ಭಾನುವಾರ, ಮೇ 29, 2022
21 °C

ಗುಣಮಟ್ಟದ ಕಾಮಗಾರಿಗೆ ಸೂಚನೆ: ಬಸನಗೌಡ ಪಾಟೀಲ ಯತ್ನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಗುತ್ತಿಗೆದಾರರು ಕಾಮಗಾರಿಗಳ ಗುಣಮಟ್ಟಕ್ಕೆ ಆದ್ಯತೆ ನೀಡುವ ಜೊತೆಗೆ ಅತ್ಯಂತ ಸಮರ್ಪಕವಾಗಿಕೈಗೊಂಡು, ಮಾದರಿಯಾಗುವ ರೀತಿಯಲ್ಲಿ ಕಟ್ಟಡಗಳನ್ನು ನಿರ್ಮಿಸಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೂಚಿಸಿದರು.

ನಗರದ ಬಾಲಕರ ಮತ್ತು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ₹ 20 ಲಕ್ಷ ಮೊತ್ತದಲ್ಲಿ ಗುರುಭವನ ಕಟ್ಟಡ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2020-21ನೇ ಸಾಲಿನಲ್ಲಿ ಕೈಗೊಳ್ಳಲಾದ ಹೆಚ್ಚುವರಿ ತರಗತಿ ಕೊಠಡಿಗಳ ಉದ್ಘಾಟನೆ ಸೇರಿದಂತೆ ವಿವಿಧ ಕಾಮಗಾರಿಗಳ ಭೂಮಿಪೂಜೆ ಹಾಗೂ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಕಾಮಗಾರಿಗಳನ್ನು ಸದ್ಯ ಕೈಗೆತ್ತಿಕೊಳ್ಳಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಬಹಳ ಮುತುವರ್ಜಿ ವಹಿಸಿ ಇದನ್ನು ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು.

ಕೊರೊನಾ ಹಿನ್ನೆಲೆಯಲ್ಲಿ ಈ ಕಾಮಗಾರಿಗಳು ಈಗಾಗಲೇ ತಡವಾಗಿದ್ದು, ಮುಂಬರುವ ಫೆಬ್ರುವರಿ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಈಗಾಗಲೇ ಒದಗಿಸಲಾಗಿರುವ ಅನುದಾನವನ್ನು ಸಮರ್ಪಕವಾಗಿ ಕೈಗೊಂಡು, ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಒಂದು ವೇಳೆ ಅನುದಾನದ ಕೊರತೆಯಾದ್ದಲ್ಲಿ ಮತ್ತೆ ಅನುದಾನವನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ಇಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳು ಮುಂದಿನ ದಿನಗಳಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಕಲಿಯಲು ಹಾಗೂ ಶಿಕ್ಷಕರಿಗೆ ಕಲಿಸುವಂತಹ ಚಟುವಟಿಕೆಗಳಿಗೆ ಬಹಳ ಪೂರಕವಾಗಲಿವೆ ಎಂದು ಅವರು ಹೇಳಿದರು.

ಇಲ್ಲಿನ ಇನ್ನು ಕೆಲ ಕಟ್ಟಡಗಳ ಕಾಮಗಾರಿಗಳನ್ನು ಶಿಕ್ಷಕರ ದಿನವಾದ ಸೆಪ್ಟೆಂಬರ್ 5 ರೊಳಗಾಗಿ ಪೂರ್ಣಗೊಳಿಸಿದರೆ ಹೆಚ್ಚು ಅರ್ಥಪೂರ್ಣವಾಗಿ ಆ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಬಹುದು. ಅದರಂತೆ ನಗರದ ಕೆಲವು ಶಾಲಾ, ಕಾಲೇಜುಗಳ ಆವರಣದಲ್ಲಿ ಶೌಚಾಲಯಗಳ ನಿರ್ಮಾಣಕ್ಕೂ ಒತ್ತು ನೀಡಬೇಕು ಎಂದು ಶಿಕ್ಷಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸಲಹೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ  ಎನ್.ವಿ ಹೊಸೂರ, ಸಿದ್ಧು ಹಂಚನಾಳ,ಗೌಡರ, ಮ್ಯಾಗೇರಿ,ಸುರೇಶ ಪಾಟೀಲ,ಮೊರಟಗಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು