ಭಾನುವಾರ, ನವೆಂಬರ್ 28, 2021
19 °C
ವಿಧಾನಸಭೆ ವಿರೋಧ ಪಕ್ಷದ ನಾಯಕ

ಬಿಜೆಪಿಯವರು ಲೂಟಿ ಗಿರಾಕಿಗಳು: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಬಿಜೆಪಿಯವರು ಲೂಟಿ ಗಿರಾಕಿಗಳು, ಚುನಾವಣೆ ವೇಳೆ ಬಂದು ದುಡ್ಡು ಕೊಡತ್ತಾರೆ. ಇದಕ್ಕೆ ಬೆಲೆ ಕೊಡಬೇಡಿ, ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸಿಂದಗಿ‌ ಪಟ್ಟಣದದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾದಗ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ದಲಿತರು ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ದಲಿತರು. ಸ್ವಾತಂತ್ರ್ಯ ಸಿಕ್ಕಾಗಿನಿಂದ ದಲಿತರು ಕಾಂಗ್ರೆಸ್‌ ಬೆಂಬಲಿಸಿಕೊಂಡು ಬಂದಿದ್ದಾರೆ. ಎಸ್‌ಸಿ, ಎಸ್‌ಟಿ ಸಮಾಜದ ಅಭಿವೃದ್ಧಿ ಮಾಡುವವರು ಕೇವಲ ಕಾಂಗ್ರೆಸ್‌ ಮಾತ್ರ ಎಂದರು.


ಸಿಂದಗಿ‌ ಪಟ್ಟಣದದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರ ಪತ್ನಿ ಅವರು ಸೆರಗೊಡ್ಡಿ ತಮ್ಮ ಪುತ್ರ ಅಶೋಕ ಮನಗೂಳಿಗೆ ಮತ ಹಾಕುವಂತೆ ಮನವಿ ಮಾಡಿದರು

ದಲಿತರ ಅಭಿವೃದ್ಧಿಗೆ ಬಿಜೆಪಿಯವರ ಕೊಡುಗೆ ಏನಿಲ್ಲ. ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ ಅವರು ನಿಮಗೆ ನ್ಯಾಯ ಕೊಡಿಸಲು ಬಿಜೆಪಿಗೆ ಹೋಗಿಲ್ಲ, ಹೊಟ್ಟೆ ಪಾಡಿಗಾಗಿ ಹೋಗಿದ್ದಾರೆ ಆರೋಪಿಸಿದರು.

ವಾಜಪೇಯ, ನರೇಂದ್ರ ಮೋದಿ, ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ ದಲಿತರಿಗಾಗಿ ಏನು ಮಾಡಿದ್ದಾರೆ ಹೇಳಲಿ. ಅಪ್ಪಿ ತಪ್ಪಿಯೂ ಬಿಜೆಪಿಗೆ ನೀವು ಮತ ಹಾಕಬೇಡಿ ಎಂದರು.

ದಲಿತರಿಗೆ ಮೀಸಲಾತಿ ಕೊಟ್ಟಿದ್ದು, ಎಸ್‌ಸಿಪಿ, ಟಿಎಸ್‌ಪಿಗೆ ಹಣ ಕೊಟ್ಟಿದ್ದು ಯಾರು? ಗುತ್ತಿಗೆಯಲ್ಲಿ ಮೀಸಲಾತಿ ಕೊಟ್ಟಿದ್ದು ಯಾರು? ಬಿಜೆಪಿಯವರಿ ನಾಚಿಕೆಯಾಗಬೇಕು ಎಂದರು.

ಕಾಂಟ್ರ್ಯಾಕ್ಟನಲ್ಲಿ ₹ 50 ಲಕ್ಷದ ವರೆಗೆ ಮೀಸಲಾತಿ ಕೊಟ್ಟೆ. ಬಾಬು ಜಗಜೀವನ ರಾಂ ಅಭಿವೃದ್ಧಿ ನಿಗಮ‌ ಮಾಡಿದ್ದು ನಮ್ಮ ಸರ್ಕಾರ. ದಯವಿಟ್ಟು ಈ ಸೋಗಲಾಡಿ, ಡೋಂಗಿಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಿಗಜಿಣಗಿ, ಕಾರಜೋಳ ಇವರ ಮಾತು ಕೇಳಬೇಡಿ ಎಂದರು.

ಬಜೆಟ್ ಗಾತ್ರ ಹೆಚ್ಚಾದಂತೆ ಎಸ್‌ಸಿ, ಎಸ್‌ಟಿ ಸಮಾಜಕ್ಕೆ ಹೆಚ್ಚು ಅನುದಾನ ಮೀಸಲಿಡಬೇಕು. ಆದರೆ, ಈಗ ಬಜೆಟ್ ಹೆಚ್ಚಾದರೂ ಅನುದಾನ ಕಡಿಮೆಯಾಗಿದೆ. ಮಿಸ್ಟರ್ ಕಾರಜೋಳ ನಿಮಗೆ ಕೇಳಲು ಧಮ್ ಇಲ್ವಾ ಎಂದು ಪ್ರಶ್ನಿಸಿದರು.

ಜಗಜೀವನ‌ ರಾಂ ಅವರು ಕೊನೆಯವರೆಗೂ ಕಾಂಗ್ರೆಸ್‌ ಸರ್ಕಾರದಲ್ಲಿ ನಿರಂತರ ಮಂತ್ರಿಯಾಗಿದ್ದರು. ದೇಶದ ಅಭಿವೃದ್ಧಿಯಲ್ಲಿ ಜಗಜೀವನ ರಾಂ ಅವರ ಪಾತ್ರ ಇದೆ. ಬಾಬು ಜಗಜೀವನ‌ರಾಂ ಅವರ ಬಗ್ಗೆ ಗೌರವ ಇದ್ದರೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.

ಸ್ವಾತಂತ್ರ್ಯ ಹೋರಾಟದ ವೇಳೆ ಬಿಜೆಪಿ ರಾಷ್ಟ್ರೀಯ ಪಕ್ಷ ಇರಲಿಲ್ಲ. 1950 ರಲ್ಲಿ ಜನ ಸಂಘ ಹುಟ್ಟಿತು, ಇದು ಆರ್‌ಎಸ್‌ಎಸ್‌ನ ರಾಜಕೀಯ ಮುಖವಾಡ. 1980ರಲ್ಲಿ ಬಿಜೆಪಿ ಪಕ್ಷ ಹುಟ್ಟಿತು. ಯಾರಾದರೂ ಬಿಜೆಪಿಗರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರಾ? ದೇಶಕ್ಕಾಗಿ ಪ್ರಾಣ ಕೊಟ್ಟಿದ್ದು ಕಾಂಗ್ರೆಸ್‌ನವರು ಮಾತ್ರ, ಬಿಜೆಪಿಗರಲ್ಲ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಅಶೋಕ‌ ಮನಗೂಳಿ ಪರ ಮತ ಚಲಾಯಿಸುವಂತೆ ಅವರು ಮನವಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ರಾಮಲಿಂಗಾರೆಡ್ಡಿ, ಧೃವನಾರಾಯಣ್, ಶಾಸಕರಾದ ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಆರ್.ಬಿ.ತಿಮ್ಮಾಪೂರ, ಉಮಾಶ್ರೀ, ವಿಧಾನ ಪರಿಷತ್‌ ಸದಸ್ಯರಾದ ಎಸ್. ರವಿ, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು