ಮಂಗಳವಾರ, ಮಾರ್ಚ್ 28, 2023
23 °C
ಸಿಂದಗಿ ಉಪ ಚುನಾವಣೆ ‍ಪರಾಜಿತ ಅಭ್ಯರ್ಥಿ ಅಶೋಕ ಮನಗೂಳಿ ಆರೋಪ

ಸಿಂದಗಿ ಉಪ ಚುನಾವಣೆ: ಹಣದ ಹೊಳೆ, ಆಡಳಿತ ಯಂತ್ರ ದುರುಪಯೋಗ, ಅಶೋಕ ಮನಗೂಳಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ:  ಬಿಜೆಪಿಯವರು ಆಡಳಿತ ಯಂತ್ರ ದುರುಪಯೋಗ ಪಡಿಸಿಕೊಂಡು, ಹಣದ ಹೊಳೆ ಹರಿಸುವ ಮೂಲಕ ಗೆಲುವು ಸಾಧಿಸಿದ್ದಾರೆಯೇ ಹೊರತು ಅಭಿವೃದ್ಧಿ ಕಾರ್ಯ, ಅನುಕಂಪದಿಂದ ಅಲ್ಲ ಎಂದು ಸಿಂದಗಿ ವಿಧಾನಸಭೆ ಉಪ ಚುನಾವಣೆ ‍ಪರಾಜಿತ ಅಭ್ಯರ್ಥಿ ಅಶೋಕ ಮನಗೂಳಿ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಸೋತಿರಬಹುದು. ಸೋಲೇ ಗೆಲುವಿನ ಸೋಪಾನ ಎಂದು ತಿಳಿದುಕೊಂಡು ಕ್ಷೇತ್ರದಲ್ಲಿ ಕಟ್ಟಿ ಬೆಳಸಿ, ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಲಾಗುವುದು ಎಂದು ಹೇಳಿದರು.

ಸೋಲು–ಗೆಲುವಿಗೆ ಸಾಕಷ್ಟು ಕಾರಣಗಳಿರುತ್ತವೆ. ನಮ್ಮಿಂದ ಆಗಿರುವ ಲೋಪಗಳ ಬಗ್ಗೆ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ, ಆತ್ಮಾವಲೋಕನ ಮಾಡಿಕೊಳ್ಳಲಾಗುವುದು ಎಂದರು.

ನನ್ನ ಮತ್ತು ನಮ್ಮ ತಂದೆ ಹಾಗೂ ಕಾಂಗ್ರೆಸ್‌ ಪಕ್ಷದ ಮೇಲೆ ವಿಶ್ವಾಸವಿಟ್ಟು ಕ್ಷೇತ್ರದ ಜನರು 62,292 ಮತಗಳನ್ನು ಹಾಕುವ ಮೂಲಕ ನನಗೆ ಧೈರ್ಯ, ಶಕ್ತಿ ಕೊಟ್ಟಿದ್ದಾರೆ. ಮತ ಕ್ಷೇತ್ರದ ಜನರ ಸೇವೆ ಸದಾಕಾಲ ಮಾಡುತ್ತೇನೆ ಎಂದು ಹೇಳಿದರು.

ಚುನಾವಣೆ ವೇಳೆ ಬಿಜೆಪಿಯವರು ತಳವಾರ–ಪರಿವಾರ ಸಮಾಜಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡುವುದಾಗಿ ಆಮಿಷ ಒಡ್ಡಿದರು. ಅಲ್ಲದೇ, ಸಿಂದಗಿ, ಆಲಮೇಲವನ್ನು ಮಾದರಿ ಪಟ್ಟಣವಾಗಿ ಅಭಿವೃದ್ಧಿ ಪಡಿಸುವುದಾಗಿ ಹೇಳಿದ್ದಾರೆ. ಭರವಸೆ ಈಡೇರಿಸಲು ನಾಲ್ಕೈದು ತಿಂಗಳು ಸಮಯಾವಕಾಶ ನೀಡುತ್ತೇವೆ. ಇಲ್ಲವಾದರೆ ಪಕ್ಷದ ಮುಖಂಡರೊಂದಿಗೆ ನಿಯೋಗ ಹೋಗಿ ಮುಖ್ಯಮಂತ್ರಿ ಭೇಟಿ ಮಾಡಿ ಭರವಸೆ ಈಡೇರಿಸುವಂತೆ ಮನವಿ ಮಾಡುತ್ತೇನೆ. ಸ್ಪಂದಿಸದಿದ್ದರೆ ಹೋರಾಟ ನಡೆಸಲಾಗುವುದು ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಧೃವನಾರಾಯಣ, ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಮಾಜಿ ಶಾಸಕ ಅಪ್ಪಾಜಿ ನಾಡಗೌಡ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಚುನಾವಣೆಯಲ್ಲಿ ನನ್ನ ಪರ  ಪ್ರಚಾರ ನಡೆಸಿ, ಮತಯಾಚಿಸಿದ್ದು, ಅವರೆಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.

ಹಣ ಬಲದಿಂದ ಗೆಲುವು: ಹಣ ಬಲದ ಮೇಲೆ ಸಿಂದಗಿ ಚುನಾವಣೆ ಗೆದ್ದಿದ್ದಾರೆ ಎಂಬ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಗೆ ನನ್ನ ಸಹಮತ ಇದೆ ಎಂದು ಶಾಸಕ ಶಿವಾನಂದ ಪಾಟೀಲ ತಿಳಿಸಿದರು.

ಸಿಂದಗಿ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತ ಇರಲಿಲ್ಲ. ಪಕ್ಷದ ವರಿಷ್ಠರು ಸೇರಿದಂತೆ ಎಲ್ಲರೂ ಅಭ್ಯರ್ಥಿ ಪರ ಶ್ರಮಿಸಿದ್ದಾರೆ ಎಂದು ಹೇಳಿದರು.

ಬಿಜೆಪಿ ಆಡಳಿತಾವಧಿಯಲ್ಲಿ ಪ್ರಜಾಪ್ರಭುತ್ವ ಅಳಿವಿನ ಅಂಚಿಗೆ ತಲುಪಿದೆ. ಮಸ್ಕಿ, ಹಾನಗಲ್‌ ಜನ ಬಿಜೆಪಿಯನ್ನು ಅರ್ಥ ಮಾಡಿಕೊಂಡಷ್ಟು ಬಸವ ನಾಡು ಸಿಂದಗಿ ಜನ ಅರ್ಥ ಮಾಡಿಕೊಳ್ಳದಿರುವುದಕ್ಕೆ ನೋವಿದೆ ಎಂದರು.

ಸಿಂದಗಿ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ಕಾದು ನೋಡುತ್ತೇವೆ ಎಂದು ಹೇಳಿದರು.

***

ಬಸವ ಜನ್ಮಭೂಮಿಯ ಜನ ಇನ್ನೂ ಪ್ರಜ್ಞಾವಂತರಾಗಿಲ್ಲ. ಬಿಜೆಪಿಯಯನ್ನು ಸರಿಯಾಗಿ ಅರಿತುಕೊಂಡಿಲ್ಲ.ಬಿಜೆಪಿಯವರು ದುಡ್ಡು ಕೊಟ್ಟು ಗೆಲುವು ಸಾಧಿಸಿದ್ದಾರೆ

– ಶಿವಾನಂದ ಪಾಟೀಲ, ಶಾಸಕ, ಬಸವನ ಬಾಗೇವಾಡಿ

****

ಕಾಂಗ್ರೆಸ್‌ ಮುಖಂಡರು ಸಿಂದಗಿ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಿದ್ದೇವೆ. ಯಾವುದೇ ಭಿನ್ನಮತ ಇರಲಿಲ್ಲ, ಯಾರೂ ಅಸಹಕಾರ ನೀಡಿಲ್ಲ

– ಅಶೋಕ ಮನಗೂಳಿ, ಪರಾಜಿತ ಅಭ್ಯರ್ಥಿ, ಸಿಂದಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.