ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಾರ್ ಯಂತ್ರ ವೀಕ್ಷಣೆಗೆ ಮುಗಿಬಿದ್ದ ಜನಸ್ತೋಮ

Last Updated 25 ಡಿಸೆಂಬರ್ 2018, 19:56 IST
ಅಕ್ಷರ ಗಾತ್ರ

ಕಗ್ಗೋಡ:ಉತ್ಸವದ ಎರಡನೇ ದಿನ ಮಂಗಳವಾರ ಎತ್ತ ನೋಡಿದರೂ ಜನಸಾಗರ. ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿದ ಜನರು, ನಂತರ ಕರಕುಶಲ ವಸ್ತುಗಳು ಸೇರಿದಂತೆ ವಿವಿಧ ವಸ್ತು ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿ ಕಣ್ತುಂಬಿಕೊಂಡರು.

ಬಾಗಲಕೋಟೆಯ ಬಿ.ವೀ.ವಿ ಸಂಘದ ವಿಶಾಲವಾದ ಪ್ರದರ್ಶನ ಕೇಂದ್ರದಲ್ಲಿ ಸೋಲಾರ್‌ ಗ್ರಾಮ ಸೇರಿದಂತೆ ವಿವಿಧ ಕೇಂದ್ರಗಳಲ್ಲಿನ ವಸ್ತು ಪ್ರದರ್ಶನ ಗಮನ ಸೆಳೆದವು.

ಬಿ.ವೀ.ವಿ ಸಂಘದ ಪ್ರದರ್ಶನ ಕೇಂದ್ರದ ಸೋಲಾರ್‌ ಗ್ರಾಮದಲ್ಲಿ ಸೋಲಾರ್ ಸಹಾಯದಿಂದ ರೊಟ್ಟಿ ಮಾಡುವ ಯಂತ್ರ, ಬಟ್ಟೆ ಹೊಲೆಯುವ ಹೊಲಿಗೆ ಯಂತ್ರವನ್ನು ವೀಕ್ಷಿಸಿದ ಅಪಾರ ಸಂಖ್ಯೆಯ ಮಹಿಳೆಯರು, ಅವುಗಳು ಕಾರ್ಯ ನಿರ್ವಹಿಸುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿದುಕೊಂಡರು.

‘ನಮ್ಮ ಮನೆಯಲ್ಲಿ ಹೊಲಿಗೆಯಂತ್ರ ಇದೆ. ಅದನ್ನು ತುಳಿದು ಬಟ್ಟೆ ಹೊಲೆಯಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಚಾಲಿತ ಯಂತ್ರ ಖರೀದಿಸಬೇಕೆಂದರೇ ಲೋಡ್ ಶೆಡ್ಡಿಂಗ್‌ನಿಂದಾಗಿ ವಿದ್ಯುತ್ ಕೈಕೊಡುತ್ತದೆ ಎಂದು ವಿದ್ಯುತ್ ಚಾಲಿತ ಯಂತ್ರ ಖರೀದಿಸಲು ಮುಂದಾಗಿಲ್ಲ.

ಉತ್ಸವದಲ್ಲಿ ಸೋಲಾರ್ ಸಹಾಯದಿಂದ ಬಟ್ಟೆ ಹೊಲೆಯುವ ಹೊಲಿಗೆ ಯಂತ್ರ ನೋಡಿದೆ. ಇದು ಗ್ರಾಮೀಣ ಪ್ರದೇಶದ ಜನರಿಗೆ ಉಪಯುಕ್ತವಾಗಿದೆ’ ಎಂದು ಪ್ರಾತ್ಯಕ್ಷಿಕೆ ವೀಕ್ಷಿಸಿದ ಜಮಖಂಡಿ ತಾಲ್ಲೂಕಿನ ತುಂಗಳದ ಸುಜಾತಾ ಬಿರಾದಾರ, ವಿಜಯಪುರದ ಶಿಕ್ಷಕಿ ಎಂ.ಬಿ.ಚೌಧರಿ ಅಭಿಪ್ರಾಯಪಟ್ಟರು.

ಗಮನ ಸೆಳೆದ ರೊಟ್ಟಿ ಮಾಡುವ ಯಂತ್ರ

ಪ್ರದರ್ಶನದಲ್ಲಿ ರೊಟ್ಟಿ ಮಾಡುವ ಯಂತ್ರ ಹೆಚ್ಚು ಗಮನ ಸೆಳೆಯಿತು. ಉತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದ ಮಹಿಳೆಯರು, ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಕುತೂಹಲದಿಂದ ಇದನ್ನು ವೀಕ್ಷಿಸಿದರು.

ಈಚೆಗೆ ರೊಟ್ಟಿ ಮಾಡಿ ಮಾರಾಟ ಮಾಡುವುದು ಒಂದು ಉದ್ದಿಮೆಯಾಗಿ ಪರಿಣಮಿಸಿದೆ. ಮಹಿಳೆಯರು ಮನೆಯಲ್ಲೇ ಬೇಡಿಕೆಗೆ ತಕ್ಕಂತೆ ನಿತ್ಯ ನೂರರಿಂದ, ಮೂರುನೂರು ರೊಟ್ಟಿ ಮಾಡಿ ಹೋಟೆಲ್‌ಗಳಿಗೆ ಹಾಗೂ ಮದುವೆ ಸೇರಿದಂತೆ ಇನ್ನಿತರ ಸಮಾರಂಭಗಳಿಗೆ ಕಳುಹಿಸುತ್ತಾರೆ.

ಸೋಲಾರ್ ಸಹಾಯದಿಂದ ರೊಟ್ಟಿ ತಯಾರಿಸುವ ಯಂತ್ರವನ್ನು ಖರೀದಿಸಿದರೆ, ವಿದ್ಯುತ್ ಕೈ ಕೊಡುತ್ತದೆ ಎಂಬ ಚಿಂತೆ ಇರುವುದಿಲ್ಲ. ಬೇಡಿಕೆಗೆ ತಕ್ಕಂತೆ ಬಿಡುವಿನ ಸಮಯದಲ್ಲಿ ದಿನಕ್ಕೆ ಸಾವಿರಾರೂ ರೊಟ್ಟಿ ತಯಾರಿಸಬಹುದು ಎಂದು ರೊಟ್ಟಿ ತಯಾರಿಕೆಯ ಪ್ರಾತ್ಯಕ್ಷಿಕೆ ವೀಕ್ಷಿಸುತಿದ್ದ ಸ್ವಸಹಾಯ ಗುಂಪಿನ ಸದಸ್ಯರು ತಿಳಿಸಿದರು.

ಸೌರಶಕ್ತಿ ಬಳಸಿಕೊಂಡು ಹಾಲು ಹಿಂಡುವ ಯಂತ್ರ, ಕಮ್ಮಾರಿಕೆ ಘಟಕ, ಸೌರಚಾಲಿತ ಪಂಪ್‌ಸೆಟ್‌ಗಳು, ಭತ್ತ ಪಾಲಿಶ್‌ ಮಾಡುವ ಘಟಕ, ಹತ್ತಿ ಬಿಡಿಸುವ ಯಂತ್ರ... ಹೀಗೆ ಕೃಷಿ ಚಟುವಟಿಕೆ ಸೇರಿದಂತೆ ಗೃಹ ಕೈಗಾರಿಕೆಗೆ ಅಗತ್ಯವಿರುವ ವಸ್ತುಗಳ ಪ್ರದರ್ಶನ ನಡೆಯಿತು.

ಕೃಷಿ ಸೇರಿದಂತೆ ಗೃಹ ಕೈಗಾರಿಕೆಯಲ್ಲಿ ಸೋಲಾರ್ ಬಳಕೆಯ ಮಹತ್ವ ತಿಳಿಸಿಕೊಡಲಾಗುತ್ತಿದೆ. ಸೋಲಾರ್ ಸಹಾಯದಿಂದ ಯಂತ್ರಗಳ ಬಳಕೆ ಮಾಡುವುದರಿಂದ ಸಮಯ, ಉಳಿತಾಯವಾಗುತ್ತದೆ, ಹೆಚ್ಚು ಆದಾಯ ತೆಗೆಯಬಹುದು ಎನ್ನುತ್ತಾರೆ ಸೋಲಾರ್ ಗ್ರಾಮದ ಉಸ್ತುವಾರಿ ಹೊತ್ತಿದ್ದ ಸೆಲ್ಕೊ ಸೋಲಾರ್ ಕಂಪನಿಯ ಪಸನ್ ಗುಮಾಸ್ತ, ಸುರೇಶ ಕುಲಕರ್ಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT