ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಐದು ಗಂಟೆಯಲ್ಲಿ 10 ಎಕರೆ ಜಮೀನು ಹರಗಿದ ರೈತರು

ಹತ್ತರಕಿಹಾಳ ಗ್ರಾಮದ ರೈತರ ಮತ್ತು ಎತ್ತುಗಳ ಸಾಮರ್ಥ್ಯಕ್ಕೆ ಮೆಚ್ಚುಗೆ
Published 10 ಆಗಸ್ಟ್ 2023, 14:07 IST
Last Updated 10 ಆಗಸ್ಟ್ 2023, 14:07 IST
ಅಕ್ಷರ ಗಾತ್ರ

ವಿಜಯಪುರ: ಬಸವನ ಬಾಗೇವಾಡಿ ತಾಲ್ಲೂಕಿನ ಹತ್ತರಕಿಹಾಳ ಗ್ರಾಮದ ರೈತರಾದ ಸಂಗಪ್ಪ ಚಿಚನಕರ ಮತ್ತು ಬಾಗಪ್ಪ ಪಡಸಲಗಿ ಅವರು ತಮ್ಮ ಜೋಡಿ ಎತ್ತುಗಳೊಂದಿಗೆ ಕೇವಲ ಐದು ಗಂಟೆಗಳಲ್ಲಿ ಒಂಟ ದಿಂಡಿನ ಸಹಾಯದಿಂದ 10 ಎಕರೆ ಜಮೀನು ಹರಗಿ ಗಮನ ಸೆಳೆದಿದ್ದಾರೆ.

ಗುರುವಾರ ಮುಂಜಾನೆ 3 ಗಂಟೆಗೆ ಆರಂಭಿಸಿ ಬೆಳಿಗ್ಗೆ 8 ಕ್ಕೆ 10 ಎಕರೆಯನ್ನು ಬಿಡುವು ಇಲ್ಲದೇ ಹರಗಿದ್ದಾರೆ. 10 ಎಕರೆ ಜಮೀನು ಹರಗಿದ ನಂತರ ಚಕ್ಕಡಿ ಗಾಡಿಯಲ್ಲಿ ಹತ್ತರಕಿಹಾಳ ಗ್ರಾಮದಿಂದ ವಿಜಯಪುರ ನಗರ ಸಮೀಪದ ಶಿವಗಿರಿ(60 ಕಿ.ಮೀ) ವರೆಗೆ ಐದು ಕ್ವಿಂಟಲ್‌ ಜೋಳವನ್ನು ಎತ್ತಿನ ಬಂಡಿಯಲ್ಲಿ ಸಾಗಿಸಿ, ಮರಳಿ ಹತ್ತರಕಿಹಾಳ ಗ್ರಾಮಕ್ಕೆ ತಲುಪಿದ್ದಾರೆ.

ಹತ್ತರಕಿಹಾಳ ಗ್ರಾಮದ ರೈತರು, ಸಾರ್ವಜನಿಕರು ಸಂಗಪ್ಪ ಚಿಚನಕರ ಮತ್ತು ಬಾಗಪ್ಪ ಪಡಸಲಗಿ ಹಾಗೂ ಎತ್ತುಗಳನ್ನು ಗ್ರಾಮದಲ್ಲಿ ಗುಲಾಲ್‌ ಎರಚಿ, ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡಿ ಸಂಭ್ರಮಿಸಿದರು.

‘ಸಾಮಾನ್ಯ ಎತ್ತುಗಳಿಗೆ 10 ಎಕರೆ ಉಳಿಮೆ ಮಾಡಲು ಕನಿಷ್ಠ 15 ಗಂಟೆ ಬೇಕಾಗುತ್ತದೆ. ಆದರೆ, ಈ ಎತ್ತುಗಳು ಕೇವಲ ಐದು ಗಂಟೆಯಲ್ಲಿ ಉಳಿಮೆ ಮಾಡಿರುವುದು ದಾಖಲೆಯೇ ಸರಿ’ ಎನ್ನುತ್ತಾರೆ ರೈತ ಸಂಗಪ್ಪ ಚಿಚನಕರ.

‘ನಮ್ಮ ಸಹೋದರ ಸಂಗಪ್ಪ ಚಿಚನಕರಗೆ ಮೊದಲಿನಿಂದಲೂ ಕೃಷಿ ಮತ್ತು ಎತ್ತುಗಳನ್ನು ಸಾಕುವಲ್ಲಿ ಹೆಚ್ಚಿನ ಆಸಕ್ತಿ. ತಮ್ಮ ಎತ್ತುಗಳ ಶಕ್ತಿ, ಸಾಮಾರ್ಥ್ಯವನ್ನು ಪ್ರದರ್ಶಿಸಬೇಕು ಎಂಬ ಉತ್ಸಾಹ ಮೊದಲಿನಿಂದ ಇತ್ತು. ಅವನ ಸ್ನೇಹಿತರು ಪಂಥಾಹ್ವಾನ ನೀಡಿದ ಮೇರೆಗೆ ಈ ಸಾಧನೆ ಮಾಡಿದ್ದಾರೆ’ ಎಂದು ಸದ್ಯ ಕಲಬುರ್ಗಿಯಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕರಾಗಿರುವ  ಹತ್ತರಕಿಹಾಳ ಗ್ರಾಮದ ಆನಂದ ಸಿದ್ದಪ್ಪ ಚಿಚನಕರ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮದ ರೈತರಾದ ಬಾಗಪ್ಪ ಪಡಸಲಗಿ, ವಿಜುಗೌಡ ಪಾಟೀಲ, ವಿಠಲ ದಳವಾಯಿ, ಶರಣು ಕಟಗಿ, ಮಹಾಂತೇಶ ಕೋಟ್ಲಿ, ವೀರೇಶ ಉನ್ನಿಬಾವಿ, ಯಮನೂರಿ ಖ್ಯಾಡದ ಹಾಗೂ ಮಲಪ್ಪ ದಂಡಿನ, ದರು ಲಗಟಿಗೇರ  ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಎತ್ತುಗಳ ಸಾಧನೆಯನ್ನು ಕೊಂಡಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT