ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ ಮಹಾನಗರ ಪಾಲಿಕೆ: ಮತ್ತೆರಡು ಇಂದಿರಾ ಕ್ಯಾಂಟಿನ್‌, ಫುಡ್‌ಕೋರ್ಟ್ ನಿರ್ಮಾಣ

₹13.94 ಲಕ್ಷ ಮೊತ್ತದ ಉಳಿತಾಯ ಬಜೆಟ್‌ ಮಂಡನೆ
Published 20 ಫೆಬ್ರುವರಿ 2024, 15:24 IST
Last Updated 20 ಫೆಬ್ರುವರಿ 2024, 15:24 IST
ಅಕ್ಷರ ಗಾತ್ರ

ವಿಜಯಪುರ: ನಗರದಲ್ಲಿ ಹೊಸದಾಗಿ ಮತ್ತೆರಡು ಇಂದಿರಾ ಕ್ಯಾಂಟಿನ್‌, ಫುಡ್‌ ಕೋರ್ಟ್‌, ಅತ್ಯಾಧುನಿಕ ಶಾಪಿಂಗ್‌ ಕಾಂಪ್ಲೆಕ್ಸ್‌, ಪೌರ ಕಾರ್ಮಿಕರಿಗಾಗಿ ಸುವಿಧಾ ಕೇಂದ್ರ, ರಾಜ ಕಾಲುವೆ ಅಭಿವೃದ್ಧಿ, ಎರಡು ವಿದ್ಯುತ್‌ ಚಿತಾಗಾರ, ಪ್ರವಾಸಿತಾಣಗಳ ಸಂಪರ್ಕಿಸುವ ಪಾದಾಚಾರಿ ಮಾರ್ಗ ಅಭಿವೃದ್ಧಿ, ಅತ್ಯಾಧುನಿಕ ಗ್ರಂಥಾಲಯ, ಮನೆಗೊಂದು ಮರ ಅಭಿಯಾನಕ್ಕಾಗಿ ಬೇಗಂ ತಲಾಬ್‌ನಲ್ಲಿ ನರ್ಸರಿ ಹಾಗೂ ಪ್ರವಾಸೋದ್ಯಮ ಪೋತ್ಸಾಹ ಸೇರಿದಂತೆ ವಿವಿಧ ಜನಪ್ರಿಯ ಯೋಜನೆಗಳನ್ನು ಒಳಗೊಂಡ ಮಹಾನಗರ ಪಾಲಿಕೆಯ 2024–25ನೇ ಸಾಲಿನ ಬಜೆಟ್‌ ಅನ್ನು ಮಂಗಳವಾರ ಮಂಡಿಸಲಾಯಿತು.

ಒಂದು ತಿಂಗಳ ಹಿಂದಷ್ಟೇ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ನ ಮೇಯರ್‌ ಮಹೆಜಬೀನ್‌ ಹೊರ್ತಿ ಮತ್ತು ಉಪಮೇಯರ್‌ ದಿನೇಶ್‌ ಹಳ್ಳಿ ಅವರು, ನಗರದ ಜನತೆಗೆ ಯಾವುದೇ ತೆರಿಗೆ ಹೊರೆ ಇಲ್ಲದ ಹಾಗೂ ₹13.94 ಲಕ್ಷ ಮೊತ್ತದ ಉಳಿತಾಯ ಬಜೆಟ್‌ ಅನ್ನು ಮಂಡಿಸಿದರು.

ಪ್ರಮುಖ ಯೋಜನೆಗಳು: ಬಜೆಟ್‌ ಪ್ರತಿಯನ್ನು ಓದಿದ ಉಪ ಮೇಯರ್‌ ದಿನೇಶ್‌ ಹಳ್ಳಿ, ರಾಜ್ಯ ಸರ್ಕಾರ ಪಾಲಿಕೆಗೆ ಮತ್ತೆರಡು ಇಂದಿರಾ ಕ್ಯಾಂಟಿನ್‌ ಸ್ಥಾಪನೆಗೆ ಅನುಮೋದನೆ ನೀಡಿದ್ದು, ಕ್ಯಾಂಟಿನ್‌ ನಿರ್ಮಿಸಲು ₹1 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ ಎಂದರು.

ನಗರಕ್ಕೆ ಬರುವ ದೇಶ, ವಿದೇಶದ ಪ್ರವಾಸಿಗರು ಟಾಂಗಾದಲ್ಲಿ ತೆರಳಿ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಟಾಂಗಾಗಳನ್ನು ರಥದಂತೆ ಆಕರ್ಷಣೆಗೊಳಿಸಲು ಟಾಂಗಾ ಓಡಿಸುವ ಬಡ ಕುಟುಂಬಗಳನ್ನು ಉತ್ತೇಜಿಸಲು ₹15 ಲಕ್ಷ ಮೀಸಲಿಡಲಾಗಿದೆ ಎಂದು ತಿಳಿಸಿದರು.

ನಗರದ ಪ್ರವಾಸಿತಾಣಗಳನ್ನು ಒಂದೇ ಮಾರ್ಗದಲ್ಲಿ ತರುವ ಉದ್ದೇಶದಿಂದ ಸೆಟಲೈಟ್‌ ಬಸ್‌ ನಿಲ್ದಾಣದಿಂದ ಇಬ್ರಾಹಿಂ ರೋಜಾ, ಮೀನಾಕ್ಷಿ ಚೌಕ, ತಾಜಬಾವಡಿ, ಬಸ್‌ ನಿಲ್ದಾಣ, ಚಾರ್‌ಲೈಟ್‌ ಹಕ್ಕಿಂ ಚೌಕ್‌ ಮೂಲಕ ಗೋಳಗುಮ್ಮಟ ಮಾರ್ಗವನ್ನು ಆಕರ್ಷಣೀಯಗೊಳಿಸಲು ರಸ್ತೆ, ಪಾದಾಚಾರಿ ಮಾರ್ಗವನ್ನು ₹10 ಕೋಟಿ ಅನುದಾನದಲ್ಲಿ ಸೌಂದರ್ಯೀಕಣಗೊಳಿಸಲು ಉದ್ದೇಶಿಸಲಾಗಿದೆ.

ಇಬ್ರಾಹಿಂ ಆದಿಲ್‌ ಶಾಹಿ ವೃತ್ತದ ಹತ್ತಿರ, ಹಾಸಿಂಪೀರ ರಸ್ತೆ, ಕೊಂಚಿಕೊರವರ ಓಣಿ, ಹಮಾಲರ ಕಾಲೊನಿಯಲ್ಲಿ ₹ 50 ಲಕ್ಷ ವೆಚ್ಚದಲ್ಲಿ ಮಹಾದ್ವಾರ ನಿರ್ಮಾಣ.

ನಗರದಲ್ಲಿ ಉನ್ನತ ವ್ಯಾಸಂಗ ಮಾಡುವ ಪದವೀಧರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ₹ 50 ಲಕ್ಷದಲ್ಲಿ ಸುಸಜ್ಜಿತವಾದ ಗ್ರಂಥಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ.

ಪಾಲಿಕೆ ವ್ಯಾಪ್ತಿಯ ಅಂಗನವಾಡಿಗಳನ್ನು ₹ 50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ, ಮಕ್ಕಳಿಗೆ ಅವಶ್ಯಕ ಸಲಕರಣೆಗಳನ್ನು ನೀಡಲು ಉದ್ದೇಶಿಸಲಾಗಿದೆ.

ನಗರದಲ್ಲಿ ₹ 30 ಲಕ್ಷ ವೆಚ್ಚದಲ್ಲಿ ಎರಡು ವಿದ್ಯುತ್‌ ಚಿತಾಗಾರ ನಿರ್ಮಿಸಲು ಹಾಗೂ ₹ 40 ಲಕ್ಷ ಅನುದಾನದಲ್ಲಿ ಎರಡು ಶವ ಸಾಗಾಟ(ಮುಕ್ತಿ ವಾಹನ) ವಾಹನಗಳನ್ನು ಖರೀದಿಸಲು ಅನುದಾನ ಮೀಸಲಿಡಲಾಗಿದೆ.

₹20 ಲಕ್ಷ ವೆಚ್ಚದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ವಲಯಗಳನ್ನು ಘೋಷಣೆ ಮಾಡುವ ಜೊತೆಗೆ ಫುಡ್‌ ಕೋರ್ಟ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಹಾಗೂ ಉದ್ಯೋಗಕ್ಕಾಗಿ ಸಹಾಯಧನ ನೀಡಲು ₹ 5 ಲಕ್ಷ ಹಾಗೂ ಸಮುದಾಯ ಭವನಗಳ ಉನ್ನತೀಕರಣ ಹಾಗೂ ಅವಶ್ಯಕ ಸಲಕರಣೆಗಳನ್ನು ಒದಗಿಸಲು ₹ 5 ಲಕ್ಷ ಅನುದಾನ ಮೀಸಲಿಡಲಾಗಿದೆ. 

ನಗರದಲ್ಲಿರುವ ಒಳಚರಂಡಿ ದುರಸ್ತಿ ಹಾಗೂ ಹೊಸದಾಗಿ ಒಳಚರಂಡಿ ನಿರ್ಮಾಣಕ್ಕೆ ₹ 2 ಕೋಟಿ, ಪಾಲಿಕೆ ವ್ಯಾಪ್ತಿಯ ಉದ್ಯಾನಗಳ ನಿರ್ವಹಣೆಗೆ ₹ 50 ಲಕ್ಷ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.

ಕೋಟೆಗೋಡೆ ಸೌಂದರ್ಯೀಕರಣ

ವಿಜಯಪುರ: ನಗರದ ಐತಿಹಾಸಿಕ ಕೋಟೆ ಗೋಡೆಯ ಪಕ್ಕದಲ್ಲಿರುವ ಕಂದಕವನ್ನು ಸ್ವಚ್ಛಗೊಳಿಸಿ ಅಭಿವೃದ್ಧಿ ಪಡಿಸಿ ಕೋಟೆ ಗೋಡೆಯ ಸೌಂದರ್ಯೀಕರಣ ಹಾಗೂ ರಕ್ಷಣೆ ಜೊತೆಗೆ ಹಿರಿಯ ನಾಗರಿಕರಿಗೆ ಮತ್ತು ಚಿಕ್ಕ ಮಕ್ಕಳಿಗೆ ವಿಶ್ರಾಂತಿ ಹಾಗೂ ವಾಯು ವಿಹಾರಕ್ಕಾಗಿ ₹1 ಕೋಟಿ ಮೊತ್ತದಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ ಎಂದು ಮೇಯರ್‌ ಮಹೆಜಬಿನ್‌ ಹೊರ್ತಿ ತಿಳಿಸಿದರು. ನಗರ ಹಸಿರೀಕರಣ ಯೋಜನೆಯಡಿ ಮನೆಗೊಂದು ಮರ ಅಭಿಯಾನ ಹಮ್ಮಿಕೊಳ್ಳಲು ಉದ್ದೇಶಿಸಿದ್ದು ಈ ಹಿನ್ನೆಲೆಯಲ್ಲಿ ಬೇಗಂ ತಲಾಬ್‌ನಲ್ಲಿ ನರ್ಸರಿ ನಿರ್ಮಿಸಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಸಸಿಗಳನ್ನು ನೀಡಲು ₹5 ಲಕ್ಷ ಮೀಸಲಿರಿಸಲಾಗಿದೆ ಎಂದರು.

ಸಿದ್ದೇಶ್ವರ ಶ್ರೀ ಸ್ಮರಣಾರ್ಥ ವೃತ್ತ 

ವಿಜಯಪುರ: ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಸ್ಮರಣಾರ್ಥ ವೃತ್ತ ನಿರ್ಮಾಣ ಮಾಡಲು ₹ 20 ಲಕ್ಷ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಮನೆಮನೆ ಕಸ ಸಂಗ್ರಹಕ್ಕೆ ಅಗತ್ಯ ಇರುವ ಹೊಸ ವಾಹನಗಳ ಖರೀದಿ ದುರಸ್ತಿಗಾಗಿ ₹ 1 ಕೋಟಿ ಸ್ವಚ್ಛ ಭಾರತ ಯೋಜನೆಯಡಿ ಪಾಲಿಕೆಯ ಸ್ಟಾರ್‌ ರೇಟಿಂಗ್‌ ಹೆಚ್ಚಿಸುವ ಉದ್ದೇಶದ ಯೋಜನೆಗಳಿಗಾಗಿ ₹ 10 ಲಕ್ಷ  ವಾರ್ಡ್‌ವಾರು ಸಮಿತಿಗಳನ್ನು ರಚಿಸಲು ₹10 ಲಕ್ಷ ಇಬ್ರಾಹಿಂಪುರ ರೈಲ್ವೆ ಓವರ್‌ ಬ್ರಿಡ್ಜ್‌ ಕೆಳಗಡೆ ಬಾಸ್ಕೆಟ್‌ ಬಾಲ್‌ ಮೈದಾನ ಫುಡ್‌ ಕೋರ್ಟ್‌ ನಿರ್ಮಾಣಕ್ಕೆ  ₹10 ಲಕ್ಷ ಅನುದಾನ ಹಂಚಿಕೆ ಮಾಡಲಾಗಿದೆ.

ಶಾಪಿಂಗ್‌ ಕಾಂಪ್ಲೆಕ್ಸ್‌ ನಿರ್ಮಾಣ

ವಿಜಯಪುರ: ನಗರದಲ್ಲಿ ₹ 3 ಕೋಟಿ ಅನುದಾನದಲ್ಲಿ ಹೊಸದಾಗಿ ಶಾಪಿಂಗ್‌ ಕಾಂಪ್ಲೆಕ್ಸ್‌ ನಿರ್ಮಿಸಲು ಪಾಲಿಕೆ ಮುಂದಾಗಿದೆ. ನಗರದಲ್ಲಿ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆಗೆ  ಪೇ ಅಂಡ್‌ ಪಾರ್ಕ್‌ ವ್ಯವಸ್ಥೆ ಮಾಡಲು ₹ 10 ಲಕ್ಷ ಡಿಜಿಟಲ್‌ ಜಾಹೀರಾತು ಫಲಕಗಳ ಅಳವಡಿಕೆಗೆ ₹ 10 ಲಕ್ಷ ನಗರದ ಮಧ್ಯದಲ್ಲಿ ಇರುವ ಪುರಾತನ ರಾಜ ಕಾಲುವೆಯನ್ನು ಅಭಿವೃದ್ಧಿ ಪಡಿಸಲು ₹1 ಕೋಟಿ ಕೊಳೆಗೇರಿಗಳಲ್ಲಿ  ವಿದ್ಯುತ್‌ ಕಂಬಗಳಿಗಿರುವ ವೈರ್‌ಗಳನ್ನು ಬದಲಾಯಿಸಿ ಕೇಬಲ್‌ ಅಳವಡಿಸಲು ₹ 50 ಲಕ್ಷ ಅನುದಾನವನ್ನು ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗಿದೆ.

ಪೌರಕಾರ್ಮಿಕರಿಗೆ ಸುವಿಧಾ ಕೇಂದ್ರ

ವಿಜಯಪುರ: ಪಾಲಿಕೆ ವ್ಯಾಪ್ತಿಯ ಪೌರಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ವಿಶ್ರಾಂತಿ ಪಡೆಯಲು ಸುಸಜ್ಜಿತವಾದ ಸೌಲಭ್ಯಗಳೊಂದಿಗೆ ಸುವಿಧಾ ಕೇಂದ್ರ ನಿರ್ಮಾಣಕ್ಕೆ ₹ 1 ಕೋಟಿ ಮೀಸಲಿಡಲಾಗಿದೆ. ಮಹಾನಗರ ಪಾಲಿಕೆಯಲ್ಲಿ ಇ–ಆಫೀಸ್‌ ತಂತ್ರಾಂಶವನ್ನು ಅಳಡಿಸಲು ₹ 10 ಲಕ್ಷ ಅನುದಾನ ಮೀಸಲಿಡಲಾಗಿದೆ. ಪಾಲಿಕೆಯಲ್ಲಿ ಬಯೋ ಮೆಟ್ರಿಕ್‌ ಮತ್ತು ಫೇಸ್‌ ರೀಡಿಂಗ್‌ ಮಷಿನ್‌ ಅಳವಡಿಸಲು ₹ 10 ಲಕ್ಷ  ಪಾಲಿಕೆಯ ತಾಂತ್ರಿಕ ಹಾಗೂ ಆರೋಗ್ಯ ಶಾಖೆಯ ಅಧಿಕಾರಿಗಳ ಕೆಲಸದ ಕ್ಷಮತೆ ಹೆಚ್ಚಿಸಲು ತರಬೇತಿಗಾಗಿ ₹ 5 ಲಕ್ಷ ಒದಗಿಸಲಾಗಿದೆ. ಪ್ರತಿ ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರಿಗೆ ಗ್ರಾಹಕರಿಗೆ ಅನುಕೂಲವಾಗುವಂತೆ ಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಕಲ್ಪಿಸಲು ₹ 5 ಲಕ್ಷ ಬೀದಿ ವ್ಯಾಪಾರಸ್ಥರಿಗೆ ಛತ್ರಿ ಒದಗಿಸಲು ₹ 10 ಲಕ್ಷ ನಿರಾಶ್ರಿತರ ಕೇಂದ್ರ ನಿರ್ವಹಣೆಗೆ ₹ 25 ಲಕ್ಷ ಹಾಗೂ ಪತ್ರಿಕಾಭವನ ನವೀಕರಣಕ್ಕಾಗಿ ₹ 5 ಲಕ್ಷ ಅನುದಾನ ಮೀಸಲಿಡಲಾಗಿದೆ.

ಜನಪರ ಅಭಿವೃದ್ಧಿ ಪರ ಬಜೆಟ್ ಮಂಡಿಸಿದ್ದೇನೆ. ಪಾಲಿಕೆಗೆ ರಾಜ್ಯ ಸರ್ಕಾರದಿಂದ ₹ 100 ಕೋಟಿ ವಿಶೇಷ ಅನುದಾನ ಲಭಿಸಲಿದೆ. ಇದರಿಂದ ನಗರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
-ದಿನೇಶ್ ಹಳ್ಳಿ, ಉಪ ಮೇಯರ್
₹ 500 ಕೋಟಿ ವಿಶೇಷ ಅನುದಾನಕ್ಕಾಗಿ ರಾಜ್ಯ ಸರ್ಕಾರಕ್ಕೆ ಪಾಲಿಕೆ ನಿಯೋಗದಿಂದ ಮನವಿ ಮಾಡಲಾಗಿತ್ತು. ಆದರೆ ಬಜೆಟ್‌ನಲ್ಲಿ ನಯಾ ಪೈಸೆ ಕೊಡದಿರುವುದು ಖಂಡನೀಯ. ಒತ್ತಡ ಹೇರಬೇಕಿದೆ
-ರಾಹುಲ್ ಜಾದವ್, ಬಿಜೆಪಿ ಸದಸ್ಯ
ಹೊಸ ಇಂದಿರಾ ಕ್ಯಾಂಟಿನ್ ಆರಂಭಕ್ಕೆ ತಕರಾರು ಇಲ್ಲ. ಆದರೆ ಇಂದಿರಾ ಕ್ಯಾಂಟೀನ್ ಅನುಕೂಲಸ್ಥರ ಪಾಲಾಗುತ್ತಿದೆ. ಇದರ ದುರುಪಯೋಗ ತಡೆಯಲು ಆದ್ಯತೆ ನೀಡಬೇಕು
-ಪ್ರೇಮಾನಂದ ಬಿರಾದಾರ, ಬಿಜೆಪಿ ಸದಸ್ಯ
ಪಾಲಿಕೆ ವ್ಯಾಪ್ತಿಯ ಬೀದಿ ದೀಪಗಳನ್ನು ಪಿಪಿಪಿ ಮಾದರಿಯಲ್ಲಿ ನಿರ್ವಹಣೆಗೆ ಕೊಡಲು ಈಗಾಗಲೇ ಮೂರು ಬಾರಿ ಟೆಂಡರ್‌ ಆದರೂ ನನೆಗುದಿಗೆ ಬಿದ್ದಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಆದ್ಯತೆ ನೀಡಬೇಕು
-ಶಿವರುದ್ರ ಬಾಗಲಕೋಟೆ, ಬಿಜೆಪಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT