ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೀರಶೈವ, ಲಿಂಗಾಯತ ಎರಡೂ ಒಂದೇ’

ಅರಳೆಲೆ ಕಟ್ಟಿಮನಿ ಹಿರೇಮಠದ ನೂತನ ಪೀಠಾಧಿಕಾರ ಮಹೋತ್ಸವ
Last Updated 2 ಅಕ್ಟೋಬರ್ 2021, 2:16 IST
ಅಕ್ಷರ ಗಾತ್ರ

ಆಲಮಟ್ಟಿ: ವೀರಶೈವ, ಲಿಂಗಾಯತ ಎರಡೂ ಒಂದೇ, ಇವರೆಡರಲ್ಲಿ ತಾರತಮ್ಯವಿಲ್ಲದೇ ಸಕಲರೂ ಸೌಹಾರ್ದತೆ, ಧರ್ಮದಿಂದ ಬಾಳಬೇಕು. ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸಿದ ವೀರಶೈವ ಧರ್ಮ ಸಾಮರಸ್ಯ, ಸದ್ಭಾವನೆಯನ್ನು ಉಂಟು ಮಾಡಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಚಿಮ್ಮಲಗಿ ಭಾಗ-2 ಗ್ರಾಮದಲ್ಲಿ ಶುಕ್ರವಾರ ಅರಳೆಲೆ ಕಟ್ಟಿಮನಿ ಹಿರೇಮಠದ ನೂತನ ಪೀಠಾಧಿಕಾರ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು. ವೀರಶೈವ ಧರ್ಮದ ಇತಿಹಾಸ ಪರಂಪರೆ ಅಪೂರ್ವವಾದದ್ದು, ಪರಶಿವನ ಆದೇಶನುಸಾರ ಜಗದ್ಗುರು ಪಂಚಾಚಾರ್ಯರು ಭೂಮಂಡಲದಲ್ಲಿ ವೀರಶೈವ ಧರ್ಮವನ್ನು ಸಂಸ್ಥಾಪಿಸಿ ಸನ್ಮಾರ್ಗ ತೋರಿದರು ಎಂದರು.

ಚಿಮ್ಮಲಗಿಯ ನೂತನ ಶ್ರೀಗಳು, ಹಿರಿಯರ ಆದರ್ಶ, ಮಾರ್ಗದರ್ಶನದಲ್ಲಿ ಮುನ್ನಡೆದು ಧರ್ಮ, ಸಂಸ್ಕೃತಿ ಬೆಳಗಲಿ ಎಂದರು.

ನಿರ್ಗಮಿತ ಪೀಠಾಧಿಪತಿ ನೀಲಕಂಠ ಸ್ವಾಮೀಜಿ ಮಾತನಾಡಿ, ಜೀವನ ಉನ್ನತಿಗೆ ಗುರು ಹಾಗೂ ಗುರಿ ಎರಡೂ ಇರಬೇಕು, ಜಗದ್ಗುರು ರೇಣುಕಾಚಾರ್ಯರ ತತ್ವ ಸಂದೇಶ, ಬಸವಣ್ಣನವರು ಮಾಡಿದ ಧರ್ಮ ಕಾರ್ಯವನ್ನು ಸ್ಮರಿಸಿದರು.

ನೂತನ ಶ್ರೀಗಳಾದ ಸಿದ್ಧ ರೇಣುಕ ಶ್ರೀಗಳು ಮಾತನಾಡಿ, ಹಿರಿಯ ಗುರುವರ್ಯರ ಮಾರ್ಗದರ್ಶನದಲ್ಲಿ ಅರಳೆಲೆ ಕಟ್ಟಿಮನಿ ಹಿರೇಮಠವನ್ನು ಇನ್ನಷ್ಟು ಬೆಳೆಸಿ, ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗುತ್ತೇನೆ ಎಂದರು.

ನೂತನ ಶ್ರೀಗಳ ನಾಮಕರಣ: ನೂತನ ಶ್ರೀ ಸಿದ್ಧರೇಣುಕ ದೇವರ ಪಟ್ಟಾಧಿಕಾರ ಕಾರ್ಯ ಶುಕ್ರವಾರ ನಸುಕಿನ ಜಾವ 3 ಗಂಟೆಯಿಂದ ಆರಂಭಗೊಂಡಿತು. ಶಂಭುಲಿಂಗಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ನಾನಾ ವಿಧಿ ವಿಧಾನಗಳು ಜರುಗಿದವು. ಗುಂಡಕನಾಳದ ಗುರುಲಿಂಗ ಸ್ವಾಮೀಜಿ, ಮುತ್ತಗಿಯ ಪಂಡಿತಾರಾಧ್ಯ ರುದ್ರಮುನಿ ಸ್ವಾಮೀಜಿ, ನಿಡಗುಂದಿಯ ರುದ್ರಮುನಿ ಸ್ವಾಮೀಜಿ, ಇಂಗಳೇಶ್ವರದ ಭೃಂಗೇಶ್ವರ ಸ್ವಾಮೀಜಿ, ಇಟಗಿಯ ಗುರುಶಾಂತವೀರ ಸ್ವಾಮೀಜಿ ನಾಮಕರಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ನಂತರ ರಂಭಾಪುರಿ ಶ್ರೀಗಳು ದಂಡ, ಕಮಂಡಲು, ಮುದ್ರೆ, ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ನೂತನ ಶ್ರೀಗಳಿಗೆ ಪ್ರದಾನ ಮಾಡಿ, ‘ಶ್ರೀ ಷ.ಬ್ರ. ಸಿದ್ಧರೇಣುಕ ಶಿವಾಚಾರ್ಯ ಸ್ವಾಮೀಜಿಗಳು' ಎಂದು ನಾಮಕರಣ ಮಾಡಿದರು. ಇದಕ್ಕೆ ನಾಡಿನ 50 ಕ್ಕೂ ಹೆಚ್ಚು ಸ್ವಾಮೀಜಿಗಳು ಸಾಕ್ಷಿಯಾದರು.

ನೂತನ ಶ್ರೀಗಳಿಗೆ ಕಿರೀಟ ಧಾರಣೆಯ ನಂತರ ಚಿಮ್ಮಲಗಿಯ ಮೊದಲಿನ ಶ್ರೀಗಳಾದ ನೀಲಕಂಠ ಸ್ವಾಮೀಜಿ ಪೀಠದಿಂದ ಇಳಿದರು. ನೂತನ ಶ್ರೀಗಳು ಪೀಠಾರೋಹಣ ಮಾಡಿದ ನಂತರ ನೀಲಕಂಠ ಸ್ವಾಮೀಜಿ, ನೂತನ ಶ್ರೀಗಳಿಗೆ ಶಿರಸಾಷ್ಟಾಂಗ ನಮಸ್ಕರಿಸಿದ ದೃಶ್ಯಕ್ಕೆ ಸಹಸ್ರಾರು ಜನರು ಸಾಕ್ಷಿಯಾದರು.
ನಂತರ ನೂತನ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದಲ್ಲಿ ಕುಂಭದೊಂದಿಗೆ ಸಹಸ್ರಾರು ಜನರ ಮಧ್ಯೆ ಜರುಗಿತು.

ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮನಗೂಳಿ ಹಿರೇಮಠದ ಸಂಗನಬಸವ ಸ್ವಾಮೀಜಿ, ಬೆಂಗಳೂರು ವಿಭೂತಿಪುರ ಮಠದ ಡಾ ಮಹಾಂತಲಿಂಗ ಸ್ವಾಮೀಜಿ, ಬಂಥನಾಳದ ವೃಷಭಲಿಂಗ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಸ್ವಾಮೀಜಿ, ಯಂಕಂಚಿಯ ರುದ್ರಮುನಿ ಸ್ವಾಮೀಜಿ, ಸಾಸನೂರಿನ ಮಹಾಂತಲಿಂಗ ಸ್ವಾಮೀಜಿ, ದೇವರಹಿಪ್ಪರಗಿಯ ಗಂಗಾಧರ ಸ್ವಾಮೀಜಿ, ಮುಳವಾಡದ ಸಿದ್ಧಲಿಂಗ ಸ್ವಾಮೀಜಿ, ಕೈಲಾಸನಾಥ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ರೇಣುಕ ಸ್ವಾಮೀಜಿ, ಕೊಟ್ಟೂರಿನ ಡಾ. ಸಿದ್ಧಲಿಂಗ ಸ್ವಾಮೀಜಿ, ತಡವಲಗಾದ ರಾಚೋಟೇಶ್ವರ ಸ್ವಾಮೀಜಿ, ಇಟಗಿಯ ಗುರುಶಾಂತವೀರ ಸ್ವಾಮೀಜಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT