ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಹಿಪ್ಪರಗಿ: ಹಣ್ಣು ಕೃಷಿಯಲ್ಲಿ ಖುಷಿ ಕಂಡ ಯುವರೈತ

Published 9 ಫೆಬ್ರುವರಿ 2024, 4:44 IST
Last Updated 9 ಫೆಬ್ರುವರಿ 2024, 4:44 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: ಕೃಷಿ ಆದಾಯಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಬೇಕು ಎಂಬ ಧ್ಯೇಯದೊಂದಿಗೆ ಹಣ್ಣುಗಳ ಕುರಿತು ವಿಶೇಷ ಆಸಕ್ತಿ ಹೊಂದಿ ಸ್ಥಳೀಯ ಹಾಗೂ ವಿದೇಶಿ ಹಣ್ಣುಗಳ 180ಕ್ಕೂ ಹೆಚ್ಚು ತಳಿಗಳ ಸಸಿಗಳನ್ನು ನೆಟ್ಟು ಮಾದರಿ ರೈತನಾಗಿ ಗುರುತಿಸಿಕೊಂಡವರು ತಾಲ್ಲೂಕಿನ ಮುಳಸಾವಳಗಿ ಗ್ರಾಮದ ಯುವಕ ಮಲ್ಲಿಕಾರ್ಜುನ ಸಿದ್ದಣ್ಣ ಬಿರಾದಾರ.

ತಮ್ಮ 17 ಎಕರೆ ತೋಟದಲ್ಲಿ ಸುಮಾರು 70 ತಳಿಗಳ ವಿವಿಧ ಬಾಳೆಗಿಡಗಳು ಸೇರಿದಂತೆ ಸೀತಾಫಲ, ಮಾವು, ನೇರಳೆ, ಪೇರಲ, ತೆಂಗು, ನಿಂಬೆ, ಹಲಸು, ಹಾಗೂ ಇತರ ವಿದೇಶಿ ಹಣ್ಣುಗಳ ಸಸಿಗಳನ್ನು ನೆಟ್ಟು ಬೆಳೆಸುತ್ತಿದ್ದಾನೆ.

‘ಪಿಯುಸಿಯಲ್ಲಿ ಅನುತ್ತೀರ್ಣನಾದ ಮೇಲೆ 8 ಎಕರೆಯಲ್ಲಿ ಹಣ್ಣಿನ ಗಿಡ ಬೆಳೆಸಬೇಕು ಎಂದು ನಿರ್ಧರಿಸಿದೆ. ಅದಕ್ಕಾಗಿ ಒಂದು ಬಾವಿ ಹಾಗೂ ಬೊರೆವೆಲ್ ನೀರಿನ ಸಹಾಯದಿಂದ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿದೆ’ ಎನ್ನುತ್ತಾರೆ ಮಲ್ಲಿಕಾರ್ಜುನ.

ಸ್ವದೇಶಿ ಹಾಗೂ ವಿದೇಶಿ ತಳಿಗಳು ಸೇರಿದಂತೆ 60ಕ್ಕಿಂತಲೂ ಹೆಚ್ಚು ಬಾಳೆ ತಳಿಗಳು, ಬೆಣ್ಣಿಹಣ್ಣು (ಬಟರ್ ಫ್ರೂಟ್) ಅವಕಾಡಿನ 10 ಗಿಡಗಳು, ಸೀತಾಫಲದ 20 ವಿವಿಧ ತಳಿಗಳು, ವಿವಿಧ ತಳಿಯ 16 ತೆಂಗಿನ ಗಿಡಗಳು, ಸ್ವದೇಶಿ ಹಾಗೂ ವಿದೇಶಿ ತಳಿಗಳ 25 ಮಾವಿನ ಗಿಡಗಳು, 3 ಎಕರೆಯಲ್ಲಿ ದಾಳಿಂಬೆ, ಸ್ಪೆನ್ ದೇಶದ ಬೀಜರಹಿತ ಸಿಹಿಚಕ್ಕೊತಾ (ಸ್ವಿಟ್ ಫೊಮೇಲೊ), ಇಂಡೋನೇಶಿಯಾದ ಜಂಬುರೆಡ್ ವಾಟರ್ ಆ್ಯಪಲ್, ಥೈಲ್ಯಾಂಡಿನ ಲಾಂಗ್ ರೆಡ್ ವಾಟರ್ ಆ್ಯಪಲ್, ಕ್ಯಾನಿಪೊರ್ನಿಯಾ ಸಫೋಟಾ, ಮಿಲ್ಕಫ್ರೂಟ್, ಇಂಡೋನೇಶಿಯಾದ ವಿಶೇಷ ತಳಿಯ ತೆಂಗಿನ ಗಿಡ, ಪನ್ನೆರಳೆ (ರೋಸ್ಆ್ಯಪಲ್), ಬ್ರೇಜಿಲ್ ನಟ್ ಎಂದು ಕರೆಯಲ್ಪಡುವ ಆಸ್ಟ್ರೇಲಿಯಾದ ಮೆಕೆಡೋಮಿಯಾ, ಮೆಕ್ಸಿಕೋದ ಬಟರ್ ಫ್ರೂಟ್ ತಳಿಯ 20 ಗಿಡಗಳು, ಹಲಸು, ಅಪ್ಪೆಮೀಡಿ ಮಾವು, ಲಕ್ಷ್ಮಣಫಲ ಸೇರಿದಂತೆ 20 ದೇಶಗಳ ವಿವಿಧ ಹಣ್ಣಿನ ಗಿಡಗಳು ಸಹಿತ 800 ದಾಳಿಂಬೆ, 100 ತೆಂಗು ಸೇರಿದಂತೆ ಅಂದಾಜು 3,000 ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ.

ಇವರ ಪ್ರಯತ್ನ ಹಾಗೂ ಪ್ರಯೋಗಗಳನ್ನು ಗುರುತಿಸಿದ ಧಾರವಾಡ ಕೃಷಿ ವಿ.ವಿ, ವಿಜಯಪುರದ ಹಿಟ್ನಳ್ಳಿಯಲ್ಲಿ ಈಚೆಗೆ ಜರುಗಿದ ಕೃಷಿಮೇಳದಲ್ಲಿ ಸಾಧಕ ರೈತ ಎಂದು ಗುರುತಿಸಿ ಸನ್ಮಾನಿಸಲಾಗಿದೆ.

ಮುಳಸಾವಳಗಿ ಗ್ರಾಮದ ಯುವರೈತ ಮಲ್ಲಿಕಾರ್ಜುನ ಬಿರಾದಾರ ತನ್ನ ತಂದೆ ತಾಯಿಯೊಂದಿಗೆ ತೋಟದ ಮನೆಯ ಮುಂದಿನ ವಿವಿಧ ಹಣ್ಣಿನ ಸಸಿಗಳ ಕುರಿತು ವಿವರಣೆ ನೀಡಿದರು.
ಮುಳಸಾವಳಗಿ ಗ್ರಾಮದ ಯುವರೈತ ಮಲ್ಲಿಕಾರ್ಜುನ ಬಿರಾದಾರ ತನ್ನ ತಂದೆ ತಾಯಿಯೊಂದಿಗೆ ತೋಟದ ಮನೆಯ ಮುಂದಿನ ವಿವಿಧ ಹಣ್ಣಿನ ಸಸಿಗಳ ಕುರಿತು ವಿವರಣೆ ನೀಡಿದರು.

₹6.50 ಲಕ್ಷ ವಾರ್ಷಿಕ ಆದಾಯ

‘ಕಳೆದ 2 ವರ್ಷಗಳ ಹಿಂದೆ ನೆಟ್ಟ ಹಣ್ಣಿನ ಗಿಡಗಳಲ್ಲಿ ಲಕ್ಷ್ಮಣಫಲ ಸೀತಾಫಲ ಈಗಾಗಲೇ ಹಣ್ಣು ನೀಡಲು ಆರಂಭಿಸಿವೆ. ಆದರೆ ಇವುಗಳನ್ನು ಈಗಲೇ ಮಾರಾಟ ಮಾಡಬಾರದು 3 ವರ್ಷಗಳ ನಂತರ ಇವುಗಳನ್ನು ಮಾರುಕಟ್ಟೆಗೆ ಪರಿಚಯಿಸಬೇಕು ಎಂದು ನಿರ್ಧರಿಸಿ ಮಾರಾಟ ಮಾಡಿಲ್ಲ. ಇನ್ನೂ ನಮಗೆ ನಿಂಬೆ ಮೆಕ್ಕೆಜೋಳದಿಂದ ಪ್ರತಿವರ್ಷ ಆದಾಯ ಬರುತ್ತಿದೆ. ಈ ವರ್ಷ ಮಳೆಯಿಲ್ಲದ ಕಾರಣ ಆದಾಯವೇ ಇಲ್ಲ. ಕಳೆದ ವರ್ಷ ನಿಂಬೆ ಬಾಳೆ ಹುಣಸೇಯಿಂದ ₹6.50 ಲಕ್ಷ ಆದಾಯ ಬಂದಿದೆ. ಈಗ ಬೆಳೆದ ಹಣ್ಣುಗಳಿಂದ ಮುಂದಿನ 5 ವರ್ಷದಲ್ಲಿ ₹30 ರಿಂದ ₹40 ಲಕ್ಷ ಆದಾಯ ಬರುವ ನಿರೀಕ್ಷೆಯಿದೆ’ ಎನ್ನುತ್ತಾರೆ ಯುವ ರೈತ ಮಲ್ಲಿಕಾರ್ಜುನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT