ಭಾನುವಾರ, ನವೆಂಬರ್ 27, 2022
26 °C
ಪತ್ರಕರ್ತರ ಸಂಘದ ರಾಜ್ಯ ಸಮಾವೇಶದ ಲೋಗೊ ಸಿಎಂ ಅನಾವರಣ

ಆರೇ ತಿಂಗಳಲ್ಲಿ ವಿಜಯಪುರ ಸ್ಮಾರ್ಟ್ ಸಿಟಿ: ಯತ್ನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಮುಖ್ಯಮಂತ್ರಿ ಬೊಮ್ಮಾಯಿ ನಗರದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ. ಇನ್ನಾರು ತಿಂಗಳಲ್ಲಿ ವಿಜಯಪುರ ಸ್ಮಾರ್ಟ್ ಸಿಟಿ ಆಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ₹ 454 ಕೋಟಿ ಮೊತ್ತದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಲೋಕಾರ್ಪಣೆ, ಶಂಕುಸ್ಥಾಪನೆ ಹಾಗೂ ಜೆಎಸ್‌ಎಸ್‌ ಆಸ್ಪತ್ರೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಶ್ರೀ ಸಿದ್ದೇಶ್ವರ ಲೋಕ ಕಲ್ಯಾಣ ಟ್ರಸ್ಟ್‌ ಪ್ರಾರಂಭಿಸಿರುವ ಜೆಎಸ್‌ಎಸ್ ಆಸ್ಪತ್ರೆಯನ್ನು ಶೀಘ್ರದಲ್ಲೇ 1008 ಬೆಡ್ ಆಸ್ಪತ್ರೆಯಾಗಿಸಲಾಗುವುದು. ವಿಜಯಪುರದಲ್ಲಿ ಸರ್ಕಾರ ಆರಂಭಿಸಲು ಉದ್ದೇಶಿಸಿರುವ ಸರ್ಕಾರಿ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ನಿರ್ವಹಣೆಯನ್ನು ಸಂಸ್ಥೆಗೆ ನೀಡುವಂತೆ ಅವರು ಮನವಿ ಮಾಡಿದರು.

ವಿಜಯಪುರ ಜಿಲ್ಲೆಯ ಅಭಿವೃದ್ಧಿಗೆ ₹ 500 ಕೋಟಿ, ವಿಜಯಪುರ ನಗರಕ್ಕೆ ₹ 100 ಕೋಟಿ ನೀಡಬೇಕು, ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ನೀಡಬೇಕು, ದ್ರಾಕ್ಷಿ ಮಂಡಳಿ ಹಾಗೂ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಸಿಎಂಗೆ ಕೋರಿದರು.

ದಿವಂಗತ ಅನಂತಕುಮಾರ್ ಅವರಂತೆ ಸಚಿವ ಪ್ರಹ್ಲಾದ ಜೋಶಿ ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿದ್ದಾರೆ. ಅವರು ಹೇಗೇ ಹೇಳುತ್ತಾರೊ ಹಾಗೆ ನಡೆಯುತ್ತೇವೆ. ನಮ್ಮನ್ನು ಅವರು ಒಟ್ಟಿಗೆ ಕರೆದುಕೊಂಡು ಹೋಗಬೇಕು ಎಂದು ಮನವಿ ಮಾಡಿದರು.

ಭವಿಷ್ಯದ ಬಸವನ ಬಾಗೇವಾಡಿಯ ನಾಯಕ ಅಪ್ಪು ಗೌಡ ಪಾಟೀಲ ಮನಗೂಳಿ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಆಶೀರ್ವಚನ ನೀಡಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಆನಂದ್ ಸಿಂಗ್, ಸಿ.ಸಿ.ಪಾಟೀಲ, ಶಾಸಕರಾದ ವೀರಣ್ಣ ಚರಂತಿಮಠ, ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ದ್ರಾಕ್ಷಿ ಮಂಡಳಿ ಅಧ್ಯಕ್ಷ ರವಿ ನಾರಾಯಣ ರೆಡ್ಡಿ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ ಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್ ಶಿಂಧೆ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಇದ್ದರು.

ಲೋಗೊ ಅನಾವರಣ: ವಿಜಯಪುರ ನಗರದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಾವೇಶದ ಲೋಗೊವನ್ನು ಮುಖ್ಯಮಂತ್ರಿ ಬೊಮ್ಮಾಯಿ ಅನಾವರಣಗೊಳಿಸಿದರು.

ಶ್ರದ್ಧಾಂಜಲಿ:

ಇತ್ತೀಚೆಗೆ ಅಕಾಲಿಕವಾಗಿ ನಿಧನರಾದ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರಿಗೆ ಕಾರ್ಯಕ್ರಮದ ಆರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಿಎಂ ಕಾರ್ಯಕ್ರಮಕ್ಕೆ ಮಳೆ ಅಡ್ಡಿ 
ವಿಜಯಪುರ:
ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ ಭಾರೀ ಗಾಳಿಯೊಂದಿಗೆ ಧಾರಾಕಾರ ಮಳೆ ಆಯಿತು.

ನೂತನ ಜೆಎಸ್ ಎಸ್ ಆಸ್ಪತ್ರೆ ಆವರಣದಲ್ಲಿ ಕಾರ್ಯಕ್ರಮಕ್ಕಾಗಿ ಹಾಕಲಾಗಿದ್ದ ಬೃಹತ್ ಪೆಂಡಾಲ್ ಶೀಟ್‌ಗಳು ಭಾರಿ ಗಾಳಿಗೆ ಅಲುಗಾಡಿತು. ಮಳೆಯಿಂದ ಪೆಂಡಾಲ್ ಸೋರಿತು. ಪ್ಲಾಸ್ಟಿಕ್ ಕುರ್ಚಿಗಳನ್ನು ತಲೆ ಮೇಲೆ ಆಶ್ರಯವಾಗಿ ಇಟ್ಟು ಕೊಳ್ಳುವ ಮೂಲಕ ಜನರು ಮಳೆಯಿಂದ ರಕ್ಷಣೆ ಪಡೆದರು.  

ಮಳೆ, ಗಾಳಿ ಆರ್ಭಟದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ತರಾತುರಿಯಲ್ಲಿ ಭಾಷಣ ಮಾಡಿದರು. ಸಚಿವರಿಗೆ ಮಾತನಾಡಲು ಅವಕಾಶ ಲಭಿಸಲಿಲ್ಲ. ಗಾಳಿ, ಮಳೆ ಆರ್ಭಟದಿಂದ ಕೆಲ ಹೊತ್ತು ಆತಂಕ ಮನೆ ಮಾಡಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು