ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಇಳಿಸಿ-ಎನ್‌.ಎಸ್‌.ಭೋಸರಾಜ್‌

ಎಐಸಿಸಿ ಪ್ರಧಾನ ಕಾರ್ಯದರ್ಶಿ ಎನ್‌.ಎಸ್‌.ಭೋಸರಾಜ್‌ ಆಗ್ರಹ
Last Updated 14 ಜೂನ್ 2021, 16:35 IST
ಅಕ್ಷರ ಗಾತ್ರ

ವಿಜಯಪುರ: ಕೇಂದ್ರ ಮತ್ತು ಸರ್ಕಾರಗಳು ತಕ್ಷಣ ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕ ಮತ್ತು ಮಾರಾಟ ತೆರಿಗೆಯನ್ನು ಕಡಿತ ಮಾಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಎನ್‌.ಎಸ್‌.ಭೋಸರಾಜ್‌ ಆಗ್ರಹಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್‌, ಡೀಸೆಲ್‌ ಮತ್ತು ಗ್ಯಾಸ್ (ಅಡುಗೆ ಅನಿಲ) ದರ ಏರಿಕೆಯ ಪರಿಣಾಮ ಜನಜೀವನ ನಡೆಸುವುದು ಕಷ್ಟವಾಗಿದೆ ಎಂದು ಹೇಳಿದರು.

ತೈಲ ದರ ಏರಿಕೆಗೆ ಈ ಹಿಂದಿನ ಯುಪಿಎ ಸರ್ಕಾರ ಕಾರಣ ಎಂದು ಹೇಳುವ ಮೂಲಕ ಪ್ರಧಾನಿ ಅವರು ದೇಶದ ಜನರನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

ಕೋವಿಡ್‌ ಸಾವಿನ ಅಂಕಿ–ಅಂಶಗಳನ್ನು ಸರ್ಕಾರ ಮರೆಮಾಚಿದೆ. ಈ ಸಂಬಂಧ ಕೋವಿಡ್‌ ಡೆತ್‌ ಆಡಿಟ್ ಆಗಬೇಕು ಎಂದು ಒತ್ತಾಯಿಸಿದರು.

ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಅವಾಂತರಗಳು ಜನರನ್ನು ಹೈರಾಣಾಗಿಸಿವೆ ಎಂದು ಆರೋಪಿಸಿದರು.

ಕೋವಿಡ್‌ ಲಸಿಕೆ ವಿಷಯದಲ್ಲಿ ಸರ್ಕಾರ ಸರಿಯಾದ ಯೋಜನೆ ರೂಪಿಸಲಿಲ್ಲ. ಗೊಂದಲ ನಿರ್ಮಿಸಿದೆ. ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದ ಮೇಲೆ ಹಾಗೂಕಾಂಗ್ರೆಸ್‌ ಆಗ್ರಹಕ್ಕೆ ಮಣಿದ ಪ್ರಧಾನಿ ಅವರು ಇದೀಗ ದೇಶದ ಜನರಿಗೆ ಕೋವಿಡ್‌ ಲಸಿಕೆ ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ ಎಂದರು.

ಕೃಷಿ ಕಾಯ್ದೆ ರದ್ದುಗೊಳಿಸುವಂತೆ ರೈತರು ಹೋರಾಟ ನಡೆಸಿದರೂ ಸರ್ಕಾರ ಸ್ಪಂದಿಸಲಿಲ್ಲ. ರೈತರ ವಿರುದ್ಧವೇ ಪ್ರಕರಣ ದಾಖಲಿಸಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಮೋದಿ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.

ಕಣ್ಮುಚ್ಚಿ ಕುಳಿತ ಸರ್ಕಾರ:

ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಎಷ್ಟು ಜನ ಆರೋಗ್ಯ ಸಚಿವರಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಆಕ್ಸಿಜನ್‌, ರೆಮ್‌ಡಿಸಿವಿರ್‌, ವೆಂಟಿಲೇಟರ್‌, ಬೆಡ್‌, ಕೋವಿಡ್‌ ಲಸಿಕೆಗೆ ಸಂಬಂಧಿಸಿದಂತೆ ಐದು ಸಚಿವರು ಒಂದೊಂದು ಹೇಳಿಕೆ ನೀಡುತ್ತಾರೆ ಎಂದು ವ್ಯಂಗ್ಯವಾಡಿದರು.

ಎಂದೂ ನೋಡಿರಲಿಲ್ಲ:

ಮಾಜಿ ಶಾಸಕ ಸಿ.ಎಸ್‌.ನಾಡಗೌಡ, ಇಷ್ಟೊಂದ ಬೇಜವಾಬ್ದಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಎಂದೂ ನೋಡಿರಲಿಲ್ಲ. ಪ್ರಧಾನಿ ಮೋದಿ ಅವರಿಗೆ ಅಂಬಾನಿ, ಅದಾನಿ ಅವರನ್ನು ಪ್ರಪಂಚದ ನಂ.1 ಶ್ರೀಮಂತರನ್ನಾಗಿಸುವ ಉದ್ದೇಶ ಬಿಟ್ಟಿರೆ ಅವರ ಮುಂದೆ ಬೇರೇನೂ ಇಲ್ಲ ಎಂದು ಹೇಳಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಅಲಗೂರ, ಮುಖಂಡರಾದ ಅಬ್ದುಲ್‌ ಹಮೀದ್‌ ಮುಶ್ರೀಫ್‌, ರಾಜಶೇಖರ ಮೆಣಸಿನಕಾಯಿ, ಎಸ್‌.ಎಂ.ಪಾಟೀಲ ಗಣಿಗಾರ, ಮಹ್ಮದ್‌ ರಫೀಕ್‌ ಟಪಾಲ, ಸುನೀಲ್‌ ಉಕ್ಕಲಿ, ಜಮೀರ್‌ ಬಕ್ಷಿ, ಆರತಿ ಶಹಾಪುರ, ಮಲ್ಲಿನಗೌಡ ಬಿರಾದಾರ, ವಸಂತ ಹೊನಮೋಡೆ, ಶಬ್ಬೀರ್‌ ಜಹಗೀರದಾರ್‌, ಚನ್ನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

* ದೇಶದ ಜನರ ಹಿತಕಾಯುವ ಬದಲು ವಿದೇಶಗಳಿಗೆ ಕೋವಿಡ್‌ ಲಸಿಕೆಯನ್ನು ರಫ್ತು ಮಾಡಿದರು. ಪರಿಣಾಮ ದೇಶದಲ್ಲಿ ಲಕ್ಷಾಂತರ ಜನರು ಕೋವಿಡ್‌ನಿಂದ ಸಾವಿಗೀಡಾಗುವಂತಾಯಿತು

-ಎನ್‌.ಎಸ್‌.ಭೋಸರಾಜ್‌, ಪ್ರಧಾನ ಕಾರ್ಯದರ್ಶಿ, ಎಐಸಿಸಿ

* ಕೋವಿಡ್‌ ಸಂಕಷ್ಟದ ನಡುವೆ ಬೆಲೆ ಏರಿಕೆಯಿಂದ ಜನರಿಗೆ ಹೇಳತೀರದಷ್ಟು ಅನಾನುಕೂಲವಾಗುತ್ತಿದ್ದರೂ ಕೇಂದ್ರ ರಾಜ್ಯ ಸರ್ಕಾರಗಳು ಕಣ್ಮುಚ್ಚಿ ಕುಳಿತಿವೆ

-ಶಿವಾನಂದ ಪಾಟೀಲ, ಶಾಸಕ, ಬಸವನ ಬಾಗೇವಾಡಿ

* ಸರ್ಕಾರದ ಜನವಿರೋಧಿ ನೀತಿಯನ್ನು ಟೀಕಿಸುವವರು, ವಿರೋಧಿಸುವವರು, ಪ್ರತಿಭಟಿಸುವವರ ವಿರುದ್ಧ ರಾಷ್ಟ್ರದ್ರೋಹದ ಕೇಸು ಹಾಕುವ ಮೂಲಕ ಹಿಟ್ಲರ್‌ ಆಡಳಿತ ನಡೆಸುತ್ತಿದ್ದಾರೆ

-ಸಿ.ಎಸ್‌.ನಾಡಗೌಡ, ಮಾಜಿ ಶಾಸಕ, ಮುದ್ದೇಬಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT