ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾರಿ ಶಕ್ತಿ ದೇಶದ ಪ್ರತೀಕ: ರಾಜ್ಯಪಾಲ ಗೆಹ್ಲೋಟ್

ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ ಘಟಿಕೋತ್ಸವ
Last Updated 19 ಡಿಸೆಂಬರ್ 2022, 13:10 IST
ಅಕ್ಷರ ಗಾತ್ರ

ವಿಜಯಪುರ: ಮಹಿಳಾ ಶಿಕ್ಷಣವು ಕುಟುಂಬ, ಸಮಾಜದ ಆಧಾರವಾಗಿದ್ದು, ನಾರಿ ಶಕ್ತಿಯು ನಮ್ಮ ದೇಶದ ಪ್ರತೀಕ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ನಡೆದ 13 ಮತ್ತು 14ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಮಹಿಳಾ ಸಶಕ್ತೀಕರಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇದನ್ನು ಎಲ್ಲಾ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಶ್ರೇಷ್ಠ ಭಾರತ, ನಿರ್ಭರ ಭಾರತ ಮಾಡಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಧಾನ ಕಾರ್ಯ ನಿರ್ವನಿರ್ವಹಿಸುತ್ತಿದ್ದು, ಮಹಿಳೆಯರು ಅದರ ಸದುಪಯೋಗ ಪಡೆದುಕೊಂಡು ಎಲ್ಲ ರಂಗದಲ್ಲೂ ಮಹಿಳೆ ಕೆಲಸ ಮಾಡಬೇಕು ಎಂದು ಹೇಳಿದರು.

ಚಿನ್ನದ ಪದಕ ಪಡೆದ ಎಲ್ಲ ಮಹಿಳೆಯರು ರಾಷ್ಟ್ರಕ್ಕೆ ಯೋಗದಾನ ಕೊಡುವುದರ ಜೊತೆಗೆ ಪ್ರೇರಣೆ ನೀಡಬೇಕು. ಈ ವಿಶ್ವವಿದ್ಯಾನಿಲಯದಿಂದ ಉತ್ತಮ ಮಟ್ಟದ ಶಿಕ್ಷಣ ತೆಗೆದುಕೊಂಡು ತಮ್ಮ ಜೀವನದಲ್ಲಿ ಮುಂದೆ ಹೋಗಲು ಹಾಗೂ ಸಬಲೀಕರಣ ಹೊಂದಲು ಈ ವಿಶ್ವವಿದ್ಯಾನಿಲಯ ಸಹಾಯಕವಾಗಿದೆ. ಮಹಿಳಾ ವಿಶ್ವವಿದ್ಯಾನಿಲಯವು ರಾಷ್ಟ್ರದ ಆದರ್ಶ ವಿಶ್ವವಿದ್ಯಾಲಯವಾಗಬೇಕು ಎಂದು ತಿಳಿಸಿದರು.

ಪ್ರಾದೇಶಿಕ ಕೇಂದ್ರ ಆರಂಭ:

ಬೀದರ್‌ನಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವುದ್ಯಾನಿಲಯದ ಪ್ರಾದೇಶಿಕ ಕೇಂದ್ರವನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗಿದೆ ಎಂದು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಹೇಳಿದರು.

ದೂರದ ಜಿಲ್ಲೆಗಳ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣದ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಈ ಕ್ರಮ ವಹಿಸಲಾಗಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಉನ್ನತ ಶಿಕ್ಷಣದ ಅವಕಾಶಗಳನ್ನು ಸೃಷ್ಟಿಸುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೊಸ ಮಹಾವಿದ್ಯಾಲಯಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆಯ ಆದೇಶದಂತೆ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನುಷ್ಠಾನಗೊಳಿಸಿ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕ ಕೋರ್ಸುಗಳನ್ನು ಆರಂಭಿಸಿದೆ ಎಂದರು.

ಹೊಸ ಶಿಕ್ಷಣ ನೀತಿಯ ಪಠ್ಯಕ್ರಮದನುಸಾರ ಭಾಷಾ ಪಠ್ಯಪುಸ್ತಕಗಳನ್ನು ಪ್ರಸಾರಾಂಗದಿಂದ ಪ್ರಕಟಿಸಲು ತೀರ್ಮಾನಿಸಲಾಗಿದ್ದು, ಪ್ರಕಟಣಾ ಕಾರ್ಯ ಪ್ರಗತಿಯಲ್ಲಿದೆ. ಈಗ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಒಟ್ಟು 4 ನಿಕಾಯಗಳಲ್ಲಿ 350 ಸ್ನಾತಕ ವಿದ್ಯಾರ್ಥಿನಿಯರು ಅಧ್ಯಯನದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ಮಹಿಳಾ ವಿಶ್ವವಿದ್ಯಾನಿಲಯವು ತನ್ನ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳಲ್ಲಿ ಹಾಗೂ ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನದ ಗರಿಷ್ಠ ಬಳಕೆ ಮಾಡುತ್ತಿದೆ. ಕನ್ನಡದಲ್ಲಿ ವಿಶ್ವವಿದ್ಯಾಲಯದ ವೆಬ್‌ಸೈಟ್ ಅನ್ನು ಸಿದ್ಧಪಡಿಸಿ ಅಳವಡಿಸಲಾಗಿದೆ. ಈ ಮೂಲಕ ಪ್ರಾದೇಶಿಕ ಭಾಷೆಯಲ್ಲಿ ವಿಶ್ವವಿದ್ಯಾಲಯದ ಮಾಹಿತಿಗಳನ್ನು ಪಡೆಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ಹೇಳಿದರು.

ಮಹಿಳಾ ವಿಶ್ವವಿದ್ಯಾನಿಲಯವು ಸಮುದಾಯದೊಂದಿಗೆ ಸಹಭಾಗಿತ್ವ ಹೊಂದುವ ನೆಲೆಯಲ್ಲಿ 5 ಗ್ರಾಮಗಳನ್ನು ದತ್ತು ಪಡೆದಿದ್ದು ಅಲ್ಲಿ ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಹಾಗೂ ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಕುಲಪತಿ ತಿಳಿಸಿದರು.

ಡಾಕ್ಟರೇಟ್‌ ಪದವಿ ಪ್ರದಾನ:

ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಸಮಾಜ ಸೇವಕಿ ಡಾ.ಎಸ್.ಜಿ.ಸುಶೀಲಮ್ಮ ಮತ್ತು ರೇಷ್ಮಾ ಕೌರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

ಇನ್ನೊಬ್ಬ ಗೌರವ ಡಾಕ್ಟರೇಟ್ ಪುರಷ್ಕೃತೆ ಗುಜರಾತ್‌ನ ಪುನರುತ್ಥಾನ ವಿದ್ಯಾಪೀಠದ ಕುಲಪತಿ ಇಂದುಮತಿ ಕಾಟದಾರೆ ಅವರು ಘಟಿಕೋತ್ಸವಕ್ಕೆ ಗೈರಾಗಿದ್ದರು.

ಘಟಿಕೋತ್ಸವದಲ್ಲಿ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು 167 ವಿದ್ಯಾರ್ಥಿನಿಯರಿಗೆ 202 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.

ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಪ್ರೊ.ಬಿ.ಎಸ್.ನಾವಿ, ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ ಕೆ.ಘಟಿಕೋತ್ಸವದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT