ಶನಿವಾರ, ನವೆಂಬರ್ 26, 2022
23 °C

ಶರಣರ ನಾಡಿನಲ್ಲಿ ಶರನ್ನಾವರಾತ್ರಿ ಸಂಭ್ರಮ

ಅಮರನಾಥ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ದೇವರಹಿಪ್ಪರಗಿ: ಪಟ್ಟಣದ ಬುದ್ನಿ ಓಣಿಯಲ್ಲಿ ಏಳು ವರ್ಷಗಳಿಂದ ಶರಣರ ನಾಡಿನ ನಾಡದೇವಿ ಉತ್ಸವ ಕಮಿಟಿಯಿಂದ ನಾಡದೇವಿಯನ್ನು ಶ್ರದ್ಧೆ, ಭಕ್ತಿಯಿಂದ ಪೂಜಿಸಲಾಗುತ್ತಿದೆ.

ಪ್ರತಿವರ್ಷ ವಿಜಯದಶಮಿಯ ಆಚರಣೆಯ ಐದು ದಿನಗಳ ಮುಂಚಿತವಾಗಿ ಪ್ರತಿಷ್ಠಾಪನೆಯಾಗುವ ನಾಡದೇವಿಯನ್ನು ಅತ್ಯಂತ ವೈಭವಪೂರ್ಣವಾಗಿ ಮೆರವಣಿಗೆಯ ಮೂಲಕ ತಂದು, ಪ್ರತಿಷ್ಠಾಪಿಸಿ ನಂತರ ಐದು ದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ಶಾಸ್ತ್ರೋಕ್ತ ಪೂಜೆ ನೆರವೇರಿಸಲಾಗುತ್ತದೆ. ರಾತ್ರಿ ವಿವಿಧ ಕಲಾವಿದರೂ, ಸಂಗೀತಗಾರರು, ವಾಗ್ಮಿಗಳ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಮನ ಸೆಳೆಯಲಾಗುತ್ತಿದೆ.

2015ರಲ್ಲಿ ಆರಂಭಗೊಂಡ ನಾಡದೇವಿ ಉತ್ಸವಕ್ಕೆ ಪರದೇಶಿಮಠದ ರೇಣುಕ ಸ್ವಾಮೀಜಿ ಹಾಗೂ ಸದಯ್ಯನಮಠದ ವೀರಗಂಗಾಧರ ಸ್ವಾಮೀಜಿ ಚಾಲನೆ ನೀಡಿದ್ದರು. ನಂತರ ಉತ್ಸವದಲ್ಲಿ ಪಟ್ಟಣದ ಪ್ರಮುಖ ಪ್ರಗತಿಪರ ರೈತರನ್ನು ಸನ್ಮಾನಿಸಲಾಗಿತ್ತು. ನಂತರ 2016ರಲ್ಲಿ ಶಾಸಕ ಎ.ಎಸ್,ಪಾಟೀಲ ನಡಹಳ್ಳಿ ಹಾಗೂ ಬಸನಗೌಡ ಪಾಟೀಲ ಯತ್ನಾಳ ಚಾಲನೆ ನೀಡಿ, ವಿವಿಧ ಕಾರ್ಯಕ್ರಮಗಳ ಮೂಲಕ ಯಶಸ್ವಿಗೊಳಿಸಿದ್ದರು.

2017ರಲ್ಲಿ ಚೈತ್ರಾ ಕುಂದಾಪುರ ಉತ್ಸವದಲ್ಲಿ ಭಾಗವಹಿಸಿದ್ದರು. 2018ರಲ್ಲಿ ಶಾಸಕ ಸೋಮಗೌಡ ಪಾಟೀಲ ಸಾಸನೂರ ಚಾಲನೆ ನೀಡಿದ್ದರು, ತಾಳಿಕೋಟಿಯ ಖಾಸ್ಗೇತೇಶ್ವರ ಸ್ವಾಮೀಜಿ ಆಶೀರ್ವವಚನ ನೀಡಿದ್ದರು. ನಂತರ 2019 ಮತ್ತು 2020 ರಲ್ಲಿ ಕೋವಿಡ್ ಕಾರಣದಿಂದಾಗಿ ನಾಡದೇವಿ ಉತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು. 2021 ರಲ್ಲಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಬಿಜೆಪಿ ಧುರೀಣ ಕಾಶೀನಾಥ ಮಸಬಿನಾಳರಿಂದ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು.

ಈ ಬಾರಿಯ ನಾಡದೇವಿ ಉತ್ಸವದಲ್ಲಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಬಿಜೆಪಿ ಮುಖಂಡ ಕಾಶೀನಾಥ ಮಸಬಿನಾಳ, ಎಬಿಡಿ ಫೌಂಡೇಶನ್ ಅಧ್ಯಕ್ಷ ಆನಂದಗೌಡ ದೊಡಮನಿ, ನೇತ್ರತಜ್ಞ ಪ್ರಭುಗೌಡ ಲಿಂಗದಳ್ಳಿ(ಚಬನೂರ), ಮುತ್ತತ್ತಿ ಫೌಂಡೇಷನ್ ಅಧ್ಯಕ್ಷೆ ಗೌರಮ್ಮ ಮುತ್ತತ್ತಿ, ಭೈರಿ ಫೌಂಡೇಶನ್‌ ಪ್ರಭು ಭೈರಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಉತ್ಸವದ ಅಂಗವಾಗಿ ಪ್ರತಿಷ್ಠಾಪನೆಯ ಮೂರನೇ ದಿನವಾದ ಸೋಮವಾರ ನೇತ್ರ ತಜ್ಞ ಪ್ರಭುಗೌಡರಿಂದ ಉಚಿತ ನೇತ್ರಪರೀಕ್ಷೆ ಶಿಬಿರ. ರಾತ್ರಿ 101 ಮುತ್ತೈದರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಅ.4 ರಂದು ಸಂಗೀತಗಾರರಿಂದ ವಿವಿಧ ಭಕ್ತಿಗೀತೆಗಳ ಸಂಗೀತಸಂಜೆ ನಡೆಯಲಿದೆ.

ಪ್ರತಿವರ್ಷ ನಾಡದೇವಿ ಉತ್ಸವವನ್ನು ಅತ್ಯಂತ ಭಕ್ತಿಯಿಂದ ಆಚರಿಸಲಾಗುತ್ತಿದೆ. ದೇವಿಯ ಪೂಜೆ ಐದು ದಿನಗಳ ಕಾಲ ಸಾಂಗವಾಗಿ ಸಾಗಿ ಪ್ರಸಾದ ವಿತರಣೆಯಾಗುತ್ತದೆ. ಈ ಎಲ್ಲ ಕಾರ್ಯಕ್ರಮದಲ್ಲಿ ಪಟ್ಟಣದ ಎಲ್ಲ ಸಮುದಾಯದವರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಶ್ರದ್ಧೆಯಿಂದ ಭಾಗವಹಿಸಿ ಮೆರುಗು ತರುತ್ತಾರೆ ಎಂದು ಉತ್ಸವ ಕಮಿಟಿ ಅಧ್ಯಕ್ಷ ದಿನೇಶ ಪಾಟೀಲ ಮಾಹಿತಿ ನೀಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು