ಗುರುವಾರ , ಅಕ್ಟೋಬರ್ 29, 2020
20 °C
ಮಳೆಯಿಂದ ನೀರು ನಿಂತು ರಾಡಿ; ಜನ, ವಾಹನ ಸಂಚಾರಕ್ಕೆ ಅಡಚಣೆ

ಗುಮ್ಮಟನಗರಿ ವಿಜಯಪುರದ ರಸ್ತೆಗಳಲ್ಲಿ ಗುಂಡಿ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಗುಮ್ಮಟನಗರದೊಳಗಿನ ಮುಖ್ಯ ರಸ್ತೆಗಳು ಹಾಗೂ ವಿವಿಧ ವಾರ್ಡ್‌ಗಳ ಮುಖ್ಯ ರಸ್ತೆಗಳು ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಇದೀಗ ಮಳೆ ನೀರು ನಿಂತು ರಾಡಿಯಾಗಿರುವುದರಿಂದ ಜನ, ವಾಹನಗಳ ಸಂಚಾರಕ್ಕೆ ತೊಡಕಾಗಿದೆ.

ಐತಿಹಾಸಿಕ ಪ್ರವಾಸಿತಾಣ ಗೋಳಗುಮ್ಮಟ ಎದುರಿನ ಸ್ಟೇಷನ್‌ ರಸ್ತೆ, ರಿಂಗ್‌ ರೋಡ್‌, ರಾಮನಗರ ರಸ್ತೆ, ನವಭಾಗ್‌ ರಸ್ತೆ, ಜೋಡು ಗುಮ್ಮಟ ಎದುರಿನ ರಸ್ತೆ, ಇಬ್ರಾಹಿಂ ರೋಜಾ ಸಂಪರ್ಕಿಸುವ ರಸ್ತೆ, ಕೆ.ಸಿ.ಮಾರ್ಕೆಟ್‌ ರಸ್ತೆ, ಜಲನಗರ ಮುಖ್ಯ ರಸ್ತೆ, ಬಬಲೇಶ್ವರ ನಾಕಾ, ಮನಗೂಳಿ ರಸ್ತೆಗಳಲ್ಲಂತೂ ಗುಂಡಿಗಳದ್ದೇ ಕಾರುಕಾರು. ಗುಂಡಿಗಳಿಂದ ತುಂಬಿರುವ ಈ ರಸ್ತೆಗಳಲ್ಲಿ ಜನರು ತಡವರಿಸುತ್ತಾ ಸಂಚರಿಸಬೇಕಾದ ಪರಿಸ್ಥಿತಿ ತಲೆದೋರಿದೆ.

ವಾಹನ ಸವಾರರು ರಸ್ತೆಯಲ್ಲಿರುವ ಗುಂಡಿಗಳನ್ನು ತಪ್ಪಿಸಲು ಅಡ್ಡದಿಡ್ಡಿ ವಾಹನಗಳನ್ನು ಚಲಾಯಿಸಿಕೊಂಡು ಹೋಗಿ ಅಪಘಾತವಾಗಿರುವ ಉದಾಹರಣೆ ಸಾಕಷ್ಟಿವೆ. ರಾತ್ರಿ ವೇಳೆಯಂತೂ ಈ ರಸ್ತೆಗಳಲ್ಲಿ ಸಂಚಾರ ನರಕಯಾತನೆಯೇ ಸರಿ. ಗುಂಡಿ ಬಿದ್ದು ರಾಡಿಯಾಗಿರುವ ರಸ್ತೆಗಳಲ್ಲಿ ಆಟೊ, ಟಂಟಂ, ಕಾರು, ಬೈಕುಗಳ ಸಂಚಾರವೂ ಕಷ್ಟವಾಗಿದೆ.

ಮುಂಗಾರು ಪೂರ್ವದಲ್ಲೇ ಗುಂಡಿಮುಚ್ಚಬೇಕಾಗಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳು, ಕೋವಿಡ್ ನೆಪದಲ್ಲಿ ಹಾಗೆಯೇ ಬಿಟ್ಟಿರುವುದರಿಂದ ಇದೀಗ ಸಣ್ಣಪುಟ್ಟ ಗುಂಡಿಗಳು ಸಹ ವಾಹನಗಳ ಭರಾಟೆಯಲ್ಲಿ ಇಡೀ ರಸ್ತೆಯನ್ನೇ ಆವರಿಸಿವೆ.

ಗುಂಡಿಗಳನ್ನು ಮುಚ್ಚಿ

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಹಾನಗರ ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ, ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಮಹಾನಗರ ಪಾಲಿಕೆ ತಕ್ಷಣ ಕ್ರಮಕೈಗೊಳ್ಳಬೇಕು. ಸದ್ಯ ಮಳೆಗಾಲ ಇರುವುದರಿಂದ ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚುವ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಹಿಂದಿನ ಮಹಾನಗರ ಪಾಲಿಕೆ ಆಡಳಿತಾವಧಿಯಲ್ಲಿ ನಗರೋತ್ಥಾನ, ಎಸ್‌ಎಫ್‌ಸಿ, 14ನೇ ಹಣಕಾಸು ಯೋಜನೆ ಸೇರಿದಂತೆ ಸುಮಾರು ₹280 ಕೋಟಿ ಮೊತ್ತದಲ್ಲಿ ನಗರದ ರಸ್ತೆಗಳ ನಿರ್ಮಾಣ ಕಾಮಗಾರಿ ನಡೆಯಿತು. ಬಹುತೇಕ ಕಾಮಗಾರಿಗಳು ಕಳಪೆಯಾಗಿದ್ದವು, ಪರಿಣಾಮ ವರ್ಷದೊಳಗೆ ರಸ್ತೆಗಳು ಕಿತ್ತುಹೋಗಿವೆ ಎಂದು ಅವರು ದೂರಿದರು.

ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳ ನಿರ್ಮಾಣದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ಪಾಲಿಕೆ ವ್ಯಾಪ್ತಿಯಲ್ಲೂ ಗುಣಮಟ್ಟದ ರಸ್ತೆ ನಿರ್ಮಾಣವಾಗಬೇಕು ಎಂದು ಮೊದಲಿನಿಂದಲೂ ಒತ್ತಾಯಿಸುತ್ತಲೇ ಬರುತ್ತಿದ್ದೇನೆ. ಆದರೆ, ಪಾಲಿಕೆ ಆಡಳಿತ ಇದನ್ನು ಕಡೆಗಣಿಸಿದ ಪರಿಣಾಮ ಇಂದು ರಸ್ತೆಗಳು ಹದಗೆಡಲು ಮುಖ್ಯ ಕಾರಣ ಎಂದು ಆರೋಪಿಸಿದರು.

ಸದ್ಯ ನಗರದ ಕೆಲವೆಡೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕಾಂಕ್ರಿಟ್‌ ರಸ್ತೆಗಳನ್ನು ನಿರ್ಮಿಸಲಾಗುತ್ತಿದ್ದು, ಅವು ಸಹ ಗುಣಮಟ್ಟದಿಂದ ಕೂಡಿಲ್ಲ. ಸರಿಯಾಗಿ ಕ್ಯೂರಿಂಗ್‌ ಮಾಡಿಲ್ಲ, ಅರೆಬರೆ ಮಾಡಲಾಗಿದೆ, ಎಲ್ಲಿಯೂ ರಸ್ತೆಗಳು ಪೂರ್ಣಗೊಳಿಸಿಲ್ಲ, ರಸ್ತೆ ಪಕ್ಕದಲ್ಲಿ ಗಟಾರಗಳನ್ನು ನಿರ್ಮಿಸಿಲ್ಲ. ಒಂದೆಡೆ ರಸ್ತೆ ನಿರ್ಮಾಣ ಮಾಡುತ್ತಿದ್ದರೆ, ಮತ್ತೊಂದೆಡೆ ಒಳಚರಂಡಿ, ವಿದ್ಯುತ್‌ ಕೇಬಲ್‌, ಟೆಲಿಕಾಂ ಕೇಬಲ್‌, ಕುಡಿಯುವ ನೀರಿನ ನಳ ಅಳವಡಿಕೆಗೆ ಅಗೆಯಲಾಗುತ್ತಿದೆ ಎಂದು ದೂರಿದರು.

ಸದ್ಯ ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಇಲ್ಲದೇ ಇರುವುದರಿಂದ ಅಧಿಕಾರಿಗಳದ್ದೇ ಕಾರುಬಾರಾಗಿದೆ. ಜನಸಾಮಾನ್ಯರ ಯಾವೊಂದು ಸಮಸ್ಯೆಗೂ ಸ್ಪಂದನೆ ಸಿಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಸದ್ಯ ರಸ್ತೆ ದುರಸ್ತಿ ಇಲ್ಲ

ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ ಬೇಸಿಗೆಯಲ್ಲಿ ರಸ್ತೆಗಳ ಗುಂಡಿ ಮುಚ್ಚಲು ಈ ಬಾರಿ ಸಾಧ್ಯವಾಗಲಿಲ್ಲ. ಸದ್ಯ ಮಳೆಗಾಲ ಇರುವುದರಿಂದ  ತೊಡಕಾಗಿದೆ. ಮಳೆ ನಿಂತ ಬಳಿಕ ಗುಂಡಿ ಮುಚ್ಚುವ ಮೂಲಕ ಸಂಚಾರಕ್ಕೆ ಅಡಚಣೆಯಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಹಾತ್ಮ ಗಾಂಧಿ ವಿಕಾಸ ಯೋಜನೆಯಡಿ ₹ 125 ಕೋಟಿ ಮೊತ್ತದಲ್ಲಿ ನಗರದ ಎಲ್ಲ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸಲು ಕ್ರೀಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರ ಅನುಮೋದನೆ ನೀಡಿದರೆ ತಕ್ಷಣ ಟೆಂಡರ್‌ ಕರೆಯಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು