ಮಂಗಳವಾರ, ಸೆಪ್ಟೆಂಬರ್ 21, 2021
21 °C
ವಿಜಯಪುರ ಜಿಲ್ಲೆಗೆ ಮಾದರಿ ಪಿಡಿಒ ಬಸವರಾಜ ಬಬಲಾದ ಕಾರ್ಯ

ತ್ಯಾಜ್ಯವಿಲೇವಾರಿ ನೋಡಬನ್ನಿ ‘ತೆನ್ನಿಹಳ್ಳಿ’

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಇಂಡಿ ತಾಲ್ಲೂಕಿನ ತೆನ್ನಿಹಳ್ಳಿ ಗ್ರಾಮ ಪಂಚಾಯ್ತಿ ತ್ಯಾಜ್ಯ ಸಂಗ್ರಹ, ವಿಲೇವಾರಿ, ಎರೆಹುಳು ಗೊಬ್ಬರ ತಯಾರಿಕೆ, ಹಸರೀಕರಣ, ಸರ್ಕಾರಿ ಜಾಗ ಸಂರಕ್ಷಣೆ ವಿಷಯದಲ್ಲಿ ವಿನೂತನ ಪ್ರಯೋಗ ಮಾಡುವ ಮೂಲಕ ಜಿಲ್ಲೆಗೆ ಮಾದರಿಯಾಗಿದೆ.

ಹೌದು, ತೆನ್ನಿಹಳ್ಳಿ, ಗೊರನಾಳ, ಬನಹಟ್ಟಿ ಮೂರು ಹಳ್ಳಿಗಳನ್ನು ಒಳಗೊಂಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ 960 ಮನೆಗಳಿಗೆ 20 ಲೀಟರ್‌ ಸಾಮರ್ಥ್ಯದ ತಲಾ ಎರಡು ಬಕೆಟ್‌ಗಳನ್ನು ಘನತ್ಯಾಜ್ಯ ಸಂಗ್ರಹಕ್ಕಾಗಿ ನೀಡಲಾಗಿದೆ. ಪ್ರತಿ ದಿನ ಮನೆಮನೆಗೆ ತೆರಳಿ ತ್ಯಾಜ್ಯವನ್ನು ಟಿಪ್ಪರ್‌ ಮೂಲಕ ಸಂಗ್ರಹಿಸಲಾಗುತ್ತಿದೆ. 

ತೆನ್ನಿಹಳ್ಳಿಯಿಂದ ಸುಮಾರು ಒಂದೂವರೆ ಕಿ.ಮೀ.ದೂರದಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಮೂರು ಎಕರೆ ಜಾಗದಲ್ಲಿ ಘನ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲಾಗಿದೆ. ಈ ಘಟಕಕ್ಕೆ 14ನೇ ಹಣಕಾಸು ಯೋಜನೆಯಡಿ ಕಂಪೌಂಡ್‌ ನಿರ್ಮಾಣ ಮಾಡಲಾಗಿದೆ. ನಗರ, ಪಟ್ಟಣಗಳಿಗಿಂತ ಅಚ್ಚುಕಟ್ಟಾಗಿ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. 

ತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ‌ ನಾಲ್ಕು ಎರೆಹುಳು ತೊಟ್ಟಿ ನಿರ್ಮಿಸಿ, ಗೊಬ್ಬರ ಉತ್ಪಾದಿಸಲಾಗುತ್ತಿದೆ. ಅಲ್ಲದೇ, ನರೇಗಾ ಯೋಜನೆಯಡಿ ಹೊಂಗೆ, ಬೇವು, ಆಲ, ಅರಳಿ, ಹುಣಸೆ, ಬೇವು, ಚೆರಿ ಸೇರಿದಂತೆ 15 ಬಗೆಯ ಸುಮಾರು 900 ಸಸಿಗಳನ್ನು ನೆಟ್ಟು ಬೆಳಸಲಾಗಿದೆ. 

ಈ ಗಿಡಗಳಿಗೆ ಅಗತ್ಯವಿರುವ ನೀರಿಗಾಗಿ ತೆನ್ನಿಹಳ್ಳಿ ಉರ್ದು ಪ್ರೌಢಶಾಲೆ ಆವರಣದಲ್ಲಿ ಕೊಳವೆ ಬಾವಿ ಕೊರೆಯಿಸಿ, ಅಲ್ಲಿಂದ ಪೈಪ್‌ಲೈನ್‌ ಮೂಲಕ ನೀರನ್ನು ತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ನಿರ್ಮಿಸಿರುವ ಕೃಷಿ ಹೊಂಡಕ್ಕೆ ಪೂರೈಕೆ ಮಾಡಿ, ಅಲ್ಲಿಂದ ಸಸಿಗಳಿಗೂ‌ ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಬಬಲಾದ.

ಲಾಕ್‌ಡೌನ್‌ನಲ್ಲಿ ಕೆಲಸ:

ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ತೆನ್ನಿಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 26ರ ವರಗೆ 29,113 ಮಾನವ ದಿನಗಳನ್ನು ಸೃಜನೆ ಮಾಡಿ ಶೇ 112 ರಷ್ಟು ಪ್ರಗತಿ ಸಾಧಿಸಲಾಗಿದೆ ಎನ್ನುತ್ತಾರೆ ಪಿಡಿಒ ಬಬಲಾದ.

ಹಸಿರಿಕರಣಕ್ಕೆ ಆದ್ಯತೆ:

ಎರಡು ವರ್ಷಗಳಲ್ಲಿ ಗ್ರಾಮ ಪಂ‌ಚಾಯ್ತಿ ವತಿಯಿಂದ ಸರ್ಕಾರಿ ಶಾಲೆ ಮತ್ತು‌ ಸಾರ್ವಜನಿಕ‌ ಸ್ಥಳಗಳಲ್ಲಿ ಅಂದಾಜು 3 ಸಾವಿರ ಸಸಿಗಳನ್ನು ನರೇಗಾ ಯೋಜನಯಡಿ ನೆಡಲಾಗಿದ್ದು, ಎಲ್ಲ ಸಸಿಗಳಿಗೆ ಹನಿ ನೀರಿನ ವ್ಯವಸ್ಥೆ ಮಾಡುವ ಮೂಲಕ ಶೇ 100 ರಷ್ಟು ಸಸಿಗಳನ್ನು ಉಳಿಸಿ ಬೆಳೆಸಲಾಗಿದೆ.

ಗೊರನಾಳ‌ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನರೇಗಾ ಯೋಜನೆಯಡಿ‌ ಅಂದಾಜು ₹ 3 ಲಕ್ಷ ವೆಚ್ಚದಲ್ಲಿ ನೆಡುತೋಪು ನಿರ್ಮಾಣ ಮಾಡಲಾಗಿದೆ. ಗೊರನಾಳ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ತೆನ್ನಿಹಳ್ಳಿ‌ ಉರ್ದು ಪ್ರೌಢಶಾಲೆ ಆವರಣದಲ್ಲೂ ನೆಡು ತೋಪು ನಿರ್ಮಾಣ ಮಾಡುವ ಮೂಲಕ ಹಸಿರೀಕರಣಕ್ಕೆ ಆದ್ಯತೆ ನೀಡಲಾಗಿದೆ.

ಕೃಷಿ ಹೊಂಡ:

2021- 22 ನೇ ಸಾಲಿನಲ್ಲಿ ಪ್ರತಿ ರೈತರಿಗೆ ಅಂದಾಜು ₹70 ಸಾವಿರ ವೆಚ್ಚದಲ್ಲಿ ವೈಯಕ್ತಿಕ ಕಾಮಗಾರಿಗಳ ವಿಧದಲ್ಲಿ 83 ಕೃಷಿ ಹೊಂಡ ನಿರ್ಮಿಸಿರುವುದು ವಿಶೇಷ.
 
ತೆನ್ನಿಹಳ್ಳಿ ಗ್ರಾಮದ ಮಳ್ಳಿ ಹಳ್ಳದ ಬಾಂದಾರದಲ್ಲಿ ಬೇಸಿಗೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಂದಾಜು ₹ 3  ಲಕ್ಷ ವೆಚ್ಚದಲ್ಲಿ ಹೂಳೆತ್ತಲಾಗಿದೆ. ಪ್ರಸ್ತುತ ಸುರಿದ ಮಳೆಯಿಂದ ಬಾಂದಾರದಲ್ಲಿ ನೀರು ಸಂಗ್ರಹವಾಗಿದೆ.

ಗೊರನಾಳ ಸರ್ಕಾರಿ ಪ್ರಾಥಮಿಕ ಶಾಲೆಗೆ ನರೇಗಾದಡಿ ಅಂದಾಜು ₹3 ಲಕ್ಷ ವೆಚ್ಚದಲ್ಲಿ ಕಂಪೌಂಡ್‌ ನಿರ್ಮಾಣ ಮಾಡಲಾಗಿದೆ. ಗೊರನಾಳ ಸರ್ಕಾರಿ ಪ್ರೌಢಶಾಲೆಯಲ್ಲಿಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ₹ 3 ಲಕ್ಷ ವೆಚ್ಚದಲ್ಲಿ ರನ್ನಿಂಗ್‌ ಟ್ರಾಕ್‌ ನಿರ್ಮಾಣ ಮಾಡುವ ಮೂಲಕ ಮಾದರಿಯಾಗಿದೆ.

ಗ್ರಾಮ ಪಂಚಾಯ್ತಿಯ ತ್ಯಾಜ್ಯವಿಲೇವಾರಿ ಘಟಕ, ಎರೆ ಹುಳು‌ ಘಟಕ, ಕೃಷಿ ಹೊಂಡ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾ ಪಂಚಾಯ್ತಿ ಸಿಇಒ ಗೋವಿಂದರೆಡ್ಡಿ, ಉಪಕಾರ್ಯದರ್ಶಿ ಪಿ.ಡಿ. ದೇವರಮನಿ ವೀಕ್ಷಿಸಿ, ಜಿಲ್ಲೆಗೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

***

ತೆನ್ನಿಹಳ್ಳಿ ಗ್ರಾಮ ಪಂಚಾಯ್ತಿ ವಿನೂತನ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಯೋಗ ಮಾಡುವ ಪ್ರಗತಿಶೀಲ ಪಂಚಾಯ್ತಿಯಾಗಿದೆ. ಪಿಡಿಓ ಉತ್ತಮ ಕೆಲಸ ಮಾಡುತ್ತಿದ್ದಾರೆ.

ಗೋವಿಂದರೆಡ್ಡಿ

ಸಿಇಒ, ಜಿ.ಪಂ.ವಿಜಯಪುರ

***

ನರೇಗಾದಡಿ ಗ್ರಾಮಸ್ಥರಿಗೆ ಕೆಲಸ ನೀಡಿದ ಕಾರಣ ಉತ್ತಮ ಕೆಲಸ ಮಾಡಲು ಸಾಧ್ಯವಾಗಿದೆ. ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ನೆರವಿನಿಂದ ಭವಿಷ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಮಾಡಲಾಗುವುದು

–ಬಸವರಾಜ ಬಬಲಾದ

ಪಿಡಿಒ, ತೆನ್ನಿಹಳ್ಳಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು