ಭಾನುವಾರ, ಅಕ್ಟೋಬರ್ 2, 2022
20 °C
ವಿಜಯಪುರ ಪಾಲಿಕೆ 15ನೇ ವಾರ್ಡ್‌ ಮತದಾರರ ಸಂಖ್ಯೆ 2434, 21ನೇ ವಾರ್ಡ್‌ನ ಮತದಾರರ ಸಂಖ್ಯೆ 13,403

ವಾರ್ಡ್‌ವಾರು ಮತದಾರರ ನಿಗದಿಯಲ್ಲಿ ತಾರತಮ್ಯ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರಕಟಿಸಿರುವ ಕ್ಷೇತ್ರ ಪುನರ್ವಿಂಗಡೆ ಹಾಗೂ ಮೀಸಲಾತಿ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿರುವ ನಡುವೆ ವಾರ್ಡ್‌ವಾರು ಮತದಾರರ ನಿಗದಿಯಲ್ಲೂ ತಾರತಮ್ಯ ಎಸಗಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ಉದಾಹರಣೆಗೆ 15ನೇ ವಾರ್ಡ್‌ನಲ್ಲಿ 9358 ಜನಸಂಖ್ಯೆ ಇದ್ದರೂ ಮತದಾರರ ಸಂಖ್ಯೆ 2434 ಮಾತ್ರ! ಇದಕ್ಕೆ ತದ್ವಿರುದ್ದ ಎಂಬಂತೆ 21ನೇ ವಾರ್ಡ್‌ನಲ್ಲಿ 10,165 ಜನಸಂಖ್ಯೆ ಇದೆ. ಆದರೆ, ಮತದಾರ ಸಂಖ್ಯೆ 13,403 ಇದೆ.

ಇದೇ ರೀತಿ 26ನೇ ವಾರ್ಡ್‌ನಲ್ಲಿ ಕೇವಲ 4384, 10ನೇ ವಾರ್ಡ್‌ನಲ್ಲಿ 5360, 17ನೇ ವಾರ್ಡ್‌ನಲ್ಲಿ 5909 ಮತದಾರರು ಇದ್ದಾರೆ. ಇದಕ್ಕೆ ತದ್ವಿರುದ್ಧ ಎಂಬಂತೆ  20ನೇ ವಾರ್ಡ್‌ನಲ್ಲಿ 12,158 ಮತದಾರರು, 8ನೇ ವಾರ್ಡ್‌ನಲ್ಲಿ 11,833, 7ನೇ ವಾರ್ಡ್‌ನಲ್ಲಿ 11,468, 18ನೇ ವಾರ್ಡ್‌ನಲ್ಲಿ 11,355 ಮತದಾರರು ಇದ್ದಾರೆ!

ವಾರ್ಡ್‌ ಪುನರ್ವಿಂಗಡೆ ಹಾಗೂ ವಾರ್ಡ್‌ವಾರು ಮತದಾರರ ನಿಗದಿಯಲ್ಲಿ ವ್ಯತ್ಯಾಸವಾಗದಂತೆ ವೈಜ್ಞಾನಿಕವಾಗಿ ನಿಗದಿ ಪಡಿಸಲಾಗಿದೆ ಎಂದು ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ, ಸದ್ಯದ ವಾರ್ಡ್‌ವಾರು ಮತದಾರರ ಪಟ್ಟಿ ಅವೈಜ್ಞಾನಿಕವಾಗಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ಒಟ್ಟು 35 ವಾರ್ಡ್‌ಗಳ ಪೈಕಿ 13 ವಾರ್ಡ್‌ಗಳಲ್ಲಿ ಜನಸಂಖ್ಯೆಗಿಂತ ಮತದಾರರು ಹೆಚ್ಚಿದ್ದಾರೆ. ಇನ್ನುಳಿದ 22 ವಾರ್ಡ್‌ಗಳಲ್ಲಿ ಜನಸಂಖ್ಯೆಗಿಂತ ಮತದಾರರು ಕಡಿಮೆ ಇದ್ದಾರೆ.  

ವಾರ್ಡ್‌ವಾರು ಮತದಾರರ ನಿಗದಿಯಲ್ಲಿ ಮೇಲ್ನೋಟಕ್ಕೆ ಕಂಡುಬರುತ್ತಿರುವ ಈ ಅಜಗಜಾಂತರ ವ್ಯತ್ಯಾಸವು ಅಧಿಕಾರಿಗಳ ಲೋಪಕ್ಕೆ ಸಾಕ್ಷಿಯಾಗಿದೆ.

2011ರ ಜನಗಣತಿ ಪ್ರಕಾರ ವಿಜಯಪುರ ನಗರದಲ್ಲಿ 2,93,793 ಮತದಾರರು ಇದ್ದಾರೆ. ಈ ಮತದಾರರನ್ನು 35 ವಾರ್ಡ್‌ವಾರು ವಿಂಗಡಣೆ ಮಾಡಿದರೆ ಪ್ರತಿ ವಾರ್ಡ್‌ಗೆ ಸರಾಸರಿ 8394 ಮತದಾರರು ನಿಗದಿಯಾಗಬೇಕಿತ್ತು.

2011ರ ಜನಗಣತಿ ಪ್ರಕಾರ ವಿಜಯಪುರ ನಗರದಲ್ಲಿ 3,27,427 ಜನಸಂಖ್ಯೆ ಇದೆ. ಈ ಜನಸಂಖ್ಯೆ ಆಧರಿಸಿ ವಾರ್ಡ್‌ವಾರು ಮತದಾರರ ವಿಂಗಡಣೆ ಮಾಡಿದರೆ ಪ್ರತಿ ವಾರ್ಡ್‌ಗೆ ಸರಾಸರಿ 9,355 ಮತದಾರರು ನಿಗದಿಯಾಗಬೇಕಿತ್ತು. ಆದರೆ, ಪ್ರಸ್ತುತ ವಾರ್ಡ್‌ವಾರು ಮತದಾರರ ಪಟ್ಟಿಯಲ್ಲಿ ಭಾರೀ ಏರುಪೇರು ಇರುವುದು ಪ್ರಶ್ನಾರ್ಹವಾಗಿದೆ.

ವಿಜಯಪುರ ಮಹಾನಗರ ಪಾಲಿಕೆಯ ಒಟ್ಟು ಜನಸಂಖ್ಯೆ ಆಧರಿಸಿ ವಾರ್ಡ್‌ವಾರು ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆಯೋ ಅಥವಾ ಮತದಾರರನ್ನು ಆಧರಿಸಿ ವಾರ್ಡ್‌ವಾರು ಮತದಾರರನ್ನು ಹಂಚಿಕೆ ಮಾಡಲಾಗಿದೆಯೋ ಎಂಬ ಪ್ರಶ್ನೆ ಉದ್ಭವಿಸಿದೆ.

***

ರಾಜಕೀಯ ತಿಕ್ಕಾಟಕ್ಕೆ ವೇದಿಕೆ

ವಿಜಯಪುರ, ನಾಗಠಾಣ ಮತ್ತು ಬಬಲೇಶ್ವರ ಸೇರಿದಂತೆ ಮೂರು ವಿಧಾನಸಭಾ ಕ್ಷೇತ್ರಗಳು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಟ್ಟಿವೆ.

ನಾಗಠಾಣ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ 10,12, 14, 15, 16,17, 18ನೇ ವಾರ್ಡ್‌ಗಳಲ್ಲಿ ಕೆಲವು ಬೂತ್‌ಗಳು ನಾಗಠಾಣ ಕ್ಷೇತ್ರಕ್ಕೆ, ಇನ್ನು ಕೆಲವು ವಿಜಯಪುರ ನಗರ ಕ್ಷೇತ್ರಕ್ಕೆ ಹಂಚಿಕೆಯಾಗಿವೆ. ಇಂತಹ ವಾರ್ಡ್‌ಗಳಲ್ಲಿ ನಾಗಠಾಣ ಕ್ಷೇತ್ರದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೇ ಅಥವಾ ವಿಜಯಪುರ ಕ್ಷೇತ್ರದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೇ ಎಂಬ ಗೊಂದಲ ಹಾಗೂ ರಾಜಕೀಯ ತಿಕ್ಕಾಟಕ್ಕೆ ವೇದಿಕೆ ಒದಗಿಸಿದೆ.

ಅದೇ ರೀತಿ 4ನೇ ವಾರ್ಡ್‌ನಲ್ಲಿ ಬರುವ ಹಂಚಿನಾಳ ತಾಂಡ 1 ಮತ್ತು ಹಂಚಿನಾಳ ತಾಂಡ 2 ಬಬಲೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತವೆ. ಇದೇ ವಾರ್ಡ್‌ನ ಉಳಿದ ಬೂತ್‌ಗಳು ವಿಜಯಪುರ ನಗರಕ್ಕೆ ಸೇರಿವೆ. ಇಲ್ಲಿಯೂ ಗೊಂದಲ ಸೃಷ್ಟಿಯಾಗಿದೆ.

****

ವಾರ್ಡ್‌ ಪುನರ್ವಿಂಗಡೆ ಮತ್ತು ಮತದಾರರ ಸಂಖ್ಯೆ ನಿಗದಿ ಪ್ರಕ್ರಿಯೆ ಪೂರ್ಣಗೊಂಡು, ಅಂತಿಮ ಅಧಿಸೂಚನೆಯೂ ಆಗಿ ಬಹಳ ದಿನಗಳಾಗಿವೆ. ಈ ವ್ಯತ್ಯಾಸ ಸರಿಪಡಿಸಲು ಸದ್ಯ ಅವಕಾಶವಿಲ್ಲ

–ವಿಜಯಮಹಾಂತೇಶ್‌

ಜಿಲ್ಲಾಧಿಕಾರಿ, ವಿಜಯಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು