ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ| ಗಾಂಧಿ ವಿಚಾರಧಾರೆ ಪ್ರಚಾರಕ್ಕೆ ಭವನ ಬಳಕೆ: ಜಿಲ್ಲಾಧಿಕಾರಿ ವಿಜಯಮಹಾಂತೇಶ

Published 6 ಜುಲೈ 2023, 14:51 IST
Last Updated 6 ಜುಲೈ 2023, 14:51 IST
ಅಕ್ಷರ ಗಾತ್ರ

ವಿಜಯಪುರ: ಮಹಾತ್ಮ ಗಾಂಧೀಜಿ ಅವರ ತತ್ವಾದರ್ಶ ವಿಚಾರಧಾರೆಗಳನ್ನು ಪ್ರಚುರ ಪಡಿಸಲು ಗಾಂಧಿಭವನ ಸದುಪಯೋಗವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಗಾಂಧಿ ಭವನ ನಿರ್ವಹಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಗಾಂಧಿಭವನದಲ್ಲಿ ಗಾಂಧಿ ತತ್ವ, ವಿಚಾರಧಾರೆಯನ್ನೊಳಗೊಂಡ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಲ್ಲದೇ, ಗಾಂಧಿಭವನವನ್ನು ಪ್ರವಾಸಿ ತಾಣವನ್ನಾಗಿಸಬೇಕು ಎಂದು ಹೇಳಿದರು.

ಗಾಂಧೀಜಿಯವರ ವಿಚಾರಧಾರೆವುಳ್ಳ ಸದಭಿರುಚಿಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಗಾಂಧೀಜಿ ಜೀವನ ಸ್ವಾತಂತ್ರ್ಯ ಚಳವಳಿಗಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಗಾಂಧೀಜಿಯವರ ಆಚಾರ-ವಿಚಾರ ತಿಳಿದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ‘ಗಾಂಧಿ ಭವನ’ವು ಸಮಗ್ರ ಮಾಹಿತಿಯ ಆಗರದ ಕೇಂದ್ರವಾಗಿದೆ ಎಂದರು.

ಮಹಾತ್ಮ ಗಾಂಧೀಜಿ ಅವರ ಜೀವನ ಘಟ್ಟದ ಮಾಹಿತಿ ಆಗರವನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವಂತಾಗಬೇಕು. ನಗರದಲ್ಲಿರುವ ಗಾಂಧಿ ಭವನವನ್ನು ಹೆಚ್ಚಿನ ಜನರು ವೀಕ್ಷಿಸುವಂತಾಗಬೇಕು. ಈ ನಿಟ್ಟಿನಲ್ಲಿ ಸೂಕ್ತ ಪ್ರಚಾರ ಕೈಗೊಳ್ಳಲು ನಗರದ ವಿವಿಧ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಗಾಂಧಿ ಭವನದ ವ್ಯಾಪಕ ಪ್ರಚಾರಕ್ಕಾಗಿ ಪ್ರಚಾರ ಫಲಕ ಅಳವಡಿಸಬೇಕು ಎಂದು ಹೇಳಿದರು.

ಗಾಂಧಿ ಭವನದಲ್ಲಿ ಪ್ರತಿ ತಿಂಗಳು ವಿಶೇಷವಾಗಿ ಗಾಂಧಿ ತತ್ವಾದರ್ಶ ಅವರ ಚಿಂತನೆಯ ವಿಷಯಾಧಾರಿತ ವಿವಿಧ ಕಾರ್ಯಕ್ರಮ ಹಮ್ಮಿಕೊಂಡು, ಜಿಲ್ಲೆಯ ಗಾಂಧಿ ಪ್ರಣೀತ ಕಾರ್ಯ ಚಟುವಟಿಕೆಗಳಲ್ಲಿ ಹಾಗೂ ಸಕ್ರೀಯವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ವಿವಿಧ ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗೌರವಾನ್ವಿತರನ್ನು ಆಹ್ವಾನಿಸುವುದು. ಆ ಮೂಲಕ ಗಾಂಧಿ ಭವನದ ನಿರ್ಮಾಣದ ಉದ್ದೇಶದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು, ಶಿಕ್ಷಣ ಇಲಾಖಾ ಮೂಲಕ ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಗಾಂಧೀಜಿ ಅವರ ಆದರ್ಶ ವಿಚಾರಧಾರೆಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಗಾಂಧಿ ಭವನ ವೀಕ್ಷಿಸಲು ಅವಕಾಶ ಕಲ್ಪಿಸುವುದು, ಜಿಲ್ಲೆಯ, ಶಾಲಾ, ಕಾಲೇಜು, ವಿದ್ಯಾರ್ಥಿಗಳಿಗೆ ಕ್ಷೇತ್ರ ದರ್ಶನ ಮಾಡುವ ಮೂಲಕ ಗಾಂಧೀಜಿಯವರ ತತ್ವಾದರ್ಶಗಳನ್ನು ಮಕ್ಕಳಿಗೆ ಪ್ರಚುರಪಡಿಸುವುದರೊಂದಿಗೆ ಜಿಲ್ಲೆಯ ಸಾರ್ವಜನಿಕರಿಗೆ ಗಾಂಧಿ ಭವನ ಹಾಗೂ ಉದ್ದೇಶ ಕುರಿತು ತಿಳಿಸಲು ಸದಸ್ಯರು ಸಲಹೆ ನೀಡಿದರು.

ವಿಜಯಪುರ ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಗಾಂಧಿ ಭವನದ ಸದಸ್ಯ ಕಾರ್ಯದರ್ಶಿ ಅಮರೇಶ ದೊಡಮನಿ, ನಿರ್ವಹಣಾ ಸಮಿತಿ ಸದಸ್ಯರಾದ ಪೀಟರ್ ಅಲೆಕ್ಸಾಂಡರ್, ಫಿರೋಜ್ ರೋಜಿಂದಾರ್ ಹಾಗೂ ನೇತಾಜಿ ಗಾಂಧಿ ಸಭೆಯಲ್ಲಿ ಉಪಸ್ಥಿತರಿದ್ದರು.

ಸಾರ್ವಜನಿಕರು ವಿದ್ಯಾರ್ಥಿಗಳು ವಿಜಯಪುರದ ಗಾಂಧಿ ಭವನಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡುವುದರ ಮೂಲಕ ಸದುಪಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಿ. ವಿಜಯಮಹಾಂತೇಶ ಜಿಲ್ಲಾಧಿಕಾರಿ 
ವಿಜಯಮಹಾಂತೇಶ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT