ಗುರುವಾರ , ಸೆಪ್ಟೆಂಬರ್ 29, 2022
28 °C
ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಷಾದ

ವಿಜಯಪುರ: ಶಾಸಕರ ಹಿಂದೆ ಅಡ್ಡಾಡೊ ಶಿಕ್ಷಕರಿಗೆ ಪ್ರಶಸ್ತಿ ಬೇಡ –ಯತ್ನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಶಾಸಕರ ಹಿಂದೆ ಅಡ್ಡಾಡುವವರಿಗೆ, ಅವರ ಚುನಾವಣೆ ನಡೆಸುವವರಿಗೆ, ಊರಿನ‌ವರ ಚಾಡಿ ತಂದು ಶಾಸಕರಿಗೆ ಹೇಳುವ ಶಿಕ್ಷಕರಿಗೆ ಪ್ರಶಸ್ತಿ ನೀಡುವ ಪದ್ಧತಿ ಬದಲಾಗಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸೋಮವಾರ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯಪುರದಲ್ಲಿ ಈ ಹಿಂದೆ ಶಿಕ್ಷಕರ ವರ್ಗಾವಣೆಗೆ ಹಣ ಪಡೆಯುವ ಶಾಸಕರು ಇದ್ದರು. ಆದರೆ, ಈಗ ಆ ಪರಿಸ್ಥಿತಿ ಇಲ್ಲ ಎಂದರು.

ಡಿಡಿಪಿಐ ಕಚೇರಿ ಯಾವಾಗಲೂ ಶಿಕ್ಷಕರಿಂದ ತುಂಬಿರುತ್ತದೆ. ಇದರಿಂದ ಪಾಠ, ಪ್ರವಚನಕ್ಕೆ ಹಿನ್ನೆಡೆಯಾಗುತ್ತದೆ. ಡಿಡಿಪಿಐ ಕಾರ್ಯಾಲಯದಲ್ಲಿ ಶಿಕ್ಷಕರ ಕೆಲಸಗಳನ್ನು ಅನಗತ್ಯವಾಗಿ ವಿಳಂಬ ಮಾಡದೇ ಶೀಘ್ರ ಮಾಡಿಕೊಡಬೇಕು. ಮುಂದೆ  ಹೀಗಾಗಬಾರದು ಎಂದರು.

ಈ ಹಿಂದಿನ ಶಿಕ್ಷಣ ಸಚಿವ ಸುರೇಶ ಕುಮಾರ ಬರೀ ಮಾತನಾಡುತ್ತಿದ್ದರು, ಕೆಲಸ ಮಾಡುತ್ತಿರಲಿಲ್ಲ. ಅವರಿಗೊಬ್ಬರ ಕತರ್‌ನಾಕ್‌ ಪಿಎಸ್‌ ಇದ್ದ. ಫೋನ್‌ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಆದರೆ, ಈಗಿನ ಶಿಕ್ಷಣ ಸಚಿವ ನಾಗೇಶ್‌ ಅವರು ಗೋವಿಂದೇಗೌಡರಂತೆ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯಪುರ ನಗರದಲ್ಲಿ ಅತ್ತುತ್ತಮ ಗುರುಭವನ ನಿರ್ಮಾಣ ಮಾಡಲು ಅಗತ್ಯ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ವಿಜಯಮಹಾಂತೇಶ್ ಮಾತನಾಡಿ, ಇಂದಿನ ಯುವ ಜನ ಅಶಿಸ್ತು, ಆತ್ಮವಂಚನೆ, ಅತ್ಯಾಚಾರ, ದೊಂಬಿ, ಗಲಾಟೆಯಲ್ಲಿ ನಿರತವಾಗಿದೆ. ಆವೇಶ ಭರಿತವಾಗಿದ್ದಾರೆ. ಮೌಲ್ಯಗಳು ಮರೆಯಾಗಿವೆ. ಇದಕ್ಕೆಲ್ಲ ನಮ್ಮ ಶಿಕ್ಷಣ ವ್ಯವಸ್ಥೆ ಕಾರಣ ಎಂದರು.

ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ತಂತ್ರಜ್ಞಾನದ ಯುಗದಲ್ಲಿ ಇದ್ದೇವೆ. ಅಧ್ಯಯನ ಮಾಡಿ ತರಗತಿಗೆ ಹೋಗಬೇಕು. ರಾಜಕೀಯದಿಂದ ಹೊರಗಿರಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಶಿಕ್ಷಕರು ಹಣಕ್ಕೆ ಕೈಯೊಡ್ಡುತ್ತಿರುವುದು ಕಂಡುಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್ ಶಿಂಧೆ, ಡಿಡಿಪಿಐ ಉಮೇಶ ಶಿರಹಟ್ಟಿಮಠ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶಿರಶ್ಯಾಡ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ.ಗೌಡರ ಶಾಹೀರಾ ಬಾನು ಖಾನ್, ಮಂಜುನಾಥ ಗುಳೇದಗುಡ್ಡ ಇದ್ದರು.

***

ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುವಂತೆ ಶಿಕ್ಷಕರು ಪಾಠ ಮಾಡಬೇಕು. ಇಲ್ಲವಾದರೆ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ಬರುತ್ತದೆ. ಆಗ ಶಿಕ್ಷಕ ವೃತ್ತಿಯೂ ಉಳಿಯುವುದಿಲ್ಲ.
–ಬಸನಗೌಡ ಪಾಟೀಲ ಯತ್ನಾಳ, ಶಾಸಕ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು