ಬುಧವಾರ, ಜನವರಿ 26, 2022
26 °C

ಪರಿಷತ್‌ ಚುನಾವಣೆ: ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ನಿಶ್ಚಿತ -ಎಂ.ಬಿ.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ವಿಜಯಪುರ–ಬಾಗಲಕೋಟೆ ವಿಧಾನಸಭಾ ದ್ವಿಸದಸ್ಯ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ ಎಂದು ಮಾಜಿ ಜಲ ಸಂಪನ್ಮೂಲ ಸಚಿವ, ಶಾಸಕ ಎಂ.ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ಗೌಡ ಪಾಟೀಲ ಅವರು ಐದು ಸಾವಿರ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದು ಪುನರಾಯ್ಕೆಯಾಗುವುದು ಖಚಿತ ಎಂದರು.

ಬಾಗಲಕೋಟೆ ಮತ್ತು ವಿಜಯಪುರ ಅವಳಿ ಜಿಲ್ಲೆಯ ಕಾಂಗ್ರೆಸ್‌ ಶಾಸಕರು, ಮಾಜಿ ಶಾಸಕರು, ಸಚಿವರು, ಮುಖಂಡರು ಒಗ್ಗಟ್ಟಿನಿಂದ ಚುನಾವಣಾ ಪ್ರಚಾರ ನಡೆಸಿದ್ದೇವೆ. ಪಕ್ಷದಲ್ಲಿ ಯಾವುದೇ ಭಿನ್ನಮತ, ಅಸಮಾಧಾನವಿಲ್ಲ. ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್.ಪಾಟೀಲ ಅವರೂ ಸಹ ಸುನೀಲ್‌ಗೌಡ ಪರ ಪ್ರಚಾರ ನಡೆಸಿ, ಊಹಾಪೂಹಗಳಿಗೆ ತೆರೆ ಎಳೆದಿದ್ದಾರೆ ಎಂದು ಹೇಳಿದರು.

ವಿಜಯಪುರ–ಬಾಗಲಕೋಟೆ ದ್ವಿ ಸದಸ್ಯ ಕ್ಷೇತ್ರಕ್ಕೆ ಇಬ್ಬರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಹೈಕಮಾಂಡ್‌ಗೆ ಜಿಲ್ಲಾ ಕಾಂಗ್ರೆಸ್‌ನಿಂದ ಮನವಿ ಮಾಡಿದ್ದೆವು. ಆದರೆ, ಸುನೀಲ್‌ಗೌಡ ಅವರೊಬ್ಬರಿಗೆ ವರಿಷ್ಠರು ಟಿಕೆಟ್‌ ನೀಡಿದ್ದಾರೆ. ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ ಎಂದರು.

ರಾಜ್ಯದ 25 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದರು.

ಹಳ್ಳಿಗಳ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾಗಲಿದೆ ಎಂದು ಮಹಾತ್ಮಗಾಂಧಿ ಅವರು ಗ್ರಾಮ ಸ್ವರಾಜ್ಯದ ಕನಸು ಕಂಡಿದ್ದರು. ಗಾಂಧಿ ಅವರ ಕನಸನ್ನು ಸಾಕಾರಗೊಳಿಸಲು ಪ್ರಥಮ ಪ್ರಧಾನಿ ಜವಾಹರಲಾಲ ನೆಹರೂ ಅವರು ಪಂಚಾಯತ್‌ ರಾಜ್‌ ವ್ಯವಸ್ಥೆ ಜಾರಿಗೆ ತಂದರು. ಬಳಿಕ ರಾಜೀವ್‌ ಗಾಂಧಿ ಅವರು ಪಂಚಾಯತ್‌ ರಾಜ್‌ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಎಸ್‌ಸಿ, ಎಸ್‌ಟಿ, ಹಿಂದುಳಿದವರು, ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿ ಶಕ್ತಿ ತುಂಬಿದ್ದಾರೆ ಎಂದರು.

ರಾಮಕೃಷ್ಣ ಹೆಗಡೆ ಮತ್ತು ನಜೀರ್‌ಸಾಬ್‌, ಎಂ.ವೈ.ಘೋರ್ಪಡೆ ಅವರು ಸಹ ಪಂಚಾಯತ್ ರಾಜ್‌ ವ್ಯವಸ್ಥೆಯನ್ನು ರಾಜ್ಯದಲ್ಲಿ ಮಾದರಿಯಾಗಿ ಕಟ್ಟಿ ಬೆಳಸಿ, ಬಲಪಡಿಸಿದ್ದಾರೆ ಎಂದು ಹೇಳಿದರು.

ಯು‍ಪಿಎ ಸರ್ಕಾರವು  ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ಮಾಡುವ ಮೂಲಕ ಹಳ್ಳಿ ಜನರಿಗೆ ಉದ್ಯೋಗ ದೊರೆಯುವಂತೆ ಮಾಡಿದೆ. ಸಿದ್ದರಾಮಯ್ಯ ಸರ್ಕಾರವೂ ಪಂಚಾಯತ್‌ ರಾಜ್‌ ವ್ಯವಸ್ಥೆ ಬಲಪಡಿಸಲು ಆದ್ಯತೆ ನೀಡಿತ್ತು ಎಂದರು.

ಕಾಂಗ್ರೆಸ್‌ನ ಡಾ.ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಗ್ರಾಮ ಸ್ವರಾಜ್ಯ ಕಲ್ಪನೆ ಹೆಚ್ಚು ಬಲ ಪಡೆದುಕೊಂಡಿತ್ತು. ಅಧಿಕಾರ ವಿಕೇಂದ್ರೀಕರಣ ಕಾಂಗ್ರೆಸ್‌ನ ಆಶಯವಾಗಿದೆ ಎಂದು ಹೇಳಿದರು.

ಕೇವಲ ನಗರಗಳು ಅಭಿವೃದ್ಧಿ ಆದರೆ ಸಾಲದು, ಹಳ್ಳಿಗಳು ಅಭಿವೃದ್ಧಿಯಾಗಬೇಕು ಆಗ ದೇಶ ಅಭಿವೃದ್ಧಿಯಾಗಲಿದೆ ಎಂಬುದು ಕಾಂಗ್ರೆಸ್‌ ಪಕ್ಷದ ಆಶಯವಾಗಿದೆ ಎಂದು ಹೇಳಿದರು.

ಗ್ರಾಮಗಳ ಆಡಳಿತ ಗ್ರಾಮಗಳ ಮೂಲಕವೇ ನಡೆಯಬೇಕೆಂದು ಕಾಂಗ್ರೆಸ್ ಬಯಸಿತ್ತು. ಆದರೆ, ಈಗಿನ ಬಿಜೆಪಿ ಸರ್ಕಾರದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಬಹಳ ಕೆಟ್ಟ ಪರಿಸ್ಥಿತಿ ಇದೆ. ಇದನ್ನು ಸುಧಾರಿಸಲು ವಿಧಾನ ಪರಿಷತ್ತಿನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುನೀಲಗೌಡ ಪಾಟೀಲರನ್ನು ಬಹುಮತದಿಂದ ಆರಿಸಿ ತರಬೇಕು ಎಂದರು.

ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಆಡಳಿತಕ್ಕೆ ಬರುವುದರಿಂದ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಹೆಚ್ಚು ಅನುಕೂಲ ಆಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡರಾದ ಬಸವರಾಜ ದೇಸಾಯಿ, ಡಾ.ಮಹಾಂತೇಶ ಬಿರಾದಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

****

ಪಕ್ಷೇತರ ಅಭ್ಯರ್ಥಿ ಲೋಣಿ ಇದುವರೆಗೆ ಕಾಂಗ್ರೆಸ್‌ ಪರವಾಗಿ ಯಾವುದೇ ಚುನಾವಣೆ ಮಾಡಿಲ್ಲ. ಪರಿಷತ್‌ ಚುನಾವಣೆ ಟಿಕೆಟ್‌ ಕೇಳಿ ಅರ್ಜಿಯನ್ನೂ ಸಲ್ಲಿಸಿಲ್ಲ. ಅವರ ಹೇಳಿಕೆಗಳಲ್ಲಿ ಹುರುಳಿಲ್ಲ.
–ಎಂ.ಬಿ.ಪಾಟೀಲ, ಶಾಸಕ, ಬಬಲೇಶ್ವರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು