ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ: ಆಲಮಟ್ಟಿಯ ನೇತ್ರಾ ಮೇಟಿಗೆ 326ನೇ ರ‍್ಯಾಂಕ್‌

Last Updated 24 ಸೆಪ್ಟೆಂಬರ್ 2021, 16:46 IST
ಅಕ್ಷರ ಗಾತ್ರ

ವಿಜಯಪುರ: ‘ಆಡಳಿತದಲ್ಲಿ ತಂತ್ರಜ್ಞಾನ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕು ಎಂಬುದು ನನ್ನ ಮೊದಲ ಆದ್ಯತೆಯಾಗಿದೆ’ ಎಂಬುದು ಯುಪಿಎಸ್‌ಸಿ ಪರೀಕ್ಷೆಯಲ್ಲಿ 326ನೇ ರ‍್ಯಾಂಕ್‌ ಗಳಿಸಿರುವ ವಿಜಯಪುರ ಜಿಲ್ಲೆ ಆಲಮಟ್ಟಿಯ ನೇತ್ರಾ ಮೇಟಿ ಅವರ ಅಭಿಪ್ರಾಯ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಪರಿಸರ ಮತ್ತು ಮಹಿಳಾ ಪರ ಧ್ವನಿಯಾಗಬೇಕು ಎಂಬುದು ನನ್ನ ಹಂಬಲವಾಗಿದೆ’ ಎಂದು ಹೇಳಿದರು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ಸಂಪಾದಕೀಯ ನನಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರಚಲಿತ ವಿದ್ಯಾಮಾನ ವಿಭಾಗಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಹೆಚ್ಚಿನ ನೆರವಾಯಿತು’ ಎಂದು ಅವರು ಅಭಿಪ್ರಾಯಪಟ್ಟರು.

‘ಯುಪಿಎಸ್‌ಸಿ ಪರೀಕ್ಷೆಗಾಗಿ ಐದು ವರ್ಷಗಳಿಂದ ಸಿದ್ಧತೆ ನಡೆಸಿದ್ದೆ. ಹೋದ ವರ್ಷ ಸಂದರ್ಶನದ ವರೆಗೂ ಹೋಗಿ ಬಂದಿರುವೆ. ಬೆಂಗಳೂರಿನ ಎರಡು ಸಂಸ್ಥೆಗಳಲ್ಲಿ ಆನ್‌ಲೈನ್‌ ತರಬೇತಿ ಪಡೆದುಕೊಂಡಿರುವೆ’ ಎಂದು ಹೇಳಿದರು.

‘ಯುಪಿಎಸ್‌ಸಿ ರ‍್ಯಾಂಕಿಂಗ್‌ ಪ್ರಕಾರ ನನಗೆ ಎಎಎಸ್‌ ಅಥವಾ ಎಎಫ್‌ಎಸ್‌(ಭಾರತೀಯ ವಿದೇಶಾಂಗ ಸೇವೆ) ಹುದ್ದೆ ಲಭಿಸುವ ಸಾಧ್ಯತೆ ಇದೆ. ಐಎಎಸ್‌ ಅಧಿಕಾರಿಯಾಗಬೇಕು’ ಎಂಬ ಆಶಯವಿದೆ ಎಂದರು.

ಎಸ್‌ಬಿಐ ನಿವೃತ್ತ ಉದ್ಯೋಗಿ ಬಾಲಚಂದ್ರ ಮೇಟಿ ಮತ್ತು ಅಕ್ಕಮ್ಮ ಮೇಟಿ ದಂಪತಿಯ ದ್ವಿತೀಯ ಪುತ್ರಿಯಾಗಿರುವ ನೇತ್ರಾ ಮೇಟಿ ಅವರು ಆಲಮಟ್ಟಿಯ ಸಂಗಮ್‌ ನರ್ಸರಿ ಸ್ಕೂಲ್‌ನಲ್ಲಿ 1ರಿಂದ 4ರ ವರಗೆ ಹಾಗೂ ವಿಜಯಪುರದ ಪಿಡಿಜೆ ಸಂಸ್ಥೆಯಲ್ಲಿ ಐದರಿಂದ ದ್ವಿತೀಯ ಪಿಯುಸಿ, ಬೆಂಗಳೂರು ಬಸವನಗುಡಿಯ ಬಿಎಂಎಸ್‌ಸಿಇ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯೂನಿಕೇಷನ್‌ ವಿಷಯದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲೇ ಮರ್ಸಿಡಸ್‌ ಬೆಂಜ್‌ ರಿಸರ್ಚ್‌ ಅಂಡ್‌ ಡೆವಲಪ್‌ಮೆಂಟ್‌ ವಿಭಾಗದಲ್ಲಿ ಪ್ರಾಜೆಕ್ಟ್‌ ಎಂಜಿನಿಯರ್ ಆಗಿ ಮೂರು ವರ್ಷ ಕಾರ್ಯನಿರ್ವಹಿಸಿದ್ದಾರೆ.

ನೇತ್ರಾ ಅವರ ಹಿರಿಯ ಸಹೋದರಿ ಶ್ವೇತಾ ಬೆಂಗಳೂರಿನಲ್ಲಿ ಅಮೆಜಾನ್‌ ಕಂಪನಿಯಲ್ಲಿ ಉದ್ಯೋಗಿ ಹಾಗೂ ಕಿರಿಯ ಸಹೋದರಿ ಅನುಷಾ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಎಂಬಿಬಿಎಸ್‌ ದ್ವಿತೀಯ ವರ್ಷದಲ್ಲಿ ಕಲಿಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT