ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಕೋಟಾ: ಹಿಂದೂ ಮುಸ್ಲಿಂ ಭಾವೈಕ್ಯ ಬೆಸೆಯುವ ಉರುಸ್ ಇಂದಿನಿಂದ

ಭಕ್ತರಿಂದ ಮಾದಲಿ ನೈವೇದ್ಯ ಅರ್ಪಣೆ
Published 9 ಜುಲೈ 2023, 5:09 IST
Last Updated 9 ಜುಲೈ 2023, 5:09 IST
ಅಕ್ಷರ ಗಾತ್ರ

ಪರಮೇಶ್ವರ ಗದ್ಯಾಳ

ತಿಕೋಟಾ: ಹಿಂದೂ-ಮುಸ್ಲಿಂ ಧರ್ಮಗಳ ಭಾವೈಕ್ಯ ಬೆಸೆಯುವ ಸಾಮರಸ್ಯ ಕೇಂದ್ರವಾಗಿರುವ ಪಟ್ಟಣದ ಹೊರವಲಯದಲ್ಲಿರುವ ಐತಿಹಾಸಿಕ ಹಾಜಿಮಸ್ತಾನ ಹಾಗೂ ಬಡಕಲ್ ಸಾಹೇಬ್ ದರ್ಗಾ ಉರುಸ್ ಜುಲೈ 9 ರಿಂದ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ.

ಜಾತಿ, ಮತ, ಪಂಥ ಭೇದವಿಲ್ಲದೇ ಎಲ್ಲ ಧರ್ಮ ಹಾಗೂ ಜಾತಿಯವರು, ಪಟ್ಟಣದ ಹಾಗೂ ಸುತ್ತಲಿನ ಗ್ರಾಮಗಳ ಜನರು ಬಂದು ಉರುಸ್‌ನಲ್ಲಿ ಪಾಲ್ಗೊಂಡು ದೇವರಿಗೆ ಮಾದಲಿ ನೈವೇದ್ಯ ಅರ್ಪಿಸುತ್ತಾರೆ.

ತಿಕೋಟಾ ಮಹಾರಾಷ್ಟ್ರದ ಕುರಂದವಾಡ ಸಂಸ್ಥಾನದಲ್ಲಿ ತಾಲ್ಲೂಕು ಕೇಂದ್ರವಾಗಿದ್ದು, ಈಗ ನೂತನ ತಾಲ್ಲೂಕು ಆಗಿದೆ. ಅಂದಿನಿಂದ ಇಲ್ಲಿಯವರೆಗೂ ಪ್ರತಿ ವರ್ಷ ಉರುಸ್ ಅತ್ಯಂತ ವೈಭವದಿಂದ ಆಚರಿಸುತ್ತ ಬಂದಿದ್ದಾರೆ.

ವಿಶಾಲ ಆವರಣದಲ್ಲಿ ಚಾಲುಕ್ಯರ ವಾಸ್ತುಶಿಲ್ಪ ಹೊಲುವ ಕಂಬಗಳು, ಅರ್ಧ ಗೋಳಾಕಾರದ ಗುಮ್ಮಟ, ಸುತ್ತಮುತ್ತ ಮಿನಾರ್ ಹೊಂದಿದೆ. ದರ್ಗಾದ ಒಳಗೆ ಆದಿ ಕಾಲದ ಬೃಹತ್ ಬಾವಿ ಇದ್ದು, ವಿಶಾಲ ದರ್ಗಾದಲ್ಲಿ ಸುಸಜ್ಜಿತ ಕಂಬಗಳ ಮಂಟಪ ನಿರ್ಮಾಣ ಮಾಡಲಾಗಿದೆ. ಪಕ್ಕದಲ್ಲೆ ಇದ್ದ ಬಡಕಲ್ ಸಾಹೇಬ್ ದರ್ಗಾ ಕೂಡಾ ಭಕ್ತರ ಪಾಲಿನ ಆರಾಧ್ಯ ದೈವವಾಗಿದೆ. ಮೊದಲು ಈ ದರ್ಗಾ ದರ್ಶನ ಪಡೆದು ಭಕ್ತರು ಹಾಜಿಮಸ್ತಾನ ದರ್ಗಾಕ್ಕೆ ಹೋಗುವುದು ವಾಡಿಕೆಯಾಗಿದೆ.

ಹಿನ್ನೆಲೆ: ಯುದ್ಧದ ಸಂದರ್ಭದಲ್ಲಿ ಭಯಗೊಂಡಿದ್ದ ಇಬ್ಬರು ಸೂಫಿ ಸಂತರು ಈ ಸ್ಥಳಕ್ಕೆ ಬಂದು  ದರ್ಗಾ ಸ್ಥಳದಲ್ಲಿ ನೆಲೆ ನಿಂತಿದ್ದರು. ಆಗ ಪಟ್ಟಣದ ಪೀರಶೆಟ್ಟಿ ಮನೆತನದವರು ಮುತ್ತು–ರತ್ನಗಳನ್ನು ಚೀಲದಲ್ಲಿ ತುಂಬಿಕೊಂಡು ಮಾರಾಟ ಮಾಡಲು ಪಟ್ಟಣಕ್ಕೆ ಕುದುರೆ ಮೇಲೆ ಕುಳಿತು ಹೊರಟಿದ್ದರು. ಆಗ ಈ ಇಬ್ಬರೂ ಸಂತರು ಚೀಲದಲ್ಲಿ ಏನಿದೆ ಎಂದು ಕೇಳಿದಾಗ ಅವರು ಚೀಲಗಳಲ್ಲಿ ಕಲ್ಲು ಮಣ್ಣು ಇವೆ ಎಂದು ಸುಳ್ಳು ಹೇಳಿ ತೆರಳಿದರು. ಪಟ್ಟಣಕ್ಕೆ ಹೋದಾಗ ವ್ಯಾಪಾರ ಮಾಡಲು ಬಿಚ್ಚಿದ ಚೀಲಗಳಲ್ಲಿ ಕಲ್ಲು ಮಣ್ಣು ತುಂಬಿತ್ತು. ಸುಳ್ಳು ಹೇಳಿದ್ದಕ್ಕೆ ಕ್ಷಮೆ ಕೇಳಬೇಕೆಂದು ಸೂಫಿ ಸಂತರು ಇರುವ ಸ್ಥಳಕ್ಕೆ ಬಂದು ಕ್ಷಮೆ ಕೇಳಿದರು. ನಿಮ್ಮಿಬ್ಬರಿಗೆ ಈ ಸ್ಥಳದಲ್ಲಿ ಪೂಜಾ ಸ್ಥಳ ನಿರ್ಮಾಣ ಮಾಡುತ್ತೇವೆ. ಕಲ್ಲು ಮಣ್ಣು ಮತ್ತೆ ಮುತ್ತು ರತ್ನವಾಗಲಿ ಎಂದು ಹರಕೆ ಹೊತ್ತರು. ಅದರಂತೆ ದರ್ಗಾ ನಿರ್ಮಿಸಿದ್ದಾರೆ.

ಉರುಸ್ ಕಾರ್ಯಕ್ರಮ: ಜುಲೈ 9ರಿಂದ ಜುಲೈ 11ರವರೆಗೆ ನಡೆಯುವ ಭಾವೈಕ್ಯದ ಉರುಸ್ ಸಂಭ್ರಮಕ್ಕೆ ಲಕ್ಷಾಂತರ ಭಕ್ತರು ಆಗಮಿಸುವರು. 9ರಂದು ಗ್ರಾಮದ ರಾಮರಾವ್‌ ದೇಸಾಯಿ ಮನೆತನದವರಿಂದ ದೇವರಿಗೆ ಸಕಲ ವಾದ್ಯಮೇಳಗಳೊಂದಿಗೆ ಗಂಧ ಒಯ್ಯುವದು. ರಾತ್ರಿ ಕೃಷ್ಣ ಪಾರಿಜಾತ ನಾಟಕ ಪ್ರದರ್ಶನ ನೆರವೇರಲಿದೆ. 10ರಂದು ಗ್ರಾಮದ ಡಾ.ಮಲ್ಲನಗೌಡ ಮಾದಪ್ಪಗೌಡ ಪಾಟೀಲ ಮನೆತನದವರಿಂದ ದೇವರಿಗೆ ಗಲೀಪ ಕಾರ್ಯಕ್ರಮ, ಹೂವು ಇಳಿಸುವ ಕಾರ್ಯಕ್ರಮ ನಡೆಯಲಿದೆ. ಅದೇ ರಾತ್ರಿ ‘ಸಿಂಧೂರ ಲಕ್ಷ್ಮಣ’ ನಾಟಕ ನಡೆಯಲಿದೆ. 11ರಂದು ಎತ್ತಿನ ಗಾಡಿ ಸ್ಪರ್ಧೆ, ಜೋಡು ಕುದುರೆ ಸ್ಪರ್ಧೆ, ಕುಸ್ತಿ, ಕವ್ವಾಲಿ ಹಾಗೂ ಹಲವು ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ ಎಂದು ಕಮಿಟಿ ಅಧ್ಯಕ್ಷ ಜೀವಪ್ಪ ಕುರ್ಪಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT