ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸೋಲುವ ಹತಾಶೆಯಲ್ಲಿ ಮಾತಾಡುತ್ತಿದೆ: ಪ್ರಲ್ಹಾದ ಜೋಶಿ

ಲೋಕಸಭೆ ಚುನಾವಣೆ ಹಿನ್ನೆಲೆ; ತೊರವಿ ನರಸಿಂಹ ದೇವರ ದರ್ಶನ ಪಡೆದ ಪ್ರಲ್ಹಾದ ಜೋಶಿ
Published 29 ಮಾರ್ಚ್ 2024, 15:07 IST
Last Updated 29 ಮಾರ್ಚ್ 2024, 15:07 IST
ಅಕ್ಷರ ಗಾತ್ರ

ವಿಜಯಪುರ: ‘ರಾಜ್ಯದಲ್ಲಿ ಚುನಾವಣೆ ಗೆದ್ದಿದ್ದೇವೆ ಎಂದು ದುರಹಂಕಾರದಿಂದ ಮೆರೆಯಬೇಡಿ, ಇಡೀ ದೇಶದಲ್ಲಿ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರವಿದೆ. ಹಿಮಾಚಲ ಪ್ರದೇಶದಲ್ಲಿ ಸರ್ಕಾರ ಅಲುಗಾಡುತ್ತಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.‌

ವಿಜಯಪುರದ ತೊರವಿ ನರಸಿಂಹ ದೇವಸ್ಥಾನದಲ್ಲಿ ಶುಕ್ರವಾರ ಕುಟುಂಬ ಸಮೇತ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಕೇಂದ್ರ ಗೃಹಸಚಿವ ಅಮಿತ್ ಶಾ ಗುಂಡಾ ಎನ್ನುವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಅಮಿತ್ ಶಾ ಹಾಗೂ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಎರಡು ಬಾರಿ ಲೋಕಸಭೆ ಚುನಾವಣೆ ಗೆದ್ದಿದೆ. ಕಾಂಗ್ರೆಸ್‌ನವರು ಸೋಲುತ್ತೇವೆ ಎಂಬ ಹತಾಶೆಯಿಂದ ಹೀಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕೇಂದ್ರವನ್ನು ದೂಷಿಸುವ ಮೂಲಕ ಕಾಲಹರಣ ಮಾಡಿದರೇ, ಮಗ ಸರ್ಟಿಫಿಕೇಟ್ ಕೊಡುವ ಹಂತಕ್ಕೆ ಹೋಗಿದ್ದಾರೆ, ಇದಕ್ಕೆ ಜನರೇ ಉತ್ತರ ನೀಡುತ್ತಾರೆ’ ಎಂದರು.

‘ಮೋದಿಯವರ ಹತ್ತು ವರ್ಷದ ಆಡಳಿತದಲ್ಲಾದ ಬದಲಾವಣೆ ಜನ ಗಮನಿಸಿದ್ದಾರೆ. ದುರ್ಬಲ ಆರ್ಥಿಕತೆ ಹೊಂದಿದ್ದ ಭಾರತ ಈಗ ಜಗತ್ತಿನ ಐದನೇ ಬಲಿಷ್ಠ ರಾಷ್ಟ್ರವಾಗಿದೆ. ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ಭಾರತ ಜಗತ್ತಿನ ಮೂರನೇ ಆರ್ಥಿಕ ಬಲಿಷ್ಠ ರಾಷ್ಟ್ರವಾಗಲಿದೆ ಎಂದು ಮೋದಿ ಗ್ಯಾರಂಟಿ ನೀಡಿದ್ದಾರೆ’ ಎಂದು ಹೇಳಿದರು.

‘ದೇಶದಲ್ಲಿ ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಶಕ್ತಿ ಮೀರಿ ಪ್ರಯತ್ನ ಮಾಡಲಾಗುತ್ತಿದೆ. ಮೋದಿ ಅವರ ಅಧಿಕಾರದಲ್ಲಿ ಉಗ್ರವಾದ ಕಡಿಮೆಯಾಗಿದೆ. ಕಾಶ್ಮೀರದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗಿದೆ. ವಿಕಸಿತ ಭಾರತವಾಗಲು ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಬೇಕು’ ಎಂದರು.

ಬಂಜಾರ ಸಮುದಾಯದ ಮತಗಳು ನನಗೆ ಬೇಡ ಎಂದು ವಿಜಯಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದ್ದಾರೆ ಎಂಬ ಆರೋಪದ ಕುರಿತು ಮಾತನಾಡಿದ ಅವರು, ‘ಆ ರೀತಿ ಯಾರು ಹೇಳಲು ಸಾಧ್ಯವಿಲ್ಲ, ಆ ರೀತಿ ಹೇಳಿದ್ದರೆ ಅದನ್ನು ಸರಿಪಡಿಸಲಾಗುತ್ತದೆ, ಎಲ್ಲಾ ವರ್ಗದ ಮತಗಳು ನಮಗೆ ಬೇಕು. ಈ ಸಂದರ್ಭದಲ್ಲಿ ಒಡಕಿನ ಮಾತುಗಳು, ತಪ್ಪು ತಿಳುವಳಿಗಳು ಬರಬಾರದು, ಎಲ್ಲವನ್ನು ಸರಿ ಮಾಡಿಕೊಂಡು ಹೋಗಬೇಕು’ ಎಂದು ಹೇಳಿದರು.

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪ್ರಹ್ಲಾದ ಜೋಶಿ ಬದಲಾಗಿ ಬೇರೆಯವರಿಗೆ ಟಿಕೇಟ್ ನೀಡಬೇಕೆಂಬ ದಿಂಗಾಲೇಶ್ವರ ಸ್ವಾಮೀಜಿ ಒತ್ತಾಯ ವಿಚಾರವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ‘ದಿಂಗಾಲೇಶ್ವರ ಸ್ವಾಮೀಜಿಗಳ  ಎಲ್ಲಾ ಹೇಳಿಕೆಗಳು ನನಗೆ ಆಶೀರ್ವಾದವಿದ್ದಂತೆ. ಅವರ ಆಶೀರ್ವಾದದಿಂದ ನಾನು ಚುನಾವಣೆಯಲ್ಲಿ ಗೆಲ್ಲುವೆ. ಹೆಚ್ಚಿಗೆ ನಾನು ಏನು ಹೇಳಲ್ಲ’ ಎಂದರು.‌‌

ರಮೇಶ ಜಿಗಜಿಣಗಿ, ಮಾಜಿ ಪರಿಷತ್ ಸದಸ್ಯ ಅರುಣ ಶಹಾಪೂರ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಹೇಂದ್ರಕುಮಾರ ನಾಯಕ್‌, ವಿಜುಗೌಡ ಪಾಟೀಲ್, ಬಾಬುಗೌಡ ಕುಚಜೂರ ಇದ್ದರು.

ಏಪ್ರಿಲ್ 15 ರಂದು ನಾಮಪತ್ರ

ಲೋಕಸಭಾ ಚುನಾವಣೆ ಹಿನ್ನೆಲೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಶುಕ್ರವಾರ ಕುಟುಂಬ ಸಮೇತ ಮನೆ ದೇವರಾದ ವಿಜಯಪುರದ ತೊರವಿ ಲಕ್ಷ್ಮೀನರಸಿಂಹ ದೇವರ ದರ್ಶನ‌ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಏ.15ರಂದು ನಾಮಪತ್ರ ಸಲ್ಲಿಸುತ್ತಿದ್ದು ನಾಮಪತ್ರ ಸಲ್ಲಿಕೆಗೂ ಮುನ್ನ ಮನೆ ದೇವರು ತೊರವಿ ಲಕ್ಷ್ಮೀನರಸಿಂಹ ದೇವರ ದರ್ಶನ‌ ಮಾಡುವುದನ್ನು ಪಾಲಿಸಿಕೊಂಡು ಬಂದಿದ್ದೇನೆ ಎಂದರು. ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕು. ಮೋದಿ ಅವರು ಪ್ರಧಾನಿಯಾಗಿ ಆಯ್ಕೆಯಾಗಲು ಹೆಚ್ಚಿನ ಎಂಪಿಗಳು ಬೇಕು. ಆ ಎಂಪಿಗಳ ಪೈಕಿ ನಾನು ಒಬ್ಬ ಇರಬೇಕು ಎನ್ನುವುದು ನನ್ನ ಬಯಕೆ ಎಂದರು.

ಯಾವುದೇ ಬಂಡಾಯ ಇಲ್ಲ: ಯತ್ನಾಳ 

ವಿಜಯಪುರ: ಲೋಕಸಭಾ ಕ್ಷೇತ್ರದಲ್ಲಿ ಹೈಕಮಾಂಡ್ ಯಾರನ್ನು ಅಭ್ಯರ್ಥಿ ಎಂದು ನಿರ್ಣಯ ಮಾಡುತ್ತದೋ ಅವರಿಗೆ ಬೆಂಬಲಿಸಲಾಗುವುದು ನಮ್ಮಲ್ಲಿ ಯಾವುದೆ ಬಂಡಾಯವಿಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತೊರವಿ ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಯತ್ನಾಳ ಅವರು ವಿಜಯಪುರ ಲೋಕಸಭಾ ಕ್ಷೇತ್ರದ ವಿಚಾರದಲ್ಲಿ ಯಾವುದೇ ಭಿನ್ನಮತ ಇಲ್ಲ. ಎಲ್ಲರೂ ಸೇರಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲಾಗುವುದು ಎಂದರು. ದೇಶ ಹಾಗೂ ಹಿಂದುತ್ವ ದೃಷ್ಟಿಯಿಂದ ಚುನಾವಣೆ ಮಾಡಲಾಗುವುದು. ರಾಜ್ಯದ 28 ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲಿದೆ ಎಂದರು.ನಂತರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕಾರಿನಲ್ಲೇ ಖಾಸಗಿ ಹೋಟೆಲಿಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT