ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಯತ್ನಾಳರಿಗೆ ಬುದ್ದಿಭ್ರಮಣೆ: ಭೀಮಾಶಂಕರ ಹದನೂರ,

ವೀರಶೈವ ಲಿಂಗಾಯತ ಸಮಾಜಕ್ಕೆ ಇವರ ಕೊಡುಗೆ ಏನು?
Last Updated 21 ಜುಲೈ 2021, 15:26 IST
ಅಕ್ಷರ ಗಾತ್ರ

ವಿಜಯಪುರ: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಲಿಂಗಾಯತ ಸಮಾಜದ ನಾಯಕರು, ಮಠಾಧೀಶರ ಬಗ್ಗೆ ಬಾಯಿಗೆ ಬಂದಂತೆ ಆಪಾದನೆ ಮಾಡುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬುದ್ದಿ ಭ್ರಮಣೆಯಾದಂತಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಕೋಶಾಧ್ಯಕ್ಷ ಭೀಮಾಶಂಕರ ಹದನೂರ ಆರೋಪಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಸಮಾಜದ ಉದ್ಧಾರಕನಂತೆ ಮಾತನಾಡುವ ಯತ್ನಾಳ ಅವರು ಸಮಾಜಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.

ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲದ ಕಾರಣಕ್ಕೆ ಯಡಿಯೂರಪ್ಪ ವಿರುದ್ಧ, ಮಠಾಧೀಶರ ವಿರುದ್ಧ, ಲಿಂಗಾಯತ ಮುಖಂಡರ ವಿರುದ್ಧ ಹರಿಹಾಯುತ್ತಿದ್ದಾರೆ ಎಂದು ಆರೋಪಿಸಿದರು.

ಪಂಚಮಸಾಲಿ ಸಮಾಜವನ್ನು ಹಿಂದುಳಿದ 2 ‘ಎ’ಗೆ ಸೇರ್ಪಡೆ ಮಾಡುವಂತೆ ನಡೆಯುತ್ತಿರುವ ಹೋರಾಟದಲ್ಲಿ ಸೇರಿಕೊಂಡಿರುವ ಇವರಿಗೆ ಸಮಾಜದ ಬಗ್ಗೆ ಪ್ರಮಾಣಿಕವಾದ ಕಳಕಳಿ ಇಲ್ಲ. ಈ ಹಿಂದೆ ಇದೇ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಬೆಳಗಾವಿಯಲ್ಲಿ ಹಿಗ್ಗಾಮುಗ್ಗಾ ಟೀಕಿಸಿದ್ದರು ಎಂಬುದು ಸಮಾಜ ಮರೆತಿಲ್ಲ ಎಂದರು.

ರಾಜಕೀಯವಾಗಿ ಯಾರಾರೆಲ್ಲ ಇವರಿಗೆ ಉಪಕಾರ ಮಾಡಿದ್ದಾರೋ ಅವರೆಲ್ಲರನ್ನೂ ಯತ್ನಾಳ ಬಿಡದೇ ಬೈಯ್ದಿದ್ದಾರೆ, ಟೀಕಿಸಿದ್ದಾರೆ. ಇದೀಗ ಜಿಲ್ಲೆಯ ಕಾಂಗ್ರೆಸ್‌ ಶಾಸಕರೊಬ್ಬರೂ ಸೇರಿಕೊಂಡಿದ್ದಾರೆ ಎಂದು ಹೇಳಿದರು.

ಮಾತೆತ್ತಿದ್ದರೆ ವಾಜಪೇಯಿ ಅವರ ಜೊತೆ ಸಚಿವನಾಗಿ ಕೆಲಸ ಮಾಡಿದ್ದೇನೆ ಎಂದು ಹೇಳುವ ಇವರು,ವಾಜಪೇಯಿ ಅವಧಿಯಲ್ಲಿ ಪೋಖ್ರಾನ್ಅಣುಪರೀಕ್ಷೆ ನಡೆಸುತ್ತಿರುವ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲು ಹೊರಟಿದ್ದರು. ನಗರದಲ್ಲಿ ವಾಜಪೇಯಿ ಮೂರ್ತಿ ಮಾಡಿದ್ದಾರೆ. ಆದರೆ, ವಾಜಪೇಯಿ ಅವರ ಇಂತಹ 10 ಮೂರ್ತಿ ಮಾಡಿದರೂ ಅವರ ಪಾಪ ತೀರಲ್ಲ ಎಂದು ಟೀಕಿಸಿದರು.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷರೂ ಆದ ಶಾಸಕ ಶಿವಾನಂದ ಪಾಟೀಲ, ಸಚಿವ ಮುರುಗೇಶ ನಿರಾಣಿ ಬಗ್ಗೆಯೂ ಈ ಹಿಂದೆ ಆರೋಪಗಳನ್ನು ಮಾಡಿದ್ದಾರೆ. ಆದರೆ, ಇವರದೇ ಸಿದ್ಧಸಿರಿ ಸಂಸ್ಥೆಯಲ್ಲಿ ರೊಕ್ಕ ತೆಗೆದುಕೊಂಡು ನೌಕರರನ್ನು ನೇಮಿಸಿಕೊಂಡಿದ್ದಾರೆ ಎಂದು ಆಪಾದಿಸಿದರು.

ಅವರ ಬಳಿ ಸಿಡಿ ಇವೆ, ಇವರ ಬಳಿ ಸಿಡಿ ಇವೆ. ಸ್ವಾಮೀಜಿಗಳು ಮಠದಲ್ಲಿ ಸಿಡಿ ನೋಡಿ ಆನಂದಿಸಿದ್ದಾರೆ ಎಂದು ಆರೋಪಿಸುತ್ತಾರೆ. ಆದರೆ, ಮಾಧ್ಯಮಗಳಲ್ಲಿ ಇವರ ಸಿಡಿ ಪ್ರಸಾರವಾಗದಂತೆ ಸ್ಟೇ ಏಕೆ ತಂದಿದ್ದಾರೆ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೇ ಅವರು ಕುಟುಕಿದರು.

ನಗರದಲ್ಲಿ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಶಾಸಕರು ಗಮನ ಹರಿಸುತ್ತಿಲ್ಲ. ಜನಸಾಮಾನ್ಯರ ಕೈಗೆ ಸಿಗುತ್ತಿಲ್ಲ. ಯಡಿಯೂರಪ್ಪ ಅವರು ಕೊಟ್ಟಿರುವ ಅನುದಾನದಿಂದ ಒಂದಷ್ಟು ಕೆಲಸ ಆಗುತ್ತಿವೆ. ರಾಜ್ಯದಲ್ಲಿ ಅತೀ ಭ್ರಷ್ಟ ಕ್ಷೇತ್ರ ಯಾವುದಾದರೂ ಇದ್ದರೆ ಅದು ವಿಜಯಪುರ ಎಂಬ ಆರೋಪ ಕೇಳಿಬರುತ್ತಿದೆ. ಇಲ್ಲಿ ಪ್ರತಿ ಕೆಲಸಕ್ಕೂ ಗುತ್ತಿಗೆದಾರರಿಂದ 10–12 ಪರ್ಸೆಂಟ್ ಕಮಿಷನ್‌ ತೆಗೆದುಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಗುಣಮಟ್ಟದ ಕೆಲಸಗಳು ಆಗುತ್ತಿಲ್ಲ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಬದಲಾವಣೆ ಮಾಡುವುದು, ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಬದಲಾವಣೆ ಆದರೂ, ಆಗದಿದ್ದರೂ ನಾವು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತೇವೆ. ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು.

***

ನಾಯಕರನ್ನು ಬೈಯ್ಯುವುದು ಯತ್ನಾಳ ಅವರ ಕಾಯಂ ಕಾಯಕವಾಗಿದೆ. ಗಾಜಿನ ಮನೆಯಲ್ಲಿ ಕುಳಿತಿರುವ ಇವರು ಬೇರೆಯವರ ಮನೆಗೆ ಕಲ್ಲೊಗೆಯುವುದು ಸರಿಯಲ್ಲ

–ಭೀಮಾಶಂಕರ ಹದನೂರ,ಕೋಶಾಧ್ಯಕ್ಷ
ಬಿಜೆಪಿ ವಿಜಯಪುರ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT