ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ 16ಕ್ಕೆ ನಾಮಪತ್ರ ಸಲ್ಲಿಕೆ: ಜಿಗಜಿಣಗಿ

ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟನೆ
Published 3 ಏಪ್ರಿಲ್ 2024, 12:44 IST
Last Updated 3 ಏಪ್ರಿಲ್ 2024, 12:44 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ಏಪ್ರಿಲ್ 16ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಲಾಗುವುದು ಎಂದು ಬಿಜೆಪಿ ಅಭ್ಯರ್ಥಿ, ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದ ಎಂ.ಜಿ.ರಸ್ತೆಯ ಲಕ್ಷ್ಮಿಗುಡಿ ಎದುರು ಬುಧವಾರ ನಡೆದ ಬಿಜೆಪಿ ಚುನಾವಣೆ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂದು ಬಿಜೆಪಿ, ಜೆಡಿಎಸ್‌ ಮುಖಂಡರು, ಕಾರ್ಯಕರ್ತರೊಂದಿಗೆ ಬೃಹತ್‌ ರ‍್ಯಾಲಿ ನಡೆಸಿ, ನಾಮಪತ್ರ ಸಲ್ಲಿಸಲಾಗುವುದು ಎಂದರು.

ಏಪ್ರಿಲ್‌ 4ರಂದು ಹೊರ್ತಿ ರೇವಣಸಿದ್ಧೇಶ್ವರನಿಗೆ ಪೂಜೆ ಸಲ್ಲಿಸಿ, ಲೋಕಸಭಾ ಚುನಾವಣೆ ಪ್ರಚಾರವನ್ನು ಅಧಿಕೃತವಾಗಿ ಆರಂಭಿಸುತ್ತೇನೆ ಎಂದು ಹೇಳಿದರು.

‘ಜೆಡಿಎಸ್‌ನವರು ನಮ್ಮ ಪಕ್ಷದ ಯಾವುದೇ ಮುಖಂಡರ ಬಗ್ಗೆ ಸಂಶಯ ಇಟ್ಟುಕೊಳ್ಳುವ ಅಗತ್ಯವಿಲ್ಲ. ನಿಮ್ಮ ಸಂಪೂರ್ಣ ಜವಾಬ್ದಾರಿ ನಾನು ವಹಿಸಿಕೊಳ್ಳುತ್ತೇನೆ. ಏನೇ ಕೆಲಸ ಇದ್ದರೂ ನನ್ನೊಂದಿಗೆ ಮಾತನಾಡಬಹುದು’ ಎಂದು ಹೇಳಿದರು.

‌‘ನನಗೆ ವಯಸ್ಸಾಗಿದೆ, ತಲೆ ಕೆಟ್ಟಿದೆ ಎಂದು ವಿರೋಧಿಗಳು ಅಪಪ್ರಚಾರ ನಡೆಸಿದರು.‌ ಆದರೆ, ನನಗೆ ಏನೂ ಆಗಿಲ್ಲ. ನನ್ನ ಬೈಯುವ ಶಕ್ತಿ ಪಕ್ಷದ ಕಾರ್ಯಕರ್ತರ ಹೊರತು ಬೇರೆ ಯಾರಿಗೂ ಇಲ್ಲ’ ಎಂದು ಹೇಳಿದರು. 

ಮೂರು ಲಕ್ಷ ಅಂತರದಿಂದ ಗೆಲುವು:

ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ರಮೇಶ ಜಿಗಜಿಣಗಿ ಒಬ್ಬ ಅಜಾತಶತ್ರು ರಾಜಕಾರಣಿಯಾಗಿದ್ದಾರೆ.  ಅವರು ಈ ಬಾರಿ ಮೂರು ಲಕ್ಷ ಅಂತರದಿಂದ ಗೆಲುವು ಸಾಧಿಸುವಂತಾಗಬೇಕು ಎಂದರು.

ಜಿಗಜಿಣಗಿ ಅವರು ಈ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ವಿಜಯಪುರಕ್ಕೆ ವಂದೇ ಭಾರತ್ ರೈಲು ತರಲಿದ್ದಾರೆ, ವಿಮಾನ ನಿಲ್ದಾಣ ಮುಗಿಯುತ್ತಾ ಬಂದಿದೆ. ಶೀಘ್ರದಲ್ಲೇ ವಿಮಾನ ಹಾರಾಟವೂ ಆರಂಭವಾಗಲಿದೆ ಎಂದು ಹೇಳಿದರು.

ಇಡೀ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮೋದಿ ಶ್ರಮಿಸುತ್ತಿದ್ದಾರೆ, ಕೊರೊನಾದಿಂದ ದೇಶವನ್ನು ಪಾರು ಮಾಡಿದ್ದಾರೆ. ಮುಸ್ಲಿಂ ಮಹಿಳೆಯರ ರಕ್ಷಣೆಗಾಗಿ ತ್ರಿವಳಿ ತಲಾಖ್ ತೆಗೆದು ಹಾಕಿದ್ದಾರೆ. ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್ 370 ತೆಗೆದುಹಾಕಿದ್ದಾರೆ, ಶ್ರೀ ರಾಮ ಮಂದಿರ ನಿರ್ಮಾಣ ಮಾಡಿದ್ದಾರೆ, ಹೊಸ ಸಂಸತ್ ಭವನ ನಿರ್ಮಾಣ ಮಾಡಿದ್ದಾರೆ, ಮಹಿಳಾ ಮೀಸಲಾತಿಯನ್ನು ಶೇ 50ಕ್ಕೆ ಏರಿಸಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಹಾಲು ಜೇನಿನಂತೆ ಬೆರೆತು ಚುನಾವಣೆ ಎದುರಿಸಬೇಕು. ನಮ್ಮ ಅಭ್ಯರ್ಥಿ ಜಿಗಜಿಣಗಿ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಸಂಸದ ರಮೇಶ ಜಿಗಜಿಣಗಿ ಅವರು 10 ವರ್ಷ ಏನೂ ಕೆಲಸ ಮಾಡಿಲ್ಲ ಎಂದು ಕಾಂಗ್ರೆಸ್‌ ಅಭ್ಯರ್ಥಿ ತಮ್ಮ ಭಾಷಣದಲ್ಲಿ ಟೀಕಿಸಿದ್ದಾರೆ. ಆದರೆ, ಜಿಗಜಿಣಗಿ ಅವರು ಸದ್ದು ಗದ್ದಲ ಇಲ್ಲದೇ ಜಿಲ್ಲೆಯ ಅಭಿವೃದ್ಧಿಗೆ ₹1ಲಕ್ಷ ಕೋಟಿ ಅನುದಾನ ತಂದಿದ್ದಾರೆ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಂಜಾರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿದೆ. ಬಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಚುನಾವಣೆಯಲ್ಲಿ ಅವಕಾಶ ಕಲ್ಪಿಸಿದ್ದಾರೆ. ಆದರೆ, ಕಾಂಗ್ರೆಸ್‌ ಬಂಜಾರ ಸಮಾಜಕ್ಕೆ ಯಾವುದೇ ಅನುಕೂಲ ಮಾಡಿಲ್ಲ ಎಂದು ಆರೋಪಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಮಾಡಗಿ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಜಿಲ್ಲೆಯ ನೀರಾವರಿ ಯೋಜನೆಗಳಿಗೆ ನೀಡಿರುವ ಕೊಡುಗೆ, ಕುಮಾರಸ್ವಾಮಿ ಸಾಲಮನ್ನಾ ಯೋಜನೆಗಳು ಈ ಚುನಾವಣೆಯಲ್ಲಿ ಸಹಾಯವಾಗಲಿದೆ. ಅಲ್ಪಸ್ವಲ್ಪ ವ್ಯತ್ಯಾಸ ಇದ್ದರೆ ಸರಿಪಡಿಸಿಕೊಂಡು ಚುನಾವಣೆ ಎದುರಿಸಿ, ಜಿಗಜಿಣಗಿ ಎದುರಿಸಲು ಸಜ್ಜಾಗೋಣ ಎಂದರು. 

ಮಾಜಿ ಶಾಸಕ ರಮೇಶ ಭೂಸನೂರ, ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪುರ, ಮುಖಂಡರಾದ ವಿಜುಗೌಡ ಪಾಟೀಲ, ಬಸವರಾಜ ಹೊನವಾಡ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಎಸ್.ಕೆ.ಬೆಳ್ಳುಬ್ಬಿ, ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸಪ್ನಾ ಕಣಮುಚನಾಳ ಇದ್ದರು.

ಹಿಂದಿನ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಗಳಿಸಿದ್ದ ವೋಟುಗಳು ಈ ಬಾರಿ ನನಗೆ ಪೂರ್ಣವಾಗಿ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಜೆಡಿಎಸ್‌ ಮುಖಂಡರು ಸಹಕರಿಸಬೇಕು 

-ರಮೇಶ ಜಿಗಜಿಣಗಿ ಲೋಕಸಭೆ ಬಿಜೆಪಿ ಅಭ್ಯರ್ಥಿ

ಬಿಜೆಪಿಗೆ ಮರಳಿದ ಮುಖಂಡರು

ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆ ವೇಳೆ ಟಿಕೆಟ್‌ ಸಿಗದ ಕಾರಣ ಮುನಿಸಿಕೊಂಡು ಪಕ್ಷದಿಂದ ಹೊರಹೋಗಿದ್ದ ಮುಖಂಡರಾದ ರಾಜು ಬಿರಾದಾರ ರವಿಕಾಂತ ಬಗಲಿ ಮತ್ತಿತರರು ಸಂಸದ ರಮೇಶ ಜಿಗಜಿಣಗಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ ಸಮ್ಮುಖದಲ್ಲಿ ಮರಳಿ ಬಿಜೆಪಿ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT