರಾಮ
Last Updated 17 ಜುಲೈ 2020, 20:00 IST
ಅಕ್ಷರ ಗಾತ್ರ

ದೇವರಹಿಪ್ಪರಗಿ (ವಿಜಯಪುರ): ‘ಆನೆಮಡು’ ಎಂಬ ಈ ಪುಟ್ಟ ಹಳ್ಳಿಯ ಹೆಸರೇ ಕುತೂಹಲ ಮೂಡಿಸುವಂತಿದೆ. ಹೌದು, ಬಹುಷ್ಯ ಈ ಹಳ್ಳಿ ದಟ್ಟವಾದ ಅರಣ್ಯ ಪ್ರದೇಶದಲ್ಲಿರಬೇಕು, ಅಲ್ಲೊಂದು ದೊಡ್ಡ ಹಳ್ಳವಿರಬೇಕು, ಕಾಡಾನೆಗಳ ಆವಾಸ ಸ್ಥಾನವಾಗಿರುಬೇಕು ಎಂಬೆಲ್ಲ ಕಲ್ಪನೆ ಕಣ್ಮುಂದೆ ಹಾದುಹೋಗುತ್ತದೆ.

ಹಾಗೆಂದು ನೀವು ಭಾವಿಸಿಕೊಂಡರೆ ಅದು ಅರ್ಧ ಸತ್ಯ ಮಾತ್ರ. ಹೌದು, ಸದ್ಯ ಅಲ್ಲಿ ಅರಣ್ಯವೂ ಇಲ್ಲ, ಆನೆಗಳೂ ಇಲ್ಲ. ಆದರೆ, ಮಡು(ಹಳ್ಳ) ಮಾತ್ರ ಇದೆ.

ಆನೆಮಡು ಎಂಬ ಈ ಹಳ್ಳಿ ವಿಜಯಪುರ ಜಿಲ್ಲೆಯ ಗಡಿ ಭಾಗದಲ್ಲಿರುವ ಕೊನೆಯ ಗ್ರಾಮ. ಈ ಹಳ್ಳಿಗೆ ಹೊಂದಿಕೊಂಡಂತೆ ಒಂದೆಡೆ ಕಲಬುರ್ಗಿ, ಇನ್ನೊಂದೆಡೆ ಯಾದಗಿರಿ ಜಿಲ್ಲೆಗಳಿವೆ. ಮೂರು ಜಿಲ್ಲೆಗಳ ಗಡಿಗೆ ಈ ಹಳ್ಳಿ ಹೊಂದಿಕೊಂಡಿದೆ. ಈ ಪುಟ್ಟ ಹಳ್ಳಿಯಲ್ಲಿ 40 ಕುಟುಂಬಗಳು ಆಶ್ರಯಪಡೆದಿವೆ. ವೋಟ್‌ಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇವೆ. ಹೀಗಾಗಿಯೋ ಏನೋ ಈ ಊರು ರಾಜಕಾರಣಿಗಳ ಅಲಕ್ಷ್ಯಕ್ಕೆ ಒಳಗಾಗಿ ಅಭಿವೃದ್ಧಿ ಕಾರಣದೇ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಆನೆಮಡು ಎಂಬ ಹಳ್ಳವೇ ಈ ಹಳ್ಳಿಗೆ ವರವೂ ಹೌದು, ಶಾಪವೂ ಆಗಿದೆ ಎನ್ನುತ್ತಾರೆ ಗ್ರಾಮಸ್ಥರು. ಹಳ್ಳದ ನೀರು ಕಡುಬೇಸಿಗೆಯಲ್ಲೂ ಇಲ್ಲಿಯ ಜನರ ದಾಹವನ್ನು ನೀಗಿಸುವ ಜೊತೆಗೆ ಮಳೆಗಾಲದಲ್ಲಿ ಊರಿನ ಜನರಿಗೆ ಹೊರ ಜಗತ್ತಿನ ಸಂಪರ್ಕವನ್ನು ಕಡಿತಗೊಳಿಸುತ್ತದೆ. ಆದರೆ, ಸದ್ಯ ಈ ಬಾಧೆಯಿಂದ ಜನರು ಮುಕ್ತರಾಗುವ ಕಾಲ ಸನ್ನಿತವಾಗಿದ್ದು, ₹ 1ಕೋಟಿ ಮೊತ್ತದಲ್ಲಿ ಸೇತುವೆ ನಿರ್ಮಾಣ ಕಾರ್ಯ ಬಹುತೇಕ ಮುಗಿಯುವ ಹಂತ ತಲುಪಿದೆ.

ದ್ವೀಪದಂತಿರುವ ಈ ಹಳ್ಳಿಗೆ ಸುಸಜ್ಜಿತ ರಸ್ತೆಯಾಗಲಿ, ಗಟಾರವಾಗಲಿ, ಶೌಚಾಲಯಗಳಾಲಿ, ಬಸ್‌ ಸಂಪರ್ಕವಾಗಲಿ, ಅಂಗನವಾಡಿ ಕೇಂದ್ರವಾಗಲಿ, ಶುದ್ಧ ಕುಡಿಯುವ ನೀರಾಗಲಿ, ಸಶ್ಮಾನವಾಗಲಿ, ಯಾವೊಂದೂ ಇಲ್ಲ.

ಊರೊಳಗೆ ರಸ್ತೆ, ಗಟಾರ ಎರಡೂ ಇಲ್ಲ; ಎಲ್ಲರ ಮನೆಯ ಬಚ್ಚಲ ನೀರು ರಸ್ತೆ ನಡುವೆ ಹರಿಯುತ್ತದೆ. ರಾಡಿಯಲ್ಲೇ ಜನರು ನಿತ್ಯ ಸಂಕೋಚವಿಲ್ಲದೇ ತುಳಿದಾಡಿಕೊಂಡು ಹೋಗುತ್ತಾರೆ. ಅದರಲ್ಲೇ ಕುರಿ, ಆಕಳು, ಕೋಳಿಗಳು ಅಡ್ಡಾಡುತ್ತವೆ. ಗಬ್ಬೆದ್ದು ನಾರುವ ಕಿರಿದಾದ ಹಾದಿಯಲ್ಲಿ ಮೂಗು ಮುಚ್ಚಿಕೊಂಡು ಓಡಾಡಬೇಕಾದಂತಹ ನರಕಸದೃಶ್ಯ ವಾತಾವರಣ ಊರೊಳಗಿದೆ.

ಈ ಹಳ್ಳಿಯ ಜನರು ಜಿಲ್ಲಾ ಕೇಂದ್ರಕ್ಕೆ ಹೋಗಬೇಕೆಂದರೆ 100 ಕಿ.ಮೀ.ದೂರ ಕ್ರಮಿಸಬೇಕು. ಇನ್ನೂ ತಾಲ್ಲೂಕು ಕೇಂದ್ರವಾದ ದೇವರಹಿಪ್ಪರಗಿಗೆ ಹೋಗಬೇಕೆಂದರೆ 65 ಕಿ.ಮೀ. ದೂರ ಸಾಗಬೇಕು. ಮನೆಯಲ್ಲಿ ಒಂದು ಬೆಂಕಿಪೊಟ್ಟಣ ಇಲ್ಲವೆಂದರೂ ಆರೇಳು ಕಿ.ಮೀ.ದೂರ ನಡೆಯಬೇಕು.

ಊರು ಇದುವರೆಗೂ ಬಸ್‌ ಸೌಲಭ್ಯವನ್ನು ಕಂಡಿಲ್ಲ. ತುರ್ತು ಕೆಲಸ ಇದ್ದರೆ ನಡೆದುಕೊಂಡು ಹೋಗಬೇಕು; ಇಲ್ಲವೇ ಬೈಕ್‌, ಸ್ಕೂಟರ್‌ ಮೂಲಕ ಹೋಗಬೇಕು. ಯಾರಿಗಾದರೂ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಹೋಗಬೇಕು ಎಂದರೆ ನಾಲ್ಕೈದು ಕಿ.ಮೀ.ದೂರದ ಚಟ್ನಳ್ಳಿ ಅಥವಾ ಹೊನ್ನಳ್ಳಿಗೆ ಹೋಗಬೇಕು. ಅಂಬುಲೆನ್ಸ್‌ ಮನೆ ಬಾಗಿಲಿಗೆ ಬರಲ್ಲ. ಅದೃಷ್ಟ ಚನ್ನಾಗಿದ್ದರೆ ಬದುಕುಳಿಯುತ್ತೇವೆ. ಇಲ್ಲವೇ ಹಲಗಿ ಹೊಡೆಯಬೇಕಾದ ಸ್ಥಿತಿ ಇದೆ ಎಂದು ಗ್ರಾಮಸ್ಥರಾದ ಸುಭಾಶ ಪೂಜೇರಿ, ಗೊಳಲಪ್ಪ ಪೂಜೇರಿ, ಬೇಸರ ವ್ಯಕ್ತಪಡಿಸಿದರು.

ಸರಿಯಾದ ರಸ್ತೆ ಇಲ್ಲದೇ ಇರುವುದರಿಂದ ಅದರಲ್ಲೂ ಮಳೆಯಾದ ಸಂದರ್ಭದಲ್ಲಿ ಕೆಸರಿನಲ್ಲಿ ಚಕ್ರಗಳು ಹೂತುಹೋಗುವುದರಿಂದ ಅಂಬುಲೆನ್ಸ್‌ ಚಾಲಕರು ಹಳ್ಳಿಗೆ ಬರಲು ಅಂಜುತ್ತಾರೆ. ಏಕೆ ಬರಲ್ಲ ಎಂದರೆ ನಿಮ್ಮೂರಿಗೆ ಬಂದರೆ ಅಂಬುಲೆನ್ಸ್‌ ಮರಳಿ ಆಸ್ಪತ್ರೆಗೆ ಹೋಗಲ್ಲ; ಗ್ಯಾರೇಜ್‌ಗೆ ಹೋಗಬೇಕು ಎನ್ನುತ್ತಾರೆ ಎಂದು ಹೇಳಿದರು.

ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ; ಸವಳು ನೀರನ್ನೇ ಕುಡಿಯಬೇಕು. 30ರಿಂದ 35 ವರ್ಷದ ಹಿಂದೆ ಕೊರೆದಿರುವ ಎರಡು ಬೋರ್‌ವೆಲ್‌ಗಳೇ ಇಂದಿಗೂ ಕುಡಿಯುವ ನೀರಿಗೆ ಆಧಾರವಾಗಿದೆ. ಬೋರ್‌ವೆಲ್‌ ಜಂಗ್‌ ಬಂದಿದೆ. ಕುಡಿಯಲು ಸಿಹಿ ನೀರೇ ಸಿಗುತ್ತಿಲ್ಲ ಎಂದರು.

ಗಡಿ ಭಾಗದ ಕೊನೆಯ ಹಳ್ಳಿಯಾಗಿರುವ ಆನೆಮಡು ವಿಜಯಪುರ ಜಿಲ್ಲಾ ವ್ಯಾಪ್ತಿಯಲ್ಲಿವೆ. ಆದರೆ, ಗ್ರಾಮಸ್ಥರ ಜಮೀನು ಕಲಬುರ್ಗಿ ಜಿಲ್ಲೆಯಲ್ಲಿವೆ ಎಂದು ಹೇಳಿದರು.

ಊರಿಗೆ ಹೊಸದಾಗಿ ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಆದರೆ, ಕಡಿ, ಜೆಲ್ಲಿ ಹಾಕಿ ಹಾಗೆಯೇ ಬಿಟ್ಟಿದ್ದಾರೆ. ಇದರಲ್ಲಿ ಜನರು ನಡೆದಕೊಂಡು ಹೋಗಲು, ವಾಹನದಲ್ಲಿ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT