ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದೇಬಿಹಾಳ: ಹುಲುಸಾಗಿ ಬೆಳೆದ ವಿದೇಶಿ ದಾಳಿಂಬೆ ಹಣ್ಣಿನ ಗಿಡಗಳು

ಪಾಳು ಜಮೀನಲ್ಲೂ ಹುಲುಸಾಗಿ ಬೆಳೆದ ದಾಳಿಂಬೆ!
Published 6 ಅಕ್ಟೋಬರ್ 2023, 8:24 IST
Last Updated 6 ಅಕ್ಟೋಬರ್ 2023, 8:24 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ನಮ್ಮಲ್ಲಿನ ಬಹುತೇಕ ರೈತರು ಕೃಷಿ ಚಟುವಟಿಕೆ ಮಾಡಲು ಭೂಮಿ ಫಲವತ್ತಾಗಿರಬೇಕು ಎನ್ನುವರೇ ಹೆಚ್ಚು. ಹಾಗೆಂದುಕೊಂಡು ಇರುವ ಭೂಮಿ ತುಸು ಕಲ್ಲು, ಮಣ್ಣುಗಳಿಂದ ಕೂಡಿದ್ದರೆ ಅಲ್ಲಿ ಕೃಷಿ ಚಟುವಟಿಕೆ ಮಾಡುವುದಕ್ಕೆ ಹೋಗುವುದಿಲ್ಲ. ಆದರೆ, ಇಚ್ಛಾಶಕ್ತಿಯೊಂದಿದ್ದರೆ ಮನುಷ್ಯ ಎಂತ ಕಲ್ಲು, ಬಂಡೆಗಳಿರುವ ನೆಲದಲ್ಲೂ ಕೃಷಿ ಚಟುವಟಿಕೆ ಮಾಡಿ ಕೈ ತುಂಬಾ ಲಾಭ ಮಾಡಿಕೊಳ್ಳಬಹುದು ಎಂಬುದನ್ನು ಮುದ್ದೇಬಿಹಾಳ ಪಟ್ಟಣದ ರೈತರೊಬ್ಬರು ತೋರಿಸಿಕೊಟ್ಟಿದ್ದಾರೆ.

ಮುದ್ದೇಬಿಹಾಳ ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಹಡಲಗೇರಿ ಸೀಮೆಯಲ್ಲಿ ಜಮೀನು ಹೊಂದಿರುವ ಭೋಸಲೆ ಸಹೋದರರ ತೋಟಗಾರಿಕೆ ಕೃಷಿ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತಿದೆ.

ರಾಜೇಂದ್ರ ಭೋಸಲೆ ಹಾಗೂ ರವೀಂದ್ರ ಭೋಸಲೆ ಸಹೋದರರು ತಮಗಿರುವ 13 ಎಕರೆಯಷ್ಟು ಗುಡ್ಡದ ಪ್ರದೇಶದ ಜಮೀನಿನಲ್ಲಿ ವಿವಿಧ ದೇಶಿಯ ಮತ್ತು ವಿದೇಶಿಯ ತಳಿಗಳ ಹಣ್ಣಿನ ಗಿಡಗಳನ್ನು ನೆಟ್ಟು ಯಶಸ್ವಿಯಾಗಿದ್ದಾರೆ.

ಧಾರವಾಡ, ಬೆಂಗಳೂರಿನಲ್ಲಿ ನಡೆದ ತೋಟಗಾರಿಕಾ ಮೇಳಗಳಿಗೆ ಭೇಟಿ ನೀಡಿ ಅಲ್ಲಿನ ತಜ್ಞರಿಂದ ಮಾಹಿತಿ ಪಡೆದು ಬಂದು ವಿವಿಧ ತರಹೇವಾರಿ ಹಣ್ಣಿನ ಗಿಡಗಳನ್ನು ಹಚ್ಚಿದ್ದಾರೆ. ಈಗಾಗಲೇ ಫಲ ಕೊಡುವುದಕ್ಕೆ ಆರಂಭಿಸಿವೆ.

ಕಳೆದ ಎಂಟತ್ತು ವರ್ಷಗಳಿಂದ ತೋಟಗಾರಿಕೆ ಕೃಷಿ ನಡೆಸುತ್ತಿರುವ ಉದ್ಯಮಿಯೂ ಆಗಿರುವ ರಾಜೇಂದ್ರ ಭೋಸಲೆ ಹಾಗೂ ರವೀಂದ್ರ ಭೋಸಲೆ ಸಹೋದರರು ಕಲ್ಲು ಮುಳ್ಳು, ತೆಗ್ಗು ತೆವರಿನಿಂದ ಕೂಡಿದ ನೆಲದಲ್ಲಿ ಈಗ ದೇಶ ವಿದೇಶದಲ್ಲಿ ಬೆಳೆಯುವ ಹಣ್ಣಿನ ಗಿಡಗಳನ್ನು ನೆಟ್ಟು ಲಾಭ ಮಾಡಿಕೊಳ್ಳುತ್ತಿದ್ದಾರೆ. ಒಟ್ಟು ಇವರ ತೋಟದಲ್ಲಿ 30ಕ್ಕೂ ಹೆಚ್ಚು ವಿವಿಧ ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ. ಅದರಲ್ಲೂ ಅರಿಷಿಣ, ಬಿಳಿ ನೇರಳೆ, ಟೊಮೆಟೊ, ಬಾಳೆ ಇತ್ಯಾದಿ ಬೆಳೆಗಳನ್ನು ನೈಸರ್ಗಿಕ ಕೃಷಿಯಿಂದಲೇ ಬೆಳೆಯುತ್ತಿರುವುದು ಗಮನ ಸೆಳೆಯುವಂತಹದ್ದಾಗಿದೆ.

ತರಹೇವಾರಿ ಹಣ್ಣಿನ ಗಿಡಗಳು: ಭೋಸಲೆ ಅವರ ತೋಟದಲ್ಲಿ ಲಕ್ಷ್ಮಣ ಫಲ, ಅಂಜೂರ, ಟರ್ಕಿಶ್ ಅಂಜೂರ, ಡಯಾನ್ ಅಂಜೂರ, ಪೇರು, ರಾಮಫಲ, ಸೀತಾಫಲ, ಬೆಟ್ಟದ ನೆಲ್ಲಿ, ಬಾರ್ಬಡಸ್ ಚರ‍್ರಿ, ಅಮೇರಿಕನ್ ಪಿ ನಾಟ್ ಬಟರ್, ಸ್ಟಾರ್ ಫ್ರೂಟ್, ಪಮೆಲೆಯೋ ಮೋಸಂಬಿ, ಆಲ್ ಸ್ಪೈಸ್, ಲೀಚಿ, ಸೂರ್ಯನಾಂ ಚರ‍್ರಿ, ವುಡ್ ಆ್ಯಪಲ್, ಮ್ಯಾಂಗೋ ಸ್ಟೀನ್, ಲೋಂಗಾನ್, ಇಸ್ರೇಲಿ ಆಪಲ್, ಕೇರಳದಿಂದ ತರಿಸಿದ ಇಸ್ರೆಲಿ ಡೇಟ್ಸ್, ಕೂರ್ಗ್ ಆರೆಂಜ್, ಫ್ಯಾಶನ್ ಫ್ರೂಟ್, ಪರ್ಪಲ್ ಫ್ಯಾಶನ್  ಫ್ರೂಟ್, ಹುಣಸೆ ಗಿಡ ಪಿಎಂಕೆ 4, ಸಂಗಾಪುರ ರೆಡ್, ಬ್ರೆಡ್ ಫ್ರೂಟ್, ಆಲ್‌ ಸೀಸನ್ ಮ್ಯಾಂಗೋ ಹಣ್ಣಿನ ಗಿಡಗಳಿವೆ.

ಮುದ್ದೇಬಿಹಾಳ ಹೊರವಲಯದಲ್ಲಿರುವ ಭೋಸಲೆ ಅವರ ತೋಟದಲ್ಲಿ ನೈಸರ್ಗಿಕ ಕೃಷಿಯಿಂದ ಬೆಳೆದಿರುವ ಅರಿಷಿಣ ಬೆಳೆ
ಮುದ್ದೇಬಿಹಾಳ ಹೊರವಲಯದಲ್ಲಿರುವ ಭೋಸಲೆ ಅವರ ತೋಟದಲ್ಲಿ ನೈಸರ್ಗಿಕ ಕೃಷಿಯಿಂದ ಬೆಳೆದಿರುವ ಅರಿಷಿಣ ಬೆಳೆ

ಪಾಳು ಭೂಮಿಯಲ್ಲಿ ಒಮ್ಮೆಗೆ ಕೃಷಿ ಚಟುವಟಿಕೆ ಮಾಡಲು ಮುಂದಾಗುವುದು ಒಳಿತಲ್ಲ. ಹಂತಹಂತವಾಗಿ ಭೂಮಿಯ ಗುಣಧರ್ಮ ನೋಡಿಕೊಂಡು ಕೃಷಿ ಚಟುವಟಿಕೆ ಕೈಗೊಂಡರೆ ಖಂಡಿತ ಲಾಭ ಗಳಿಸಲು ಸಾಧ್ಯವಿದೆ

-ರಾಜೇಂದ್ರ ಭೋಸಲೆ ರೈತ

- ಕೃಷಿ ತೋಟಗಾರಿಕೆ ಕ್ಷೇತ್ರದಲ್ಲಿರುವಷ್ಟು ನೆಮ್ಮದಿ ಬೇರೆ ಯಾವ ಕ್ಷೇತ್ರದಲ್ಲೂ ದೊರೆಯುವುದಿಲ್ಲ. ಜಮೀನು ಇದ್ದರೆ ಮೊದಲು ಕೃಷಿ ತೋಟಗಾರಿಕೆ ಕ್ಷೇತ್ರಗಳ ಬಗ್ಗೆ ತಿಳಿದುಕೊಳ್ಳಿ. ಅಲ್ಲಿಂದ ಆರೋಗ್ಯ ನೆಮ್ಮದಿ ಲಾಭ ತನ್ನಿಂದ ತಾನೇ ಬರುತ್ತದೆ.

-ರಜತ್ ಭೋಸಲೆ ರೈತ

ಕೈ ಹಿಡಿದ ದಾಳಿಂಬೆ, ರಕ್ತಚಂದನ

ಇಂತಹ ಗುಡ್ಡಗಾಡು ಪ್ರದೇಶದಲ್ಲಿ ಏನು ಬೆಳೆ ಬರಲು ಸಾಧ್ಯವಿದೆ ಎಂದವರೇ ಹೆಚ್ಚು. ಏಳೆಂಟು ಬೋರ್ ಕೊರೆಯಿಸಿದರೂ ನೀರು ಬಿದ್ದಿರಲಿಲ್ಲ. ಕೊನೆಗೆ ಬೋರ್ ಕೊರೆಯಿಸಿದಾಗ ಎರಡು ಇಂಚಿನವರೆಗೆ ನೀರು ಬಿದ್ದಿತು. ಅಲ್ಲಿಂದ ನಾವು ಹಿಂದಿರುಗಿ ನೋಡಿಯೇ ಇಲ್ಲ. 2200 ದಾಳಿಂಬೆ ಗಿಡಗಳಿದ್ದು ವರ್ಷಕ್ಕೆ ₹5ರಿಂದ ₹6 ಲಕ್ಷ  ಲಾಭ ತಂದುಕೊಡುತ್ತದೆ. ದೂರದ ರಾಜಧಾನಿ ಇಲ್ಲವೇ ಸುತ್ತಮುತ್ತಲಿನ ಮಾರುಕಟ್ಟೆಗೆ ದಾಳಿಂಬೆ ಮಾರಾಟ ಮಾಡುತ್ತಾರೆ. ದಾಳಿಂಬೆ ಗಿಡಗಳನ್ನು ರಕ್ತಚಂದನದ ಗಿಡಗಳ ಮಧ್ಯೆಯೇ ನೆಟ್ಟಿದ್ದು ಕಳೆದ ಮೂರು ವರ್ಷಗಳಿಂದ ದಾಳಿಂಬೆ ಲಾಭ ಕೊಟ್ಟಿದೆ. ಐದು ವರ್ಷಗಳ ರಕ್ತಚಂದನ ಗಿಡಗಳು ಬೆಳೆದಿವೆ. ಇನ್ನೊಂದು 10 ವರ್ಷ ಬೆಳೆಸಿದರೆ ಅವುಗಳಿಗೆ ರೇಟ್ ಊಹೆಯೂ ಮಾಡಿಕೊಳ್ಳದಷ್ಟು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT