ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಮಹಾನಗರ ಪಾಲಿಕೆ ನಿರ್ಲಕ್ಷ್ಯ: ನಿರ್ವಹಣೆ ಇಲ್ಲದೆ ಸೊರಗಿದ ಉದ್ಯಾನಗಳು

ಆನಂದ ರಾಠೋಡ
Published 29 ಜನವರಿ 2024, 5:43 IST
Last Updated 29 ಜನವರಿ 2024, 5:43 IST
ಅಕ್ಷರ ಗಾತ್ರ

ವಿಜಯಪುರ: ಉದ್ಯಾನವೆಂದರೆ ಮಕ್ಕಳಿಂದ ವೃದ್ಧರವರೆಗೂ ಅಚ್ಚುಮೆಚ್ಚು. ದೈನಂದಿನ ಬದುಕಿನ ಜಂಜಾಟಗಳಿಂದ ಹೊರಬರಲು, ಕೆಲಹೊತ್ತು ನೆಮ್ಮದಿಯಿಂದ ಕಾಲ ಕಳೆಯಲು ಉದ್ಯಾನಗಳಿಗೆ ಹೋಗುತ್ತಾರೆ. ಮಕ್ಕಳು ಆಟವಾಡಲು, ಹಿರಿಯರು ವಾಯುವಿಹಾರ, ವ್ಯಾಯಾಮ ಮಾಡಿ ಹಸಿರು ವಾತಾವರಣದಲ್ಲಿ ಸಮಯ ಕಳೆಯಲು ಉದ್ಯಾನಗಳನ್ನೇ ಮೆಚ್ಚಿಕೊಂಡಿದ್ದಾರೆ.

ಮಹಾನಗರದ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ನೂರಾರು ಉದ್ಯಾನಗಳಲ್ಲಿ ಬೆರಳಣಿಕೆಯಷ್ಟು ಉದ್ಯಾನಗಳು ಮಾತ್ರ ದಣಿದ ಮನಸುಗಳಿಗೆ ಮುದ ನೀಡುವ, ಚೈತನ್ಯ ತುಂಬುವ, ಮುಂಜಾನೆ–ಸಂಜೆ ವಾಯು ವಿಹಾರಕ್ಕೆ, ವಿಶ್ರಾಂತಿಗೆ ಆಶ್ರಯತಾಣವಾಗಿವೆ. ಇನ್ನು ಬಹುತೇಕ ಉದ್ಯಾನಗಳು ಸೂಕ್ತ ನಿರ್ವಹಣೆ ಇಲ್ಲದೆ ಪಾಳು ಕೊಂಪೆಗಳಾಗಿ ಮಾರ್ಪಡುತ್ತಿವೆ.

ಉದ್ಯಾನಗಳಿಗೆ ಸೂಕ್ತ ಆವರಣ ಗೋಡೆ, ವಿದ್ಯುತ್‌ ದೀಪದ ವ್ಯವಸ್ಥೆ, ನೀರಿನ ವ್ಯವಸ್ಥೆ, ಹೂವಿನ ಗಿಡ, ಮರಗಳ ನಿರ್ವಹಣೆ ಇಲ್ಲದೇ ಬರಡಾಗಿವೆ. ಕಾವಲುಗಾರರು ಇಲ್ಲದ ಕಾರಣ ಕೆಲವು ಉದ್ಯಾನಗಳು ಪುಂಡ, ಪೋಕರಿಗಳಿಗೆ ಅಡ್ಡೆಯಾಗಿ ಪರಿಣಮಿಸಿವೆ. ಇನ್ನು ಕೆಲವು ಉದ್ಯಾನಗಳು ಕಸ, ತ್ಯಾಜ್ಯವನ್ನು ಎಸೆಯುವ ತೊಟ್ಟಿಯಂತಾಗಿವೆ.

ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಮಕ್ಕಳಿಗೆ ಆಡಲೆಂದೇ ಇರುವ ಜೋಕಾಲಿ, ಜಾರುಗುಂಡಿ ಪ್ರಯೋಜನಕ್ಕೆ ಬಾರದ ಸ್ಥಿತಿಯಲ್ಲಿ ಇದ್ದಂತೆ ಗೋಚರಿಸುತ್ತವೆ. ಓಪನ್‌ ಜಿಮ್‌ಗಳಲ್ಲಿರುವ ಸಾಧನ, ಸಲಕರಣೆಗಳು ಕಳಚಿ ಬಿದ್ದಿವೆ. ಕೆಲವು ಉದ್ಯಾನಗಳು ನಾಯಿ, ಬಿಡಾಡಿ ದನಕರುಗಳಿಗೆ ಆಸರೆಯಾಗಿವೆ. ಆಯಾಸ ತಣಿಸಿಕೊಳ್ಳಲು ಉದ್ಯಾನದಲ್ಲಿ ಸ್ವಲ್ಪ ಹೊತ್ತು ಕೂತು ಸಮಯ ಕಳೆಯೋಣ ಎಂದರೂ ಕಲ್ಲು ಬೆಂಚ್‌ಗಳು ಉರುಳಿ ಬಿದ್ದಿರುವುದು ಕಂಡು ಮನೆಗೆ ಮರಳುವಂತಾಗಿದೆ.

ಉದ್ಯಾನಕ್ಕೆ ಮೀಸಲಿಟ್ಟ ಜಾಗವನ್ನು ಒತ್ತುವರಿ ಮಾಡಿರುವ ಉದಾಹರಣೆಗಳು ವಿಜಯಪುರ ನಗರ ಸೇರಿದಂತೆ ಇತರೆ ತಾಲ್ಲೂಕು ಕೇಂದ್ರಗಳಲ್ಲಿ ಬೆಳಕಿಗೆ ಬಂದಿವೆ. ಆದರೂ ಅಧಿಕಾರಿಗಳು ತೆರವುಗೊಳಿಸಲು ಮುಂದಾಗಿಲ್ಲ. ನಗರದ ನಿವಾಸಿಗಳಿಗೆ ಬೆಳಿಗ್ಗೆ–ಸಂಜೆ ವೇಳೆ ವಾಯು ವಿಹಾರಕ್ಕೆ ಹೋದಾಗ ಆಹ್ಲಾದಕರ ವಾತಾವರಣ ನೀಡಬೇಕಾದ ಉದ್ಯಾನಗಳ ಸ್ಥಿತಿ ಚಿಂತಾಜನಕವಾಗಿದ್ದರೂ ಸಂಬಂಧಪಟ್ಟ ಮಹಾನಗರ ಪಾಲಿಕೆ ಸ್ವಲ್ಪವೂ ಇತ್ತ ಗಮನ ಹರಿಸುತ್ತಿಲ್ಲ.

ಹೊಸದಾಗಿ ಯಾವುದೇ ಬಡಾವಣೆ ನಿರ್ಮಾಣವಾದರೆ ಉದ್ಯಾನಕ್ಕಾಗಿ ಜಾಗ ಮೀಸಲಿರಿಸಲಾಗುತ್ತದೆ. ಇಂತಹ ಜಾಗಗಳು ವಿಜಯಪುರ ನಗರದಾದ್ಯಂತ ಸಾಕಷ್ಟಿವೆ. ಕೆಲವೆಡೆ ಉದ್ಯಾನದ ಜಾಗಗಳನ್ನು ಅತಿಕ್ರಮಿಸಿ ಕಟ್ಟಡಗಳು ತಲೆ ಎತ್ತಿವೆ. ಉದ್ಯಾನಕ್ಕಾಗಿ ಮೀಸಲು ಜಾಗ ಎನ್ನುವ ಫಲಕ ಅಳವಡಿಸಲಾಗಿದೆ. ವಾಸ್ತವದಲ್ಲಿ ಉದ್ಯಾನ ಅಭಿವೃದ್ಧಿ ಮಾಡುತ್ತಿಲ್ಲ ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರಿಗೆ ಸಂಪರ್ಕಿಸಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು.ಪಾಲಿಕೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಉದ್ಯಾನ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಅನೇಕ ವರ್ಷಗಳಿಂದ ಸಲಕರಣೆಗಳು ಹಾಳಾಗಿದ್ದು ಯಾರೂ ಗಮನಿಸುತ್ತಿಲ್ಲ. –ಎಂ.ಬಿ ಶ್ರೀಧರ ವಿಜಯ‍‍ಪುರ

ವಿಜಯಪುರ ನಗರದ ರಾಜೇಂದ್ರ ಕಾಲೋನಿಯಲ್ಲಿನ ಉದ್ಯಾನದಲ್ಲಿ ಅಳವಡಿಸಿದ್ದ ಜೋಕಾಲಿ ಹಾಗೂ ಆಟಿಕೆ ಸಲಕರಣೆಗಳು ಹಾಳಾಗಿರುವುದು.
ವಿಜಯಪುರ ನಗರದ ರಾಜೇಂದ್ರ ಕಾಲೋನಿಯಲ್ಲಿನ ಉದ್ಯಾನದಲ್ಲಿ ಅಳವಡಿಸಿದ್ದ ಜೋಕಾಲಿ ಹಾಗೂ ಆಟಿಕೆ ಸಲಕರಣೆಗಳು ಹಾಳಾಗಿರುವುದು.
ವಿಜಯಪುರ ನಗರದ ಪ್ರಕೃತಿ ಕಾಲೋನಿಯಲ್ಲಿ ನಿರ್ವಹಣೆ ಇಲ್ಲದೆ ಆಟದ ಮೈದಾನದಂತೆ ಭಾಸವಾಗುತ್ತಿರುವ ಉದ್ಯಾನವನ 
ವಿಜಯಪುರ ನಗರದ ಪ್ರಕೃತಿ ಕಾಲೋನಿಯಲ್ಲಿ ನಿರ್ವಹಣೆ ಇಲ್ಲದೆ ಆಟದ ಮೈದಾನದಂತೆ ಭಾಸವಾಗುತ್ತಿರುವ ಉದ್ಯಾನವನ 
ವಿಜಯಪುರ ನಗರದ ಸ್ವಾತಂತ್ರ್ಯ  ಕಾಲೋನಿಯಲ್ಲಿ ಹಾಳಾಗಿ ಮೂಲೆಗುಂಪಾಗಿರುವ ಸಲಕರಣೆಗಳು.
ವಿಜಯಪುರ ನಗರದ ಸ್ವಾತಂತ್ರ್ಯ  ಕಾಲೋನಿಯಲ್ಲಿ ಹಾಳಾಗಿ ಮೂಲೆಗುಂಪಾಗಿರುವ ಸಲಕರಣೆಗಳು.
ಉದ್ಯಾನದಲ್ಲಿನ ಕಸದ ರಾಶಿ ತೆರವುಗೊಳಸದೆ ಉಳಿಸಿರುವುದು. 
ಉದ್ಯಾನದಲ್ಲಿನ ಕಸದ ರಾಶಿ ತೆರವುಗೊಳಸದೆ ಉಳಿಸಿರುವುದು. 
ನಗರಲ್ಲಿ ಸಂಜೆ ಸಮಯದಲ್ಲಿ ಮಕ್ಕನ್ನು ಉದ್ಯಾನಗಳಿಗೆ ಕರೆದೊಯ್ಯಬೇಕೆಂದರೆ ಅನೇಕ ಉದ್ಯಾನಗಳಲ್ಲಿ ನಿರ್ಮಿಸಲಾದ ಜೋಕಾಲಿ ಜಾರುಗುಂಡಿ ಸಲಕರಣೆಗಳು ಮುರಿದುಹೋಗಿದೆ. 
–ಮಂಜುನಾಥ ಪವಾರ ವಿಜಯಪುರ
ಪಾಲಿಕೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಉದ್ಯಾನ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಅನೇಕ ವರ್ಷಗಳಿಂದ ಸಲಕರಣೆಗಳು ಹಾಳಾಗಿದ್ದು ಯಾರೂ ಗಮನಿಸುತ್ತಿಲ್ಲ.
–ಎಂ.ಬಿ ಶ್ರೀಧರ ವಿಜಯ‍‍ಪುರ
ನಗರದ ಅನೇಕ ಉದ್ಯಾನಗಳು ಸರಿಯಾದ ನಿರ್ವಹಣೆಯಿಲ್ಲದೆ ಹಾಳಾಗಿವೆ. ನಾಗರಿಕರು ವಾಯುವಿಹಾರವನ್ನು ರಸ್ತೆಗಳ ಪಕ್ಕದಲ್ಲೆ ಮಾಡುತ್ತಾರೆ.
–ರವಿ ಲಮಾಣಿ ಜಿಲ್ಲಾಧ್ಯಕ್ಷ ಎಐಬಿಎಸ್‌ಎಸ್‌ ಯುವಘಟಕ
ನೀರಿಲ್ಲದೆ ಸೊರಗಿದ ಉದ್ಯಾನ
ಉದ್ಯಾನ ಹಸಿರಿನಿಂದ ಕೂಡಿದ್ದರೆ ಮಾತ್ರ ಉದ್ಯಾನವನ ಎನ್ನುವ ಅರ್ಥವನ್ನು ಪಡೆದುಕೊಳ್ಳುತ್ತದೆ. ಆದರೆ ನಗರದ ಬಹುತೇಕ ಉದ್ಯಾನಗಳಲ್ಲಿ ಗಾರ್ಡ್‍ನ್ ಸೇರಿದಂತೆ ಹೂವಿನ ಗಿಡಗಳು ನೀರಿಲ್ಲದೇ ಒಣಗಿ ಹೋಗಿದೆ. ಉದ್ಯಾನವನ ನಿರ್ಮಿಸಿದ ಸಮಯದಲ್ಲಿ ನೀರಿನ ಸೌಲಭ್ಯ ನೀಡಲಾಗಿತ್ತು. ಆದರೆ ಸದ್ಯ ನಗರದ ಬಹುತೇಕ ಉದ್ಯಾನಗಳಲ್ಲಿ ನೀರಿಲ್ಲದೆ ಒಣಗುತ್ತಿದೆ. ಹೂವಿನ ಗಿಡಗಳು ಒಣಗಿ ಕಂಟಿಗಳಾಗಿ ಮಾರ್ಪಟ್ಟಿದೆ. ಸ್ಥಳೀಯ ನಿವಾಸಿಗಳು ಪಾರ್ಕ್ ಒಣಗುತ್ತಿರುವುದನ್ನು ಗಮನಿಸಿ ಪಾಲಿಕೆಗೆ ಮಾಹಿತಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಸದಾ ಹಸಿರಿನಿಂದ ಕಂಗೋಳಿಸಬೇಕಾಗಿದ್ದ ಉದ್ಯಾನಗಳಿಗೆ ನೀರಿನ ಕೊರತೆಯಿಂದ ಹಾಳು ಕೊಂಪೆಗಳಂತೆ ಉದ್ಯಾನವನಗಳು ಭಾಸವಾಗುತ್ತಿದೆ.
ಬೆರಳೆಣಿಕೆ ಉದ್ಯಾನ ಮಾದರಿ
ನಗರದಲ್ಲಿನ ಬೆರಳೆಣಿಕೆಯ ಉದ್ಯಾನಗಳು ಮಾತ್ರ ಹಸಿರು ಹೊದಿಕೆ ಹೊದ್ದು ಆಕರ್ಷಣೀಯವಾಗಿ ಮಾದರಿಯಾಗಿವೆ. ಆಯಾ ವಾರ್ಡ್‌ನ ಸಾರ್ವಜನಿಕರ ಮುತುವರ್ಜಿಯಿಂದ ವ್ಯವಸ್ಥಿತವಾಗಿವೆ. ವಾಯು ವಿಹಾರಿಗಳಿಗೆ ಹಿತ ನೀಡುವ ವಾತಾರವಣವಿದೆ. ನಗರದ ಹೊರವಲಯದ ಭೂತನಾಳ ಕೆರೆ ಉದ್ಯಾನ ಕಾಂಗ್ರೆಸ್‌ ಕಚೇರಿಯ ಮುಂಭಾಗದಲ್ಲಿನ ಉದ್ಯಾನ ಜಲನಗರ ಉದ್ಯಾನ ಸೇರಿದಂತೆ ಬೆರಳೆಣಿಕೆಯ ಉದ್ಯಾನಗಳು ಮಾತ್ರ ವಾಯು ವಿಹಾರಿಗಳಿಗೆ ಹಿತ ನೀಡುತ್ತಿದೆ. ಇದೇ ಮಾದರಿಗಳಲ್ಲಿ ಇತರೆ ಉದ್ಯಾನಗಳು ಆಗಲಿ ಎನ್ನುವುದು ಜನಸಾಮಾನ್ಯರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT