ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ‘ಪರ್ವ’ ಮಹಾ ರಂಗಪ್ರಯೋಗ ಏ.20 ರಂದು

ಸಾಹಿತಿ ಭೈರಪ್ಪ ಕಾದಂಬರಿ ಆಧಾರಿತ ಸುದೀರ್ಘ ನಾಟಕ ಪ್ರದರ್ಶನ
Last Updated 1 ಏಪ್ರಿಲ್ 2022, 13:06 IST
ಅಕ್ಷರ ಗಾತ್ರ

ವಿಜಯಪುರ: ಸಾಹಿತಿ ಎಸ್‌.ಎಲ್‌. ಭೈರಪ್ಪ ರಚಿತ ಕಾದಂಬರಿ ಆಧಾರಿತ ‘ಪರ್ವ’ ಮಹಾ ರಂಗಪ್ರಯೋಗ ಏಪ್ರಿಲ್‌ 20ರಂದು ಮಧ್ಯಾಹ್ನ 3.30 ರಿಂದ ರಾತ್ರಿ 11ರ ರವರೆಗೆ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘7.30 ಗಂಟೆಗಳ ಕಾಲ ಪ್ರದರ್ಶನವಾಗಲಿರುವ ಈ ನಾಟಕದ ನಡುವೆ ತಲಾ 10 ನಿಮಿಷಗಳ ಮೂರು ಚಹಾ ವಿರಾಮ ಹಾಗೂ ನಡುವೆ ಊಟಕ್ಕೆ 30 ನಿಮಿಷ ವಿರಾಮ ನೀಡಲಾಗುವುದು ಎಂದರು.

ರಂಗಪ್ರಯೋಗದ ಖರ್ಚು ವೆಚ್ಚ ಹೆಚ್ಚಿರುವುದರಿಂದ ₹ 200 ಟಿಕೆಟ್‌ ದರ ನಿಗದಿಪಡಿಸಲಾಗಿದೆ.ಸುಮಾರು 700 ಜನರಿಗೆ ವೀಕ್ಷಣೆಗೆ ಅವಕಾಶವಿದೆ ಎಂದು ಹೇಳಿದರು.

ವಿಜಯಪುರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ ಟಿಕೆಟ್‌ಗಳು ಲಭ್ಯವಿರುತ್ತದೆ. ಮತ್ತುರಂಗಾಯಣದ ವೆಬ್‌ಸೈಟ್‌ www.rangayana.org ನಲ್ಲೂ ಆನ್‌ಲೈನ್ ಮೂಲಕ ಟಿಕೆಟ್‌ ಪಡೆಯಬಹುದು ಎಂದು ತಿಳಿಸಿದರು.

600 ಪುಟಗಳ ಬೈರಪ್ಪನವರ ಪರ್ವ ಕಾದಂಬರಿಗೆ ಯಾವುದೇ ಲೋಪವಾಗದಂತೆ, ಅಷ್ಟೇ ಗಟ್ಟಿಯಾಗಿ, ವಸ್ತುನಿಷ್ಠವಾಗಿ ಆಧುನಿಕ ರಂಗಪರಿಕಲ್ಪನೆಗೆ ಹೊಸ ಆಯಾಮ ಕೊಡುವ ನಿಟ್ಟಿನಲ್ಲಿ ರಂಗ ನಿರ್ದೇಶಕ ಪ್ರಕಾಶ್‌ ಬೆಳವಾಡಿ ಅವರು ರಂಗಪಠ್ಯ ರೂಪಿಸಿ, ಮಹಾ ರಂಗಪ್ರಯೋಗವನ್ನು ನಿರ್ದೇಶನ ಮಾಡಿದ್ದಾರೆ ಎಂದರು.

35 ಕಲಾವಿದರು ಸೇರಿ ಒಟ್ಟು 50 ಜನರ ತಂಡ ಆರು ತಿಂಗಳ ಕಾಲ ಪರಿಶ್ರಮದಿಂದ ಈ ಮಹಾ ರಂಗಪ್ರಯೋಗವನ್ನು ಕಟ್ಟಿದೆ ಎಂದರು.

ಕನ್ನಡ ಕಾಯಕ ವರ್ಷದಲ್ಲಿ ಕನ್ನಡ ರಂಗಭೂಮಿ ವಿಶ್ವದ ಮತ್ತು ಭಾರತೀಯ ರಂಗಭೂಮಿಯಲ್ಲಿ ಒಂದು ಮೈಲಿಗಲ್ಲಾಗಿ ನಿಲ್ಲಬೇಕೆಂಬುದು ಮೈಸೂರು ರಂಗಾಯಣದ ಕನಸು ನನಸಾಗಿದೆ ಎಂದು ತಿಳಿಸಿದರು.

ಮೈಸೂರು, ಬೆಂಗಳೂರಿನಲ್ಲಿ ಈಗಾಗಲೇ 20 ಪ್ರದರ್ಶನಗಳನ್ನು ಯಶಸ್ವಿಯಾಗಿ ನೀಡಲಾಗಿದೆ. ರಾಜ್ಯದ ಉಳಿದ ಭಾಗದ ಜನರೂ ಈ ಮಹಾ ರಂಗಪ್ರಯೋಗವನ್ನು ಕಣ್ತುಂಬಿಕೊಳ್ಳಲಿ ಎಂಬ ಕಾರಣಕ್ಕೆ 20 ಕಡೆ ಪ್ರದರ್ಶನ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪರ್ವ ನಾಟಕ ಪ್ರದರ್ಶನಕ್ಕೆ ₹ 50 ಲಕ್ಷ ಬಿಡುಗಡೆ ಮಾಡಿದೆ. ಒಂದು ವರ್ಷದಿಂದ ಪರ್ವಕ್ಕಾಗಿ ಆಯ್ಕೆ ಮಾಡಿಕೊಂಡಿರುವ 35ಕ್ಕೂ ಹೆಚ್ಚು ಕಲಾವಿದರಿಗೆ ಮಾಸಿಕ ಸಂಭಾವನೆ ನೀಡಲಾಗುತ್ತಿದ್ದು, ಇದಕ್ಕಾಗಿ ₹ 38 ಲಕ್ಷ ವೆಚ್ಚವಾಗಿದೆ ಎಂದರು.

ವ್ಯಾಸ ಮಹರ್ಷಿಗಳು ‘ಮಹಾಭಾರತ’ವನ್ನು ಆಧಾರವಾಗಿಟ್ಟುಕೊಂಡು ರಚಿತವಾಗಿರುವ ‘ಪರ್ವ’ ಕಾದಂಬರಿ ನಮ್ಮ ಕಾಲದ ಒಂದು ಶ್ರೇಷ್ಠ ಕಲಾಕೃತಿಯಾಗಿದೆ. ಈ ಕೃತಿ ವಿಶ್ವ ಮನ್ನಣೆ ಪಡೆದಿದೆ. ಶೃಂಗ ರಾಷ್ಟ್ರಗಳ ಆಶಯದಂತೆ ಪರ್ವ ಕಾದಂಬರಿ ವಿಶ್ವದ ಅನೇಕ ಭಾಷೆಗಳಲ್ಲಿ ಅನುವಾದಗೊಳ್ಳುತ್ತಿದೆ. ಪ್ರಸ್ತುತ ರಷ್ಯನ್‌, ಮ್ಯಾಂಡರಿನ್‌ ಭಾಷೆಗಳಲ್ಲಿ ಅನುವಾದಗೊಂಡಿದೆ. ಈಗಾಗಲೇ ಭಾರತದ ಅನೇಕ ಭಾಷೆಗಳಿಗೆ ಅನುವಾದಗೊಂಡು ಇದೊಂದು ಸಾರ್ವಕಾಲಿಕ ಕೃತಿಯಾಗಿ ವಿಜೃಂಭಿಸಿದೆ ಎಂದು ಹೇಳಿದರು.‌

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಬಿ., ಜಿಲ್ಲಾ ಯುವ ಪರಿಷತ್‌ ಅಧ್ಯಕ್ಷ ಶರಣು ಸಬರದ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

**
ವಿಜಯಪುರ ಜಿಲ್ಲೆಯ ರಂಗಾಸಕ್ತರು, ರಂಗಕರ್ಮಿಗಳು, ಕಲಾವಿದರು, ಸಾಹಿತಿಗಳು, ಮಾಧ್ಯಮದವರು ಹಾಗು ಜನರು ‘ಪರ್ವ’ ಮಹಾರಂಗ ಪ್ರಯೋಗ ವೀಕ್ಷಣೆ ಮಾಡಬೇಕು
–ಅಡ್ಡಂಡ ಸಿ.ಕಾರ್ಯಪ್ಪ,ನಿರ್ದೇಶಕ,ರಂಗಾಯಣ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT