ಭಾನುವಾರ, ಜೂನ್ 13, 2021
20 °C
ವಿಜಯಪು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನಜೀವನ ಸಂಪೂರ್ಣ ಸ್ತಬ್ಧ

ಲಾಕ್‌ಡೌನ್‌ ಉಲ್ಲಂಘಿಸಿದವರಿಗೆ ಲಾಟಿ ಏಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೋವಿಡ್‌ ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿರುವುದರಿಂದ ನಿಯಂತ್ರಿಸಲು ಸೋಮವಾರದಿಂದ ಜಾರಿಯಾಗಿರುವ ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿ, ನಗರದಲ್ಲಿ ಬೈಕು, ಕಾರುಗಳಲ್ಲಿ ಸಂಚರಿಸಿದ್ದ ಸವಾರರಿಗೆ ಪೊಲೀಸರು ಲಾಟಿಯಿಂದ ಅಮಾನವೀಯವಾಗಿ ಹಿಗ್ಗಾಮುಗ್ಗಾ ಥಳಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌ ಅರಸಿದ್ದಿ ಅವರು ನಗರದ ಗಾಂಧಿಚೌಕ ವೃತ್ತದಲ್ಲಿ ಸಿಬ್ಬಂದಿಯೊಂದಿಗೆ ಹಾಜರಾಗಿ, ಬೈಕು, ಕಾರುಗಳಲ್ಲಿ ಸಂಚರಿಸುತ್ತಿರುವವರನ್ನು ತಡೆದು, ವಿಚಾರಣೆಗೊಳಪಡಿಸಿದರು. ಅನಗತ್ಯವಾಗಿ ತಿರುಗಾಡುವವರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು. ನೂರಾರು ಕಾರು, ಬೈಕುಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದರು. 

ಗಾಂಧಿಚೌಕದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲೇ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಬೈಕ್, ಕಾರು ಸವಾರರನ್ನು ಅಡ್ಡಗಟ್ಟಿ ಕೆಳಗಿಳಿಸಿದರು. ಸವಾರರು ತಮ್ಮ ಅಸಹಾಯಕ ಪರಿಸ್ಥಿತಿಯನ್ನು ಹೇಳಿಕೊಂಡು, ಅಂಗಲಾಚಿದರೂ ಬಿಡದೇ ನಾಲ್ಕೈದು ಜನ ಪೊಲೀಸರು ಸುತ್ತುವರಿದು ಲಾಟಿಯಿಂದ ಥಳಿಸಿದರು. ಈ ದೃಶ್ಯ ಸಾಮಾಜಿಕ ಜಾಲತಾಣ, ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಪೊಲೀಸರ ಅಮಾನವೀಯ ವರ್ತನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಜನಜೀವನ ಸ್ತಬ್ಧ

ಲಾಕ್‌ಡೌನ್‌ ಕಠಿಣ ನಿಯಮಗಳು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜಾರಿಯಾದ ಪರಿಣಾಮ ಜನಜೀವನ ಸಂಪೂರ್ಣ ಸ್ಥಗಿತವಾಗಿತ್ತು.

ಪ್ರಮುಖ ಮಾರ್ಗಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ ಜನರು ರಸ್ತೆಗಳಿಯದಂತೆ ನಿರ್ಬಂಧ ವಿಧಿಸಲಾಗಿತ್ತು. ಜಿಲ್ಲೆ, ಹೊರಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರವನ್ನು ಸಂಪರ್ಕಿಸುವ ಗಡಿಭಾಗದಲ್ಲಿ ತೆರೆಯಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ಜನ, ವಾಹನಗಳು ಹೋಗುವುದಕ್ಕೆ, ಬರುವುದಕ್ಕೆ ಸಂಪೂರ್ಣ ತಡೆ ಒಡ್ಡಿದ್ದರು.

ಬೆಳಿಗ್ಗೆ 10 ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿತ್ತಾದರೂ ಅಂಗಡಿ, ಮಳಿಗೆಗಳ ಎದುರು ಗ್ರಾಹಕರ ಸಂಖ್ಯೆ ಕ್ಷೀಣವಾಗಿತ್ತು. ತಳ್ಳುಗಾಡಿಗಳ ಮೂಲಕ ತರಿಕಾರಿ ಮಾರಾಟಕ್ಕೆ ಅವಕಾಶವಿತ್ತಾದರೂ ಪೊಲೀಸರ ಭಯದಿಂದ ಬಡ ವ್ಯಾಪಾರಿಗಳು ರಸ್ತೆಗಳಿಯಲಿಲ್ಲ.

ಬೆಳಿಗ್ಗೆ 10 ರ ಬಳಿಕ ಎಲ್ಲ ಅಂಗಡಿ, ಮಳಿಗೆಗಳು ಸಂಪೂರ್ಣ ಬಂದ್‌ ಆಗಿದ್ದವು. ಬಸ್‌ ನಿಲ್ದಾಣ, ರೈಲು ನಿಲ್ದಾಣ, ಮಾರುಕಟ್ಟೆ ಪ್ರದೇಶ ಸೇರಿದಂತೆ ಎಲ್ಲೆಲ್ಲೂ ಜನ, ವಾಹನ ಸಂಚಾರವಿಲ್ಲದೇ ಭಣಗುಡುತ್ತಿತ್ತು.

ಆಸ್ಪತ್ರೆ, ಔಷಧ ಅಂಗಡಿಗಳಿಗಳಿಗೆ, ಸರ್ಕಾರಿ ಕಚೇರಿ, ಬ್ಯಾಂಕುಗಳಿಗೆ ತೆರಳುವ ನೌಕರರನ್ನು ತಪಾಸಣೆ ಮಾಡಿ ಹೋಗಲು ಅನುವು ಮಾಡಿಕೊಡಲಾಯಿತು. ಹೋಟೆಲ್‌, ಬಾರ್‌, ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶವಿತ್ತಾದರೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲದ ಕಾರಣ ಬಹುತೇಕ ಬಂದ್‌ ಆಗಿದ್ದವು.

****

‘ಪೊಲೀಸರಿಂದ ಹಲ್ಲೆ; ಆಯೋಗಕ್ಕೆ ದೂರು ನೀಡಿ’

ವಿಜಯಪುರ: ಲಾಕ್‌ಡೌನ್‌ ಸಂದರ್ಭದಲ್ಲಿ ತುರ್ತು ಕೆಲಸ, ವೈದ್ಯಕೀಯ ಸೇವೆ ನೀಡುವ ಸಂಬಂಧ ಹೋಗುವಾಗ ಅಥವಾ ಬರುವಾಗ ಪೊಲೀಸರು ತಡೆದು ಹಲ್ಲೆ ಮಾಡಿದರೆ ಹಾಗೂ ಅವಾಚ್ಯ ಶಬ್ದಗಳಿಂದ ಘನತೆ ಗೌರವಕ್ಕೆ ದಕ್ಕೆಯಾಗುವಂತೆ ನಿಂಧಿಸಿದರೆ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಬಹುದು ಎಂದು ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ರಾಜ್ಯ ಅಧ್ಯಕ್ಷ ಹಾಸಿಂಪೀರ ವಾಲೀಕಾರ ತಿಳಿಸಿದ್ದಾರೆ.

ಹಲ್ಲೆ ಮಾಡಿದ ದೃಶ್ಯಗಳು ಇದ್ದಲ್ಲಿ ಅವುಗಳ ಸಮೇತ ದೂರು ಸಲ್ಲಿಸಲು ಅವಕಾಶವಿದೆ. ದೂರು ನೀಡಿದ ತಕ್ಷಣ ತಪ್ಪಿತಸ್ಥರ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು. ಮಾನವ ಹಕ್ಕುಗಳಿಗೆ ದಕ್ಕೆಯಾದರೆ ರಾಜ್ಯ ಮಾನವ ಹಕ್ಕು ಆಯೋಗ ಕ್ರಮ ಜರುಗಿಸುತ್ತದೆ ಎಂದು ಹೇಳಿದ್ದಾರೆ.

ಪೊಲೀಸರು ಮಾನವೀಯ ದೃಷ್ಟಿಯಿಂದ ಜನ ಸಾಮಾನ್ಯರನ್ನು ಕಾಣಬೇಕು. ಹಲ್ಲೆ ಮಾಡುವುದು ಅಮಾನವೀಯ ಕೃತ್ಯ, ಹಲ್ಲೆಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಅವಶ್ಯಕ ಸೇವೆಗೆ ಮಾತ್ರ ಹೊರಗೆ ಬರಬೇಕು, ಅನಗತ್ಯವಾಗಿ  ಹೊರಗಡೆ ಬರಬಾರದು ಎಂದು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ರಾಜ್ಯ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಅವರ ಮೊಬೈಲ್‌ ಸಂಖ್ಯೆ 9448035775, ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಘಾಟಗೆ ಅವರ ಮೊಬೈಲ್‌ ಸಂಖ್ಯೆ 9343001718 ಸಂಪರ್ಕಿಸಬಹುದು ಎಂದು ಅವರು ಪ್ರಕರಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು