ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಗುಡಿಸಲಲ್ಲಿ ಸಿಂದಗಿ ಪುರಸಭೆ ಸದಸ್ಯೆ ವಾಸ!

ಸಿಂದಗಿಯ ಬಂದಾಳ ರಸ್ತೆ ಬದಿ ಗುಡಿಸಲಲ್ಲಿ ವಾಸವಿರುವ ಪುರಸಭೆ ಸದಸ್ಯೆ ಮಹಾದೇವಿ ನಾಯ್ಕೋಡಿ
Published 4 ಏಪ್ರಿಲ್ 2024, 23:39 IST
Last Updated 5 ಏಪ್ರಿಲ್ 2024, 3:14 IST
ಅಕ್ಷರ ಗಾತ್ರ

ಸಿಂದಗಿ (ವಿಜಯಪುರ ಜಿಲ್ಲೆ): ವಾಸಿಸಲು ಮನೆಯಿಲ್ಲ, ಉಪಜೀವನಕ್ಕೆ ಕೂಲಿ ಕೆಲಸ. ನಿತ್ಯ ಬೆಳಿಗ್ಗೆ ಸಿಕ್ಕರೆ ಕೂಲಿಗೆಲಸಕ್ಕೆ ಹೋಗುವುದು, ಇಲ್ಲದಿದ್ದರೆ ಗುಡಿಸಲಲ್ಲೇ ವಾಸ. ನೈವೇದ್ಯದ ಪ್ರಸಾದ ಅಥವಾ ಯಾರಾದರೂ ಆಹಾರ ಕೊಟ್ಟರೆ ಅದೇ ಊಟ. ಇಲ್ಲದಿದ್ದರೆ, ಉಪವಾಸ. ವೃದ್ಧಾಪ್ಯವೇತನ ಕೂಡ ಇತ್ತೀಚೆಗೆ ಅವರ ಕೈಸೇರಿಲ್ಲ...

ಇದು ವಿಜಯಪುರ ಜಿಲ್ಲೆ ಸಿಂದಗಿಯಲ್ಲಿರುವ 23ನೇ ವಾರ್ಡ್‌ನ ಪುರಸಭೆ ಕಾಂಗ್ರೆಸ್‌ ಸದಸ್ಯೆ ಮಹಾದೇವಿ ಭೀಮಶ್ಯಾ ನಾಯ್ಕೋಡಿ (80) ಅವರ ಸ್ಥಿತಿ.

ಮಹಾದೇವಿ ನಾಯ್ಕೋಡಿ ಅವರನ್ನು ಅವರ ಪುತ್ರ ಮಹಾಂತೇಶ ನಾಯ್ಕೋಡಿ ಚುನಾವಣೆಗೆ ನಿಲ್ಲಿಸಿ, 23ನೇ ವಾರ್ಡ್‌ನಿಂದ ಸ್ಪರ್ಧಿಸುವಂತೆ ಮಾಡಿ, ಗೆಲುವಿಗೆ ಶ್ರಮಿಸಿದ್ದ. ಸದ್ಯ ಮಹಾಂತೇಶ ಮಹಾರಾಷ್ಟ್ರಕ್ಕೆ ದುಡಿಯಲು ಗುಳೆ ಹೋಗಿದ್ದಾರೆ.

‘23ನೇ ವಾರ್ಡ್‌ನಲ್ಲಿ ಅನಕ್ಷರಸ್ಥರೇ ಹೆಚ್ಚಿದ್ದಾರೆ. ಅವರ ಮತಗಳಿಂದ ಮಹಾದೇವಿ ಜಯ ಗಳಿಸಿದರು. ಪುರಸಭೆಯಿಂದ ಆಶ್ರಯ ಯೋಜನೆಯಡಿ ನಿರ್ಗತಿಕರಿಗೆ ನಿವೇಶನ ನೀಡುವ ಸದಸ್ಯೆಗೆ ನಿವೇಶನ ಇಲ್ಲ. ಪುರಸಭೆ ಸಾಮಾನ್ಯ ಸಭೆ ಇದ್ದಾಗ ಸಿಗುವ ಗೌರವ ಧನವೂ ಈಗ ವರ್ಷದಿಂದ ಸ್ಥಗಿತಗೊಂಡಿದೆ.

‘ನನಗೆ ಮೂವರು ಪುತ್ರರು ಇದ್ದರೂ ಒಬ್ಬರೂ ಜೊತೆಗಿಲ್ಲ. ಒಬ್ಬ ಮಗ ಸಾಲ ಮಾಡಿ ಮಹಾರಾಷ್ಟ್ರಕ್ಕೆ ಗುಳೆ ಹೋದರೆ, ಇನ್ನೊಬ್ಬ ಮಗ ಬೇರೊಂದು ಊರಲ್ಲಿದ್ದಾನೆ. ಮತ್ತೊಬ್ಬ ಅತ್ತೆ ಮನೆಯಲ್ಲಿದ್ದಾನೆ’ ಎಂದು ಮಹಾದೇವಿ ತಿಳಿಸಿದರು.

‘ಮಹಾದೇವಿ ವಾಸವಿರುವ ಗುಡಿಸಲು ಲೇಔಟ್ ರಸ್ತೆಯಲ್ಲಿದೆ. ಸಂಬಂಧಿಸಿದವರು ಗುಡಿಸಲು ಖಾಲಿ ಮಾಡಲು ಒತ್ತಾಯಿಸಿದ್ದಾರೆ. ಪುರಸಭೆಯಿಂದ ನಿರ್ಗತಿಕರಿಗೆ ಮನೆ ಕಟ್ಟಿಸಿಕೊಡುವ ಹಲವಾರು ಸರ್ಕಾರಿ ಯೋಜನೆಗಳಲ್ಲಿ ಸದಸ್ಯೆಗೆ ಒಂದು ಮನೆ ಮಂಜೂರು ಮಾಡಿಕೊಡಬೇಕು’ ಎಂದು ಇದೇ ವಾರ್ಡ್‌ನ ನಿವಾಸಿ ಈರಣ್ಣ ಮೇತ್ರಿ ತಿಳಿಸಿದರು.

ಮಹಾದೇವಿ ಅವರು ಗುಡಿಸಲಲ್ಲಿ ವಾಸವಿರುವುದು ಗೊತ್ತಿರಲಿಲ್ಲ. ಅವರು ಸದಸ್ಯೆಯಾದ ಕಾರಣ ಆಶ್ರಯ ಯೋಜನೆಯಲ್ಲಿ ನಿವೇಶನ ಸಿಗಲಿಕ್ಕಿಲ್ಲ. ಆದರೂ ಇಂಡಿ ಉಪವಿಭಾಗಾಧಿಕಾರಿ ಜೊತೆ ಚರ್ಚಿಸುವೆ.
-ಗುರುರಾಜ ಚೌಕಿಮಠ ಮುಖ್ಯಾಧಿಕಾರಿ ಸಿಂದಗಿ ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT