ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿಗೆ ಆಗ್ರಹ

ಜಿಲ್ಲಾಧಿಕಾರಿ ಕಚೇರಿ ಎದುರು ಶ್ರೀರಾಮ ಸೇನೆ ಕಾರ್ಯಕರ್ತರ ಪ್ರತಿಭಟನೆ
Last Updated 17 ಆಗಸ್ಟ್ 2020, 11:22 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್‌ ನೆಪದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಸರ್ಕಾರ ನಿಷೇಧಿಸಿರುವುದನ್ನು ಖಂಡಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಸ್ವಾತಂತ್ರ್ಯದ ಕಿಚ್ಚು ಹಚ್ಚಲು ಮನೆಯಲ್ಲಿದ್ದ ಗಣೇಶನನ್ನು ಸಾರ್ವಜನಿಕಗೊಳಿಸಿ ಜಾತಿ, ಪ್ರಾಂತ, ಭಾಷೆ, ಪಕ್ಷ ಬದಿಗಿಟ್ಟು ಏಕತೆಯ ಸೂತ್ರದಲ್ಲಿ ಪ್ರೇರೇಪಿಸಿದ್ದಮಹಾನಾಯಕ ಬಾಲ ಗಂಗಾಧರ ತಿಲಕ್‌ ಅವರಿಗೆ ಮಾಡಿದ ಅವಮಾನ ಇದು ಎಂದು ಆರೋಪಿಸಿದರು.

125 ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯ ದೇಶ, ಧರ್ಮದ ರಕ್ಷಣೆಗೆ ಲಕ್ಷಾಂತರ ಯುವಕರಿಗೆ ಪ್ರೇರಣೆಯಾಗಿದೆ. ಇಂತಹ ಸಾರ್ವಜನಿಕ ಉತ್ಸವಕ್ಕೆ ಕೋವಿಡ್ ಹಿನ್ನೆಲೆಯಲ್ಲಿ ಅನುಮತಿ ನೀಡದಿರುವುದು ಅತ್ಯಂತ ನೋವಿನ, ಖಂಡನೀಯ ಸಂಗತಿಯಾಗಿದೆ ಎಂದರು.

ಪರಂಪರೆ, ಧಾರ್ಮಿಕ ಭಾವನೆ, ಶ್ರದ್ಧೆ, ಏಕತೆಯನ್ನು ಘಾಸಿಗೊಳಿಸುವುದು ಸರ್ಕಾರಕ್ಕೆ ಶೋಭೆ ತರಲ್ಲ. ತಕ್ಷಣವೇ ಸಾರ್ವಜನಿಕ ಗಣಪತಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ದೇಶದ ತುರ್ತು ಪರಿಸ್ಥಿತಿಯಲ್ಲಿಯೂ ಸಾರ್ವಜನಿಕ ಗಣೇಶೋತ್ಸವಕ್ಕೆ ವಿಘ್ನವಿರಲಿಲ್ಲ. ಈಗ್ಯಾಕೆ ನಿರ್ಬಂಧ?
ಪಕ್ಕದ ಮಹಾರಾಷ್ಟ್ರ ಹೆಚ್ಚು ಕೋವಿಡ್ ಬಾಧಿತವಿದ್ದರೂ ಅನುಮತಿ ನೀಡಿದ್ದು, ನಮ್ಮ ರಾಜ್ಯದಲ್ಲಿ ಯಾಕೆ ನೀಡುತ್ತಿಲ್ಲ? ಎಂದು ಪ್ರಶ್ನಿಸಿದರು.

ಉತ್ಸವ ಅವಲಂಬಿಸಿ ಈಗಾಗಲೇ ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ವಿಗ್ರಹಗಳನ್ನು ತಯಾರಿಸಿದ ಕಲಾವಿದರ ಪರಿಸ್ಥಿತಿ ಏನು? ಎಂದರು.

ಸರ್ಕಾರದ ಕೋವಿಡ್-19 ಸಂಬಂಧಿಸಿದ ಎಲ್ಲ ನಿಯಮಗಳನ್ನು ಪಾಲಿಸಿಕೊಂಡು ಸರಳವಾಗಿ ಸಾರ್ವಜನಿಕ ಗಣೇಶೋತ್ಸವ ಆಚರಿಸುತ್ತೇವೆ. ಪ್ರಸಾದ, ತೀರ್ಥ, ಮೆರವಣಿಗೆ ಯಾವುದನ್ನು ಮಾಡುವುದಿಲ್ಲ. ಕೇವಲ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ನೀಲಕಂಠ ಕಂದಗಲ್, ರಾಕೇಶ್ ಮಠ, ಡಾ.ಆನಂದ್ ಕುಲಕರ್ಣಿ, ಬಸವರಾಜ ಕಲ್ಯಾಣಪ್ಪಗೊಳ, ರಾಜೇಂದ್ರಕುಮಾರ ಬಿರಾದಾರ, ಶಿವಾಜಿರಾವ್‌ ಪಾಟೀಲ್, ಮಂಜುನಾಥ್ ಸಾವಳಗಿ, ಶಾಂತಕುಮಾರ್ ಮಲಗೊಂಡ, ಶಿವಾನಂದ, ರಮೇಶ್ ನಾಗಠಾಣ, ಶ್ರೀಶೈಲಗೌಡ ಬಿರಾದಾರ, ರತ್ನಾಕರ ಪಾಟೀಲ, ರವಿ ಗಾಯಕವಾಡ, ಅಭಿಷೇಕ್‌ ಸಾವಂತ, ಅಭಿಜಿತ್ ರೂಡಗಿ, ಜಗದೀಶ ರೂಗಿಮಠ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT