ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸವದಿ‘ ತಂತ್ರಕ್ಕೆ ಒಲಿದ ಸಿಂದಗಿ: ‘ಗುಜರಾತ್‌ ಮಾದರಿ' ಯಶಸ್ವಿ

ಸಿಂದಗಿ ಉಪ ಚುನಾವಣೆ: 'ಚುನಾವಣೆ ನಿಪುಣ‘ ಎಂಬುದನ್ನು ಸಾಬೀತು ಪಡಿಸಿದ ಲಕ್ಷ್ಮಣ ಸವದಿ
Last Updated 2 ನವೆಂಬರ್ 2021, 16:27 IST
ಅಕ್ಷರ ಗಾತ್ರ

ವಿಜಯಪುರ: ಬಿಜೆಪಿ ಗೆಲುವು ಕಷ್ಟಸಾಧ್ಯವಾಗಿದ್ದ ಸಿಂದಗಿ ವಿಧಾನಸಭೆ ಉಪ ಚುನಾವಣೆಯಲ್ಲಿ ‘ಕಮಲ’ ಜಯಭೇರಿ ಬಾರಿಸಲು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ’ತಂತ್ರ‘ಗಾರಿಕೆ ಫಲ ಎಂಬುದು ಸಾಬೀತಾಗಿದೆ.‌

ಸಿಂದಗಿ ಉಪ ಚುನಾವಣಾ ಉಸ್ತುವಾರಿಯನ್ನು ಪಕ್ಷದ ವಹಿಸಿದ ಬಳಿಕ ಅಖಾಡದಲ್ಲೇ ಬೀಡುಬಿಟ್ಟ ಲಕ್ಷ್ಮಣ ಸವದಿ ಅವರು, ಆಯ್ದ ಸಚಿವರು, ಶಾಸಕರ ತಂಡ ಕಟ್ಟಿಕೊಂಡು ಚುನಾವಣಾ ಗೆಲುವಿಗೆ ತಂತ್ರ, ಯೋಜನೆಗಳನ್ನು ಹೆಣೆದು, ಕಾಂಗ್ರೆಸ್‌ ಅನ್ನು ಹಣಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಂದಗಿ ಕ್ಷೇತ್ರವನ್ನು ಮೊದಲಿನಿಂದಲೂ ಬಲ್ಲವರಾಗಿದ್ದ ಲಕ್ಷ್ಮಣ ಸವದಿ ಅವರು ಕ್ಷೇತ್ರದಲ್ಲಿ ಯಾವ ಯಂತ್ರ ಹೂಡಿದರೆ ವಿರೋಧಿಗಳ ಹೆಡೆಮುರಿ ಕಟ್ಟಬಹುದು ಎಂಬುದನ್ನು ಅರಿತು ಅಂತೆಯೇ ಕಾರ್ಯಾಚರಣೆ ನಡೆಸಿ, ಬಿಜೆಪಿ ಮಡಿಲಿಗೆ ವಿಜಯದ ಮಾಲೆ ತೊಡಿಸಿ ತಾವೊಬ್ಬ ’ಚುನಾವಣೆ ನಿಪುಣ‘ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಸವದಿ ಅವರ ಸಾರಥ್ಯದ ತಂಡ ಉಪ ಚುನಾವಣೆಯನ್ನು ಸವಾಲಿನಂತೆ ಸ್ವೀಕರಿಸಿ, ಆಯೋಜಿಸಿದ ಚುನಾವಣಾ ರ್‍ಯಾಲಿಗಳಿಗೆ, ಮೆರವಣಿಗೆಗಳಿಗೆ, ಬಹಿರಂಗ ಸಭೆಗಳಿಗೆ, ಮನೆ,ಮನೆ ಭೇಟಿಗೆ ಲೆಕ್ಕವಿಲ್ಲ.

ಗುಜರಾತ್‌ ಮಾದರಿ:ಚುನಾವಣಾ ವಿಜಯದ ಬಳಿಕ ’ಪ್ರಜಾವಾಣಿ‘ಯೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ, ಗುಜರಾತ್‌ ಮಾದರಿ ಚುನಾವಣಾ ತಂತ್ರ ಅನುಸರಿಸಿದ ಫಲವಾಗಿ ಸಿಂದಗಿಯಲ್ಲಿ ಬಿಜೆಪಿ ಜಯಗಳಿಸಲು ಸಾಧ್ಯವಾಯಿತು ಎಂಬ ಗುಟ್ಟನ್ನು ಬಹಿರಂಗ ಪಡಿಸಿದರು.

ಸಿಂದಗಿ ಪಟ್ಟಣ ಸೇರಿದಂತೆ ಕ್ಷೇತ್ರದಲ್ಲಿ108 ಹಳ್ಳಿಗಳ ವ್ಯಾಪ್ತಿಯಲ್ಲಿ 271 ಬೂತ್‌ಗಳಿದ್ದು, ಅಲ್ಲಿರುವ ಪ್ರತಿ ಬೂತ್‌ ಸಮಿತಿಗಳು, ಪೇಜ್‌ ಪ್ರಮುಖರು, ಬೂತ್‌ ಅಧ್ಯಕ್ಷರು, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರಗಳೆಂಬ ಸಂಘಟನಾ ಸರಪಳಿಯನ್ನು ಬಲಪಡಿಸಲು ಮೊದಲ ಆದ್ಯತೆ ನೀಡಿದೆ. ಬಸವ ಕಲ್ಯಾಣದಲ್ಲೂ ಇದೇ ತಂತ್ರ ಅನುಸರಿಸಿ, ಜಯ ಗಳಿಸಿದ್ದೆವು. ಅದೇ ಮಾದರಿಯನ್ನು ಸಿಂದಗಿಯಲ್ಲಿ ಮಾಡಿದ ಪರಿಣಾಮ ಗೆಲುವು ನಮ್ಮದಾಗಿದೆ ಎಂದರು.

ಕಳೆದ ಸಾರ್ವತ್ರಿಕ ಚುನಾವಣೆಯಲ್ಲೂ ಇದೇ ಮಾದರಿ ಅನುಸರಿಸಬೇಕು ಎಂದು ರಾಷ್ಟ್ರೀಯ ನಾಯಕರು ಮನವರಿಕೆ ಮಾಡಿದ್ದರು. ಆದರೆ, ಸಂಪೂರ್ಣ ಅನುಷ್ಠಾನ ಸಾಧ್ಯವಾಗಿರಲಿಲ್ಲ. ಆದರೆ, ಬಳಿಕ ನಡೆದ ಎಲ್ಲ ಉಪ ಚುನಾವಣೆಗಳಲ್ಲಿ ಆ ಮಾದರಿ ಅನುಸರಿಸುತ್ತಿರುವ ಪರಿಣಾಮ ಬಿಜೆಪಿ ಜಯಗಳಿಸುತ್ತಿದೆ ಎಂದು ಹೇಳಿದರು.

ಒಂದು ಬೂತ್‌ನಲ್ಲಿ 30 ಪೇಜ್‌ ವೋಟರ್‌ ಲೀಸ್ಟ್‌ ಇರುತ್ತದೆ. ಒಂದು ಪೇಜ್‌ನಲ್ಲಿ 28ರಿಂದ 30 ಮತದಾರರು ಇರುತ್ತಾರೆ. ಒಂದು ಪೇಜ್‌ಗೆ ಒಬ್ಬ ಮುಖಂಡರನ್ನು ನೇಮಕ ಮಾಡಿದೆ. ಆ 30 ಮತಗಳಲ್ಲಿ ಆಯಾ ಪೇಜ್‌ ಪ್ರಮುಖರು ಕನಿಷ್ಠ ಪಕ್ಷ 20 ಮತಗಳನ್ನಾದರೂ ನಮ್ಮ ಪಕ್ಷಕ್ಕೆ ಬರುವಂತೆ ಮನವೊಲಿಸಲು ತರಬೇತಿ ನೀಡಿದ ಪರಿಣಾಮ ಅದರಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ಕ್ಷೇತ್ರದಲ್ಲಿ ಇರುವ ದೊಡ್ಡ, ಸಣ್ಣ ಸಮುದಾಯಗಳು ಸೇರಿದಂತೆ ತುಳಿತಕ್ಕೆ ಒಳಗಾದ, ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯ ಸೇರಿದಂತೆ ಅಲ್ಪಸಂಖ್ಯಾತರನ್ನು ಪರಿಗಣನೆಗೆ ತೆಗೆದುಕೊಂಡು, ಅವರೆಲ್ಲರನ್ನು ಭೇಟಿ ಮಾಡಿ, ಮನ ಪರಿವರ್ತನೆ ಮಾಡಿ ಬಿಜೆಪಿಗೆ ಮತಗಳಾಗುವಂತೆ ಶ್ರಮಿಸಿದೆ ಎಂದರು.

ಕ್ಷೇತ್ರದಲ್ಲಿ ಇರುವ ಏಳು ಜಿಲ್ಲಾ ಪಂಚಾಯ್ತಿಗಳಿಗೆ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ, ವಿ.ಸೋಮಣ್ಣ ಮತ್ತು ಶಶಿಕಲಾ ಜೊಲ್ಲೆ ಅವರನ್ನು ನಿಯುಕ್ತಿ ಮಾಡಿ, ಅವರಿಗೆ ಆಯಾ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಗಳ ಜವಾಬ್ದಾರಿ ವಹಿಸಿದೆ. ಅವರ ಜೊತೆಗೆ ಶಾಸಕರಾದ ಎ.ಎಸ್‌.ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ ಅವರನ್ನು ನಿಯುಕ್ತಿ ಮಾಡಿ, ತಳಹಂತದಲ್ಲೇ ಮತದಾರರನ್ನು ಬಿಜೆಪಿಯತ್ತ ಸೆಳೆಯಲು ಆದ್ಯತೆ ನೀಡಿದೆ ಎನ್ನುತ್ತಾರೆ ಅವರು.

32 ಸಾವಿರ ಮತದಾರರು ಇರುವ ಸಿಂದಗಿ ಪಟ್ಟಣದ ಜವಾಬ್ದಾರಿಯನ್ನು ಸ್ವತಃ ನಾನೇ ವಹಿಸಿಕೊಂಡೆ. ಪಟ್ಟಣದಲ್ಲಿರುವ ಅನೇಕ ಸಮುದಾಯಗಳನ್ನು ಸಮೀಕರಣ ಮಾಡಿದ ಪರಿಣಾಮ ಪಕ್ಷ ಅನಾಯಾಸವಾಗಿ ಗೆಲುವಿನ ದಡ ಸೇರುವಂತಾಯಿತು ಎಂದು ನಗೆ ಬೀರಿದರು.

ಜೆಡಿಎಸ್‌ ಪಡೆದ ಮತಗಳಿಂದಲೇ ಕಾಂಗ್ರೆಸ್‌ಗೆ ಸೋಲು; ಬಿಜೆಪಿಗೆ ಗೆಲುವಾಯಿತು ಎಂಬ ಮಾತು ಕೇಳಿಬರಬಾರದು ಎಂಬ ಉದ್ದೇಶದಿಂದ ಜೆಡಿಎಸ್‌, ಕಾಂಗ್ರೆಸ್‌, ಪಕ್ಷೇತರ ಅಭ್ಯರ್ಥಿಗಳು ಪಡೆದ ಮತಗಳನ್ನು ಒಟ್ಟು ಕೂಡಿದರೂ ಹೆಚ್ಚು ಮತಗಳು ಬಿಜೆಪಿಗೆ ಬರುವಂತೆ ’ವ್ಯೂಹ‘ ರಚನೆ ಮಾಡಿದೆ ಎಂದು ಅವರು ತಮ್ಮ ಚುನಾವಣಾ ತಂತ್ರಗಳನ್ನು ಬಿಚ್ಚಿಟ್ಟರು.

ಕೈಹಿಡಿಯದ ಅನುಕಂಪ, ಅಹಿಂದ:

ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗೆ ತಂದೆ, ಮಾಜಿ ಸಚಿವ ಎಂ.ಸಿ.‌ಮನಗೂಳಿ ಸಾವಿನ ಅನುಕಂಪ ಚುನಾವಣೆಯಲ್ಲಿ ಕೈಹಿಡಿಯಲಿಲ್ಲ.ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಅವರಿಗೆ ಮೂಲ ಕಾಂಗ್ರೆಸ್ಸಿಗರು ಚುನಾವಣೆಯಲ್ಲಿ ಕೈಕೊಟ್ಟಿರುವುದು ಫಲಿತಾಂಶ ಸಾಬೀತುಪಡಿಸಿದೆ.

ಸಿಂದಗಿಯಲ್ಲಿ ಇದುವರೆಗೆ ಹಿಂದುಳಿದ ವರ್ಗದವರಿಗೆ ಟಿಕೆಟ್‌ ನೀಡುತ್ತಾ ಬಂದಿದ್ದ ಕಾಂಗ್ರೆಸ್‌, ಮೊದಲ ಸಲ ಲಿಂಗಾಯತ ಅಭ್ಯರ್ಥಿಗೆ ಮಣೆ ಹಾಕಿತ್ತು. ಮತಗಳಿಕೆಯಲ್ಲಿ ಎರಡನೇ ಸ್ಥಾನಕ್ಕೇರಿದರೂ ’ಅಹಿಂದ‘ ಮತದಾರರ ವಿಶ್ವಾಸ ಗಳಿಸುವಲ್ಲಿ ವಿಫಲವಾಯಿತು.

ಕಾಂಗ್ರೆಸ್‌ ಮುಖಂಡರು ಬೃಹತ್‌ ಸಮಾವೇಶಕ್ಕೆ ಸೀಮಿತವಾದರು. ತಳಮಟ್ಟದಲ್ಲಿ ಜನರ ಮನವೊಲಿಸುವ ಕಾರ್ಯಕ್ಕೆ ಆದ್ಯತೆ ನೀಡಲಿಲ್ಲ. ಮತದಾನ ಸಮೀಪಿಸುವಾಗ ಮಾಡಿದ ಜಾತಿ ಮುಖಂಡರ ಸಮಾವೇಶ ಪ್ರಯೋಜನವಾಗಲಿಲ್ಲ.

ಬೆಲೆ ಏರಿಕೆ, ಕೋವಿಡ್‌ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ, ಕೇಂದ್ರ ಸರ್ಕಾರದ ವೈಫಲ್ಯ, ರಾಜ್ಯ ಸರ್ಕಾರದ ಭ್ರಷ್ಟಾಚಾರ, ಪೊಲೀಸ್‌ ಕೇಸರಿಕರಣ, ಕಂಬಳಿ ವಿವಾದಗಳು ಮತದಾರರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ಕ್ಷೇತ್ರ ಕಳೆದುಕೊಂಡ ಜೆಡಿಎಸ್‌:

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕುಟುಂಬವೇ ಸಿಂದಗಿಯಲ್ಲಿ ಬೀಡುಬಿಟ್ಟು ಪ್ರಚಾರ ನಡೆಸಿದರೂ ಮತದಾರರ ಒಲವು ತೋರಲಿಲ್ಲ.

ರಾಜಕೀಯದ ಗಂಧಗಾಳಿ ಗೊತ್ತಿಲ್ಲದ ಅಭ್ಯರ್ಥಿ ನಾಜಿಯಾ ಅಂಗಡಿ ಕನಿಷ್ಠ ಸ್ಪರ್ಧೆಯನ್ನೂ ಒಡ್ಡದೇ ಠೇವಣಿ ಕಳೆದುಕೊಂಡಿದ್ದಾರೆ. ಜೊತೆಗೆ ಜೆಡಿಎಸ್‌ ತನ್ನ ಕ್ಷೇತ್ರವನ್ನು ಕಳೆದುಕೊ‌ಂಡಿದೆ.

ಜೆಡಿಎಸ್‌ ಎರಡು ಭಾರಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೂ ಎಂ.ಸಿ ಮನಗೂಳಿ ಅವರ ವರ್ಚಸ್ಸಿನಿಂದ ಎಂಬುದು ಈ ಚುನಾವಣೆಯಲ್ಲಿ ಸಾಬೀತಾಗಿದೆ.

‘ಜೆಡಿಎಸ್‌ಗೆ ಈ ಕ್ಷೇತ್ರದಲ್ಲಿ ಗೆಲ್ಲುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ ಸೋಲಿಸಬೇಕು ಎಂಬುದೇ ಒಂದಂಶದ ಕಾರ್ಯಕ್ರಮವಾಗಿತ್ತು’ ಎಂಬ ಕಾಂಗ್ರೆಸ್‌ ಮುಖಂಡರ ಮಾತಿಗೆ ಮುಸ್ಲಿಂ ಮತದಾರರು ಓಗೊಟ್ಟ ಪರಿಣಾಮ ಜೆಡಿಎಸ್‌ ಹೀನಾಯ ಸೋಲು ಅನುಭವಿಸಬೇಕಾಯಿತು.

ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಲಕ್ಷ್ಮಣ ಸವದಿ, ಪಕ್ಷದ ಅಧ್ಯಕ್ಷರು, ಸಚಿವರು, ಎಲ್ಲ ನಾಯಕರ ಶ್ರಮವಹಿಸಿ ನನ್ನನ್ನು ಗೆಲ್ಲಿಸಿದ್ದಾರೆ. ಜನರಿಗೆ ನೀಡಿರುವ ಭರವಸೆ ಈಡೇರಿಸಲು ಆದ್ಯತೆ ನೀಡುತ್ತೇನೆ
– ರಮೇಶ ಭೂಸನೂರ, ವಿಜೇತ ಬಿಜೆಪಿ ಅಭ್ಯರ್ಥಿ,ಸಿಂದಗಿ

ಸಮುದಾಯ ಸಮೀಕರಣ ಮಾಡುವ ಕೆಲಸವನ್ನು ಪ್ರಮುಖವಾಗಿ ಮಾಡಿದ ಫಲವಾಗಿ ನಮಗೆ ಸಿಂದಗಿಯಲ್ಲಿ ಜಯ ಸುಲಭವಾಯಿತು

– ಲಕ್ಷ್ಮಣ ಸವದಿ, ಸಿಂದಗಿ ಚುನಾವಣಾ ಉಸ್ತುವಾರಿ

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಒಳ್ಳೆಯ ಕೆಲಸಕ್ಕೆ ಸಿಂದಗಿ ಕ್ಷೇತ್ರದ ಜನರು ಬಿಜೆಪಿಗೆ ಮನ್ನಣೆ ನೀಡಿದ್ದಾರೆ

– ಗೋವಿಂದ ಕಾರಜೋಳ, ಜಲ ಸಂಪನ್ಮೂಲ ಸಚಿವ

ಲಕ್ಷ್ಮಣ ಸವದಿ ಚುನಾವಣಾ ತಂತ್ರಗಾರಿಕೆ, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಅಧ್ಯಕ್ಷ ಕಟೀಲ್‌ ಅವರ ಸಂಘಟಿತ ಪ್ರಯತ್ನದಿಂದ ಗೆಲುವು ನಮ್ಮದಾಗಿದೆ

– ವಿಜುಗೌಡ ಪಾಟೀಲ, ಅಧ್ಯಕ್ಷ, ಕರ್ನಾಟಕ ರಾಜ್ಯ ಬೀಜ, ಸಾವಯವ ಪ್ರಮಾಣನ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT