ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ತಿಂಗಳಿಗೊಮ್ಮೆ ಜಾಗೃತಿ ಸಮಿತಿ ಸಭೆ ಆಯೋಜಿಸಿ

ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
Published 20 ಜುಲೈ 2023, 11:30 IST
Last Updated 20 ಜುಲೈ 2023, 11:30 IST
ಅಕ್ಷರ ಗಾತ್ರ

ವಿಜಯಪುರ: ಪ್ರತಿ ಮೂರು ತಿಂಗಳಿಗೊಮ್ಮೆ ತಾಲ್ಲೂಕಾ ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜಾಗೃತಿ ಮತ್ತು ಉಸ್ತುವಾರಿ ಹಾಗೂ ಕುಂದು ಕೊರತೆ ಸಭೆಗಳನ್ನು ಏರ್ಪಡಿಸಿ ಆಯಾ ತಾಲ್ಲೂಕಿನ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಸಂಬಂಧಿಸಿದ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಸವನಬಾಗೇವಾಡಿ ತಾಲ್ಲೂಕಿನಲ್ಲಿ 94 ಸಿಸಿ ಅಡಿ ದಾಖಲಾದ ಅಕ್ರಮ-ಸಕ್ರಮ 14 ಪ್ರಕರಣಗಳಲ್ಲಿ ಪರಿಶಿಷ್ಟ ಜಾತಿಯ 4 ಪ್ರಕರಣಗಳನ್ನು ಸ್ಥಳ ಪರಿಶೀಲನೆ ಮಾಡಿ ಇತ್ಯರ್ಥಪಡಿಸಲು ಕಾನೂನು ಪ್ರಕಾರ ಕ್ರಮ ವಹಿಸಬೇಕು ಎಮದು ಬಸವನಬಾಗೇವಾಡಿ ತಹಶೀಲ್ದಾರರಿಗೆ ಸೂಚಿಸಿದರು.

ವೈಯಕ್ತಿಕ ಸೌಲಭ್ಯಕ್ಕಾಗಿ ಬಳಸಬೇಕಾದ ಅನುದಾನ, ಮೂಲ ಸೌಕರ್ಯಗಳಿಗೆ ಬಳಕೆಯಾಗಿರುವ ಕುರಿತು ಸಮಿತಿ ಸದಸ್ಯ ರಾಜು ಕೂಚಬಾಳ ಸಭೆಯ ಗಮನಕ್ಕೆ ತಂದಾಗ, ಇಂಡಿ ಉಪವಿಭಾಗಾದಿಕಾರಿ ಈ ಕುರಿತು ಸೂಕ್ತ ಪರಿಶೀಲನೆ ನಡೆಸಿ, ಎರಡು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದರು.

ತೊರವಿಯಲ್ಲಿ ಸ್ಮಶಾನ ಭೂಮಿ ಜಾಗ ಅಳತೆ ಕುರಿತು ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು. ಎಸ್.ಸಿ.ಪಿ. ಟಿಎಸ್‍ಪಿ ಯೋಜನೆಯ ಅಡಿಯಲ್ಲಿ ಹೊಲಿಗೆ ಯಂತ್ರದ ಟೆಂಡರ್‌ ಅನ್ನು 3 ದಿನಗಳೊಳಗೆ ಟೆಂಡರ್ ತೆರೆದು ಸದಸ್ಯರಿಗೆ ಮಾಹಿತಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.

ಬಸವನಬಾಗೇವಾಡಿ ತಾಲ್ಲೂಕಿನ ನಾಗೂರ ಪ್ರಕರಣಕ್ಕೆ ಸಂಬಂಧಿಸಿ ಉಪವಿಭಾಗಾಧಿಕಾರಿ ಇಂಡಿ, ಡಿವೈಎಸ್‍ಪಿ, ತಾಲ್ಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ನಾಗೂರಿಗೆ ಭೇಟಿ ನೀಡಿ ಸಭೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಪರಿಶಿಷ್ಟ ಜಾತಿ, ವರ್ಗದ ದೌರ್ಜನ್ಯ ತಡೆ ಅಧಿನಿಯಮ 1989ರ ಅನ್ವಯ 2023ರ ಜನೆವರಿ 1ರಿಂದ ಜೂನ್‌ 30ರವರೆಗೆ ಒಟ್ಟು 39 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 1 ಸುಳ್ಳು, 19 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. 17 ಪ್ರಕರಣಗಳು ತನಿಖೆಯಲ್ಲಿವೆ. 1 ಪ್ರಕರಣವನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಗಿದೆ. 1 ಪ್ರಕರಣ ಇತ್ಯರ್ಥಗೊಂಡಿದೆ ಎಂದು ಮಾಹಿತಿ ಒದಗಿಸಲಾಯಿತು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಮಹಾನಗರ ಪಾಲಿಕೆ ಆಯುಕ್ತ ಸೌದಾಗರ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯ ಉಪನಿರ್ದೇಶಕ ಕೆ.ಕೆ. ಚವ್ಹಾಣ, ಇಂಡಿ ಉಪವಿಭಾಗಾಧಿಕಾರಿ ಆಬಿದ್ ಗದ್ಯಾಳ, ಸಮಿತಿ ಸದಸ್ಯರಾದ ಅರವಿಂದ ಸಾಲವಾಡಗಿ, ಅಡಿವೆಪ್ಪ ಸಾಲಗಲ್, ರಾಜಶೇಖರ ಕೂಚಬಾಳ, ವಿನಾಯಕ ಗುಣಸಾಗರ, ಮುತ್ತಣ್ಣ ಸಾಸನೂರ, ಮನೋಹರ ಕಾಂಬಳೆ, ಬಸವರಾಜ ಪೂಜಾರಿ, ಶಿವಾನಂದ ಪಟ್ಟೇದ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕಾ ಮಟ್ಟದ ಅಧಿಕಾರಿಗಳು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT