ಬುಧವಾರ, ನವೆಂಬರ್ 25, 2020
19 °C

ಶಾಸಕ ದೇವಾನಂದ ಚವ್ಹಾಣಗೆ ಜೀವ ಬೆದರಿಕೆ; ವಿಧಾನಸಭಾ ಅಧ್ಯಕ್ಷರಿಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ‘ತಮಗೆ ಜೀವ ಬೆದರಿಕೆ ಇದ್ದು, ಈ ಕುರಿತು ವಿಧಾನಸಭಾ ಅಧ್ಯಕ್ಷರಿಗೆ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ನ.19ರಂದು ದೂರು ನೀಡುತ್ತೇನೆ’ ಎಂದು ನಾಗಠಾಣ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ದೇವಾನಂದ ಚವ್ಹಾಣ ತಿಳಿಸಿದರು.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಬುಧವಾರ ಮಾತನಾಡಿದ ಅವರು, ‘ದೀಪಾವಳಿ ಅಮಾವಾಸ್ಯೆ ದಿನದಂದು ವಿಜಯಪುರ ನಗರದಲ್ಲಿರುವ ನಮ್ಮ ಮನೆಯ ಕಾಂಪೌಂಡ್‌ಗೆ ಹೊಂದಿಕೊಂಡಿದ್ದ ಶ್ರೀಗಂಧದ ಮರವನ್ನು ಕಳವು ಮಾಡಲು ಬಂದಿದ್ದ ದುಷ್ಕರ್ಮಿಗಳನ್ನು ತಡೆಯಲು ಹೋದಾಗ, ಅವಾಚ್ಯ ಶಬ್ಧಗಳಿಂದ ನನ್ನನ್ನು ನಿಂದಿಸಿದರು. ಅಲ್ಲದೇ, ನಿನ್ನನ್ನು ನೋಡಲು ಬಂದಿದ್ದೇವೆ. ಗುಂಡು ಹಾರಿಸಿ ಸಾಯಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ’ ಎಂದು ಹೇಳಿದರು.

‘ಈ ಕುರಿತು ತಕ್ಷಣವೇ ವಿಜಯಪುರದ ಆದರ್ಶನಗರ ಠಾಣೆಗೆ ಕರೆ ಮಾಡುತ್ತಿದ್ದಂತೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾದರು’ ಎಂದು ತಿಳಿಸಿದರು.

ನಾಗಠಾಣ ಕ್ಷೇತ್ರ ವ್ಯಾಪ್ತಿಯ ಹಂಚಿನಾಳ ತಾಂಡಾಕ್ಕೆ ನಮ್ಮ ಕುಟುಂಬದವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ಅಲ್ಲಿ ಕೆಲವರು, ‘ಎಷ್ಟು ದಿನ ಗನ್‌ಮ್ಯಾನ್‌ ಇಟ್ಟುಕೊಂಡು ತಿರುಗಾಡುತ್ತಾನೋ ತಿರುಗಾಡಲಿ, ನೋಡಿಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದರು.

‘ನಾಗಠಾಣ ಕ್ಷೇತ್ರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳು ಮಾಪಿಯಾ, ಗಾಂಜಾ ಮಾರಾಟ, ಜೂಜಾಟಕ್ಕೆ ಕಡಿವಾಣ ಹಾಕಿದ ಕಾರಣಕ್ಕೆ ಈ ಬೆದರಿಕೆ ಕರೆಗಳು ಬರುತ್ತಿವೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಹೆಚ್ಚು ಕಡಿಮೆಯಾದರೆ ಸರ್ಕಾರವೇ ಹೊಣೆಯಾಗಬೇಕು’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು