ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಸಂಸದ ಜಿಗಜಿಣಗಿಗೆ ಮತ್ತೆ ಬಿಜೆಪಿ ಟಿಕೆಟ್‌

Published 14 ಮಾರ್ಚ್ 2024, 5:07 IST
Last Updated 14 ಮಾರ್ಚ್ 2024, 5:07 IST
ಅಕ್ಷರ ಗಾತ್ರ

ವಿಜಯಪುರ: ಹಾಲಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ನಾಲ್ಕನೇ ಬಾರಿಗೆ ಸ್ಪರ್ಧಿಸಲು ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡುವ ಮೂಲಕ ಬಿಜೆಪಿ ಕೊನೆಗೂ ಊಹಾಪೂಹಗಳಿಗೆ ತೆರೆ ಎಳೆದಿದೆ.

‘ಜಿಗಜಿಣಗಿ ಅವರಿಗೆ ವಯಸ್ಸಾಗಿದೆ, ಆರೋಗ್ಯ ಸರಿಯಿಲ್ಲ ಎಂಬ ಕಾರಣಕ್ಕೆ
ಈ ಬಾರಿ ಟಿಕೆಟ್‌ ಕೈತಪ್ಪಲಿದೆ’ ಎಂಬ ಸುದ್ದಿ ದಟ್ಟವಾಗಿ ಹರಡಿತ್ತು. ಹೊಸಬರಿಗೆ ಟಿಕೆಟ್‌ ನೀಡಲಿದ್ದಾರೆ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ಜೋರಾಗಿತ್ತು. ಇದೆಲ್ಲವನ್ನು ಅಳೆದು, ತೂಗಿದ ಪಕ್ಷದ ವರಿಷ್ಠರು ಬದಲಾವಣೆ ಗೋಜಿಗೆ ಹೋಗದೇ ಜಿಗಜಿಣಗಿ ಅವರಿಗೆ
ಮರಳಿ ಸ್ಪರ್ಧಿಸಲು ಹಸಿರು ನಿಶಾನೆ ತೋರಿದ್ದಾರೆ.

ವಿಜಯಪುರ ಲೋಕಸಭಾ
ಮೀಸಲು ಕ್ಷೇತ್ರಕ್ಕೆ ಜಿಗಜಿಣಗಿ ಅವರ ಜೊತೆ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಅವರ ಪುತ್ರ ಉಮೇಶ ಕಾರಜೋಳ, ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ.ಬಾಬು ರಾಜೇಂದ್ರ ನಾಯಿಕ ಮತ್ತು ಮಾಜಿ ಪೊಲೀಸ್‌ ಅಧಿಕಾರಿ ಮಹೇಂದ್ರ ನಾಯಿಕ ಅವರ ಹೆಸರು ಹರಿದಾಡಿತ್ತು. ಇದರಲ್ಲಿ ಕೆಲವರು ಟಿಕೆಟ್‌ಗಾಗಿ ಭಾರೀ ಲಾಬಿ ನಡೆಸಿದ್ದರು.

ಆರು ಬಾರಿ ಸಂಸದ, ಮೂರು ಬಾರಿ ಶಾಸಕ:

ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ, ಚಿಕ್ಕೋಡಿ ಮೀಸಲು ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ, ಬಳ್ಳೊಳ್ಳಿ (ಈಗಿನ ನಾಗಠಾಣ) ಮೀಸಲು ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಜಿಗಜಿಣಗಿ ಚುನಾಯಿತರಾಗಿದ್ದಾರೆ.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಮೂರು ವರ್ಷ ಹಾಗೂ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಮತ್ತು ಜೆ.ಎಚ್‌.ಪಟೇಲ್‌ ಸರ್ಕಾರದಲ್ಲಿ 18 ವರ್ಷ ಸಚಿವರಾಗಿ ಕಾರ್ಯನಿರ್ವಹಿಸಿರುವ ಹಿರಿತನ ಸಂಸದ ರಮೇಶ ಜಿಗಜಿಣಗಿ ಅವರದ್ದಾಗಿದೆ.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಜೆ.ಎಚ್‌.ಪಟೇಲ್‌ ಗರಡಿಯಲ್ಲಿ ರಾಜಕೀಯ ಪಟ್ಟುಗಳನ್ನು ಕಲಿತಿರುವ ಹಿರಿಯ ರಾಜಕಾರಣಿ ರಮೇಶ ಜಿಗಜಿಣಗಿ ಅವರು, ತಮ್ಮ ಸೌಮ್ಯ ಭಾಷೆ, ನಡೆ–ನುಡಿಗಳಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ, ಬಿಜೆಪಿಯಲ್ಲಿ ಇದ್ದರೂ ಹಿಂದು–ಮುಸ್ಲಿಂ ಸೇರಿದಂತೆ ಎಲ್ಲ ಸಮಾಜದವರು ಇಷ್ಟಪಡುವ ಮುತ್ಸದ್ದಿ ರಾಜಕಾರಣಿಯಾಗಿದ್ದಾರೆ.

ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಗಜಿಣಗಿ, ‘ಈಗಾಗಲೇ ಚುನಾವಣೆ ಸಿದ್ಧತೆ ಮಾಡಿಕೊಂಡಿದ್ದೇನೆ. ಕ್ಷೇತ್ರವೂ ಹೊಸದಲ್ಲ, ಮತದಾರರು ಹೊಸಬರಲ್ಲ, ನಾನೂ ಹೊಸಬನಲ್ಲ, ನಿರೀಕ್ಷೆಯಂತೆ ಗೆಲುವು ನನ್ನದಾಗಲಿದೆ. ಮತ್ತೊಮ್ಮೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಆರೋಗ್ಯ ಸರಿಯಿಲ್ಲ, ಟಿಕೆಟ್‌ ಕೈತಪ್ಪುತ್ತದೆ ಎಂದು ಅನೇಕರು ಸುಳ್ಳು ಸುದ್ದಿ ಹಬ್ಬಿಸಿ ಜೀವ ತಿಂದಿದ್ದರು. ಇದರಿಂದ ಮನಸ್ಸಿಗೆ ತುಂಬಾ ಬೇಸರವಾಗಿತ್ತು. ಇದೀಗ ನಿರಾಳವಾಗಿದ್ದೇನೆ’ ಎಂದು ಹೇಳಿದರು.

ಕಾದಾಟಕ್ಕೆ ಅಖಾಡ ಸಿದ್ಧ

ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ವಾರದ ಹಿಂದಷ್ಟೇ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನಾಗಿ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಅವರನ್ನು ಕಣಕ್ಕಿಳಿಸಿತ್ತು. ಇದೀಗ ಬಿಜೆಪಿಯು ತನ್ನ ಹುರಿಯಾಳು ರಮೇಶ ಜಿಗಜಿಣಗಿ ಅವರನ್ನು ಮರಳಿ ಕಣಕ್ಕಿಳಿಸಿದೆ. ಈ ನಡುವೆ ಕಲ್ಲಪ್ಪ ತೊರವಿ ಬಿಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಅಖಾಡ ಸಿದ್ಧವಾಗಿದೆ. ವಿಜಯಪುರ ಕ್ಷೇತ್ರದ ಈ ಬಾರಿಯ ಚುನಾವಣೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆಯಾಗಲಿದೆ.

****

ನಿರೀಕ್ಷೆಯಂತೆ ನನಗೆ ಟಿಕೆಟ್‌ ಲಭಿಸಿದೆ. ಪಕ್ಷದ ವರಿಷ್ಠರಿಗೆ, ಮುಖಂಡರಿಗೆ, ಕಾರ್ಯಕರ್ತರಿಗೆ ಮತ್ತು ಕ್ಷೇತ್ರದ ಮತದಾರರಿಗೆ ಅಭಾರಿಯಾಗಿದ್ದೇನೆ

-ರಮೇಶ ಜಿಗಜಿಣಗಿ, ಬಿಜೆಪಿ ಅಭ್ಯರ್ಥಿ, ವಿಜಯಪುರ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT