ತಿಕೋಟಾ: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಸಹಸ್ರಾರು ಭಕ್ತರನ್ನು ಹೊಂದಿರುವ ಹಾಗೂ ಎರಡು ಹಳ್ಳಗಳು ಸೇರಿ ಸಂಗಮವಾಗಿರುವ ಸ್ಥಳದಲ್ಲಿ ಉದ್ಭವಿಸಿದ ಲಿಂಗದ ಸ್ಥಳದಲ್ಲಿ ಸಂಗಮನಾಥ ದೇವಾಲಯ ನಿರ್ಮಾಣವಾಗಿದ್ದು, ಭಕ್ತರಿಗೆ ಬೇಡಿದ ವರ ನೀಡುವ ಆರಾಧ್ಯ ದೈವ ಆಗಿದೆ.
ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಹೊರವಲದಲ್ಲಿ ಈ ದೇವಾಲಯದ ಎತ್ತರ ಶಿಖರದಲ್ಲಿ ಶಿವ ಪಾರ್ವತಿ, ಗಣಪತಿ, ನಂದಿ, ಗಜರಾಜನ, ಶಿವಲಿಂಗ, ನಾಗರ ಹಾವುಗಳ, ಅರಳಿದ ಕಮಲ ಚಿತ್ರ, ಸಾಧು ಸತ್ಪುರುಷರ, ವಿಗ್ರಹಗಳು ಕಣ್ಮನ ಸೆಳೆಯುತ್ತವೆ.
ಗರ್ಭ ಗುಡಿಯಲ್ಲಿ ಪಂಚಲೋಹದಿಂದ ಮಾಡಿದ ಮೂರ್ತಿ, ಕಪ್ಪು ಶಿಲೆಯ ಶಿವಲಿಂಗ, ಲೋಹದ ಹೆಡೆ ಎತ್ತಿದ ನಾಗಸರ್ಪ, ಲೋಹದ ತ್ರಿಶೂಲ, ಗುಂಡಿಯಲ್ಲಿ ಲಿಂಗ, ನಂದಿ, ಹೂವಿನ ಅಲಂಕಾರಗಳಿಂದ ಮೂರ್ತಿ ಹೊಳೆಯುತ್ತದೆ. ದೇವಾಲಯದ ಸೂತ್ತಲೂ ಮೂರು ನೂರಕ್ಕೂ ಹೆಚ್ಚು ಲಿಂಗಗಳಿದ್ದು, ಈಗ ಮಣ್ಣಿನಲ್ಲಿ ಹೂತಿವೆ. ಇತ್ತೀಚಿನ ಮಳೆಗೆ ಮಣ್ಣು ಕೊಚ್ಚಿ ಒಂದು ಲಿಂಗ ಭಕ್ತರಿಗೆ ಕಾಣುತ್ತಿದೆ.
ನಿರಂತರ ರುದ್ರಾಭಿಷೇಕ:
ಪ್ರತಿ ಸೋಮವಾರ ವರ್ಷಪೂರ್ತಿ ಶಾಂತವೀರಯ್ಯ ಹಿರೇಮಠ ಅವರಿಂದ ಆ ದಿನದ ಭಕ್ತರ ರುದ್ರಾಭಿಷೇಕ ನೆರವೇರುತ್ತದೆ. ವಿಶಾಲ ಪ್ರಾಂಗಣದಲ್ಲಿ ಅನ್ನ ಪ್ರಸಾದ ನಡೆಯುವುದು.
ಜಾತ್ರಾ ವಿವರ:
ಆ.5 ರಿಂದ 19ರ ವರೆಗೆ ಪ್ರತಿದಿನ ಸಂಜೆ ಹಾನಗಲ್ ಕುಮಾರ ಶಿವಯೋಗಿಗಳ ಪುರಾಣವು ಯರನಾಳ ಹಿರೇಮಠ ಸಂಸ್ಥಾನದ ಶಿವಪ್ರಸಾದ ದೇವರು ಅವರಿಂದ ಪ್ರವಚನ, ನಂತರ ಅನ್ನ ಪ್ರಸಾದ, ಆ.11ರಂದು ಸಂಗಮನಾಥ ದೇವರ ಪಲ್ಲಕ್ಕಿ ಹಾಗೂ ವೀಣೆಯನ್ನು ಹೊಳೆ ಸ್ನಾನಕ್ಕಾಗಿ ಕೂಡಲಸಂಗಮಕ್ಕೆ ಹೋಗುವುದು.
ಆ.12ರಂದು ಶಿವಶಂಕರ ಮಠ ಅವರಿಂದ ಆ.19ರ ವರೆಗೆ ನಿರಂತರ ರುದ್ರಾಭಿಷೇಕ, ವೀಣೆ ನಿಲ್ಲಿಸುವುದು, ಮಾಂಜರಿ ಹಾಗೂ ಬಿಳ್ಳೂರ ಭಜನಾಮಂಡಳಿಯಿಂದ ಭಜನೆ, ಆ.16 ಮ್ಯೂಜಿಕಲ್ ಚೇರ್ ಆಟ, ಆ.17 ಕ್ಕೆ 1001 ಓಂ ನಮಃ ಶಿವಾಯ ಜಪಯಜ್ಞ, ಶಾಲಾ ಮಕ್ಕಳಿಗೆ ಗಾಯನ ಸ್ಪರ್ಧೆ, ಆ.18 ಸಂಜೆ ವೀಣೆ ಹಾಗೂ ಪಲ್ಲಕ್ಕಿಯ ಭವ್ಯ ಮೆರವಣಿಗೆ, ಸಂಜೆ ಪ್ರವಚನಕಾರರು ಹಾಗೂ ಅತಿಥಿಗಳಿಗೆ ಸನ್ಮಾನ, ಆ.19 ಜಾತ್ರೆ ದಿನ ಬೆಳಗ್ಗೆ ರುದ್ರಾಭಿಷೇಕ ನಂತರ ಪ್ರವಚನ ಮುಕ್ತಾಯ ಸಮಾರಂಭ, ಸಂಗಮನಾಥನ ಹಾಗೂ ಮಾಳಿಂಗೇಶ್ವರ ಪಲ್ಲಕ್ಕಿಯ ಗಂಗೆಯ ಪೂಜೆ, ನಂದಿಕೋಲ ಮೆರವಣಿಗೆ,ಗೊಂಬೆ ಕುಣಿತ, ವಿಜಯ ಲಮಾಣಿ ಅವರಿಂದ ಕಡಾಯಿ ಅನ್ನಪ್ರಸಾದ ವಿತರಣೆ, ಸಂಜೆ ಜಂಗಿ ಕುಸ್ತಿ, ರಾತ್ರಿ ‘ಮಾನವಂತರ ಮನೆತನ’ ನಾಟಕ ಪ್ರದರ್ಶನವಾಗುವುದು.
Quote - ಸಂಕಷ್ಟದಲ್ಲಿರುವ ಭಕ್ತರಿಗೆ ಬೇಡಿದ ವರ ನೀಡಿ ಸಂತೃಪ್ತಿ ನೀಡುವ ಆರಾಧ್ಯ ದೈವ ಸಂಗಮನಾಥ ಬಸನಿಂಗ ನಿಡೋಣಿ ಕಾರ್ಯದರ್ಶಿ
ಶಿವಶರಣೆ ಗಿರಿಜಾಮಾತೆ ದೇವಾಲಯ
11 ತಿಂಗಳು ಸ್ಮಶಾನ ವಾಸ ಶ್ರೀಶೈಲವರೆಗೆ ದೀಡ್ ನಮಸ್ಕಾರ ಪಂಢರಪುರ ತನಕ ಉರುಳುಸೇವೆ ಹಿಮಾಲಯದವರೆಗೆ ಪಾದಯಾತ್ರೆ ಮಾಡಿ ಐಕ್ಯರಾದ ಶಿವಶರಣೆ ಗಿರಿಜಾಮಾತೆ ದೇವಾಲಯ ಸಂಗಮನಾಥನ ಪಕ್ಕದಲ್ಲಿದ್ದು ಹೊರರಾಜ್ಯದ ಭಕ್ತರನ್ನು ಹೊಂದಿ ಪ್ರಸಿದ್ದ ಪಡೆದಿದೆ. ಬರುವ ಭಕ್ತರು ಎರಡು ದೇವಾಲಯ ದರ್ಶನ ಪಡೆದು ಪಾವನರಾಗುತ್ತಾರೆ ಎಂದು ಕಮಿಟಿ ಅಧ್ಯಕ್ಷ ಬಸವರಾಜ ಅತಾಲಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.